ADVERTISEMENT

ನನ್ನ ಹೆಸರು ಬಂದಾಗ ಭಾವುಕನಾಗಿದ್ದೆ: ಕೃಷ್ಣಪ್ಪ ಗೌತಮ್

ಐಪಿಎಲ್‌ ಹರಾಜಿನಲ್ಲಿ ₹ 9.25 ಕೋಟಿ ಗಳಿಸಿದ ಕನ್ನಡಿಗ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 16:02 IST
Last Updated 19 ಫೆಬ್ರುವರಿ 2021, 16:02 IST
ಕೃಷ್ಣಪ್ಪ ಗೌತಮ್
ಕೃಷ್ಣಪ್ಪ ಗೌತಮ್   

ಅಹಮದಾಬಾದ್: ’ಹರಾಜು ಪ್ರಕ್ರಿಯೆ ಯನ್ನು ಟಿವಿಯಲ್ಲಿ ನೋಡುತ್ತಿದ್ದೆ. ಆ ಸಂದರ್ಭದಲ್ಲಿ ನನ್ನ ಹೆಸರು ಬಂದಾಗ ಭಾವೋದ್ವೇಗಕ್ಕೆ ಒಳಗಾಗಿದ್ದೆ. ಅತ್ತ ಮನೆಯಲ್ಲಿ ಅಪ್ಪ, ಅಮ್ಮ ಮತ್ತು ಪತ್ನಿ ಸಂತಸದಿಂದ ಕಣ್ಣೀರು ಹಾಕಿದ್ದರು‘ ಎಂದು ಕರ್ನಾಟಕ ಕ್ರಿಕೆಟ್ ತಂಡದ ಆಲ್‌ರೌಂಡರ್ ಕೃಷ್ಣಪ್ಪ ಗೌತಮ್ ಹೇಳಿದ್ದಾರೆ.

ಗುರುವಾರ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಗೌತಮ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡವು ₹ 9.25 ಕೋಟಿಗೆ ಖರೀದಿಸಿದೆ.

ಸದ್ಯ ಅಹಮದಾಬಾದಿನಲ್ಲಿರುವ ಭಾರತ ತಂಡದ ನೆಟ್ಸ್‌ ಬೌಲರ್ ಆಗಿರುವ ಗೌತಮ್, ಇಎಸ್‌ಪಿಎನ್ ಕ್ರಿಕ್‌ಇನ್ಫೋದೊಂದಿಗೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ADVERTISEMENT

’ಗುರುವಾರ ಅಹಮದಾಬಾದ್‌ಗೆ ಬಂದು ಸ್ವಲ್ಪ ಸಮಯ ಆಗಿತ್ತು. ಹೋಟೆಲ್‌ನಲ್ಲಿ ಟಿವಿ ಆನ್ ಮಾಡಿದಾಗ, ನನ್ನ ಹೆಸರು ಬರುತ್ತಿತ್ತು. ಆ ಹಂತದಲ್ಲಿ ಪ್ರತಿಯೊಂದು ಕ್ಷಣವೂ ನನ್ನ ಭಾವನೆಗಳು ಏರಿಳಿಯುತ್ತಿದ್ದವು. ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ನನ್ನ ಕೋಣೆಯ ಬಾಗಿಲು ಬಡಿದರು. ಒಳಬಂದವರೇ ಆಲಂಗಿಸಿಕೊಂಡು ಅಭಿನಂದಿಸಿದರು‘ ಎಂದು ಗೌತಮ್ ಹೇಳಿದರು.

ಗೌತಮ್ ₹ 20 ಲಕ್ಷ ಮೂಲಬೆಲೆ ಹೊಂದಿದ್ದರು. ಆಲ್‌ರೌಂಡರ್‌ ಖರೀದಿಗೆ ಕೋಲ್ಕತ್ತ ನೈಟ್ ರೈಡರ್ಸ್‌ ಮತ್ತು ಸನ್‌ರೈಸರ್ಸ್‌ ಹೈದರಾಬಾದ್ ಪೈಪೋಟಿ ಗಗನಕ್ಕೇರಿತು. ಆಗ ಸಿಎಸ್‌ಕೆ ಕೂಡ ಈ ಪೈಪೋಟಿಗೆ ಧುಮುಕಿ ಮೇಲುಗೈ ಸಾಧಿಸಿತು.

32 ವರ್ಷದ ಗೌತಮ್ ಐಪಿಎಲ್‌ನಲ್ಲಿ 2018ರಿಂದ ಇಲ್ಲಿಯವರೆಗೆ 24 ಪಂದ್ಯಗಳನ್ನು ಆಡಿದ್ದಾರೆ. 186 ರನ್ ಗಳಿಸಿದ್ದಾರೆ. ಆಫ್‌ಸ್ಪಿನ್ನರ್ ಆಗಿರುವ ಗೌತಮ್ 13 ವಿಕೆಟ್‌ಗಳನ್ನು ಗಳಿಸಿದ್ದಾರೆ.

ಅವರು ಎರಡು ವರ್ಷ ರಾಜಸ್ಥಾನ್ ರಾಯಲ್ಸ್‌ ತಂಡದಲ್ಲಿದ್ದರು. ಹೋದ ವರ್ಷ ಕಿಂಗ್ಸ್‌ ಇಲೆವನ್ ಪಂಜಾಬ್ (ಪಂಜಾಬ್ ಕಿಂಗ್ಸ್) ತಂಡದಲ್ಲಿ ಆಡಿದ್ದರು. ಪಂಜಾಬ್ ತಂಡದಲ್ಲಿ ಎರಡು ಪಂದ್ಯಗಳಲ್ಲಿ ಆಡುವ ಅವಕಾಶ ಲಭಿಸಿತ್ತು.

ಭಾರತ ಎ ತಂಡದಲ್ಲಿ ಆಡಿರುವ ಗೌತಮ್, ಇನ್ನೂ ರಾಷ್ಟ್ರೀಯ ಸೀನಿಯರ್ ತಂಡಕ್ಕೆ ಕಾಲಿಟ್ಟಿಲ್ಲ.

’ಮಹೇಂದ್ರಸಿಂಗ್ ಧೋನಿ ನಾಯಕತ್ವದ ತಂಡದಲ್ಲಿ ಆಡುವುದು ದೊಡ್ಡ ಗೌರವದ ವಿಷಯ. ಅವರಿಂದ ಕಲಿಯುವುದು ಬಹಳಷ್ಟಿದೆ. ನನ್ನ ಆಟವನ್ನು ಉನ್ನತ ಹಂತಕ್ಕೆ ಬೆಳೆಸಿಕೊಳ್ಳಲು ಇದು ನೆರವಾಗಲಿದೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.