ADVERTISEMENT

ಮೊಣಕಾಲಿಗೆ ಗಾಯ– ಏಷ್ಯಾ ಕಪ್‌ನಿಂದ ಜಡೇಜಾ ಹೊರಕ್ಕೆ, ಅಕ್ಷರ್ ಪಟೇಲ್‌ಗೆ ಸ್ಥಾನ

ಪಿಟಿಐ
Published 2 ಸೆಪ್ಟೆಂಬರ್ 2022, 16:00 IST
Last Updated 2 ಸೆಪ್ಟೆಂಬರ್ 2022, 16:00 IST
ಐಎಎನ್‌ಎಸ್ ಚಿತ್ರ
ಐಎಎನ್‌ಎಸ್ ಚಿತ್ರ   

ದುಬೈ: ಮೊಣಕಾಲು ಗಾಯಕ್ಕೊಳಗಾಗಿರುವ ಆಲ್‌ರೌಂಡರ್ ರವೀಂದ್ರ ಜಡೇಜಾ ಏಷ್ಯಾ ಕಪ್ ಸರಣಿಯ ಉಳಿದ ಪಂದ್ಯಗಳಿಂದ ಹೊರಗುಳಿದಿದ್ಧಾರೆ. ಅವರ ಬದಲಿಗೆ ಅಕ್ಷರ್ ಪಟೇಲ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ.

ಆಗಸ್ಟ್ 28ರಂದು ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 29 ಎಸೆತಗಳಲ್ಲಿ 35 ರನ್ ಸಿಡಿಸಿದ ಜಡೇಜಾ ಭಾರತದ 5 ವಿಕೆಟ್ ಅಂತರದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಹಾಂಗ್‌ಕಾಂಗ್‌ ವಿರುದ್ಧ ಬ್ಯಾಟಿಂಗ್ ಅವಕಾಶ ಸಿಕ್ಕಿರಲಿಲ್ಲ. ಬೌಲಿಂಗ್‌ನಲ್ಲಿ 15 ರನ್ ನೀಡಿ 1 ವಿಕೆಟ್ ಪಡೆದಿದ್ದರು.

ADVERTISEMENT

‘ಆಯ್ಕೆ ಸಮಿತಿಯು ಇನ್ನುಳಿದ ಏಷ್ಯಾ ಕಪ್ ಪಂದ್ಯಗಳಿಗೆ ರವೀಂದ್ರ ಜಡೇಜಾ ಬದಲಿಗೆ ಅಕ್ಷರ್ ಪಟೇಲ್ ಅವರನ್ನು ಆಯ್ಕೆ ಮಾಡಿದೆ’ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

‘ಬಲಗಾಲಿನ ಮೊಣಕಾಲು ಗಾಯಕ್ಕೆ ಒಳಗಾಗಿರುವ ರವೀಂದ್ರ ಜಡೇಜಾ ಅವರು ಸರಣಿಯಿಂದ ಹೊರಗುಳಿದಿದ್ದು, ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ಧಾರೆ’ಎಂದು ಪ್ರಕಟಣೆ ತಿಳಿಸಿದೆ.

ಜಡೇಜಾ ಯಾವ ಪಂದ್ಯದಲ್ಲಿ ಗಾಯಗೊಂಡಿದ್ದಾರೆ ಎಂಬ ಬಗ್ಗೆ ಬಿಸಿಸಿಐ ವಿವರಗಳನ್ನು ನೀಡಿಲ್ಲ. ಆದರೆ, ಬುಧವಾರ ಹಾಂಗ್ ಕಾಂಗ್ ವಿರುದ್ಧದ ಭಾರತದ ಕೊನೆಯ ಗ್ರೂಪ್ ಎ ಪಂದ್ಯದ ವೇಳೆ ಗಾಯಗೊಂಡಿರಬಹುದು ಎನ್ನಲಾಗಿದೆ.

ಇತ್ತೀಚೆಗೆ ಮುಕ್ತಾಯಗೊಂಡ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಅಕ್ಷರ್ ಪಟೇಲ್ ಆಡಿದ್ದರು. ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ಸರಣಿಯಲ್ಲೂ ಮೈದಾನಕ್ಕೆ ಇಳಿದಿದ್ದರು.

ಅಕ್ಟೋಬರ್–ನವೆಂಬರ್‌ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ–20 ವಿಶ್ವಕಪ್ ಹೊತ್ತಿಗೆ ಜಡೇಜಾ ಚೇತರಿಸಿಕೊಳ್ಳುವ ವಿಶ್ವಾಸದಲ್ಲಿ ತಂಡದ ಆಡಳಿತ ಮಂಡಳಿ ಇದೆ.

ಭಾನುವಾರ ಭಾರತ ತಂಡವು ಏಷ್ಯಾ ಕಪ್‌ನ ಮೊದಲ ಸೂಪರ್ –4 ಪಂದ್ಯವನ್ನು ಆಡಲಿದೆ.

ಭಾರತ ತಂಡ ಇಂತಿದೆ: ರೋಹಿತ್ ಶರ್ಮಾ(ನಾಯಕ), ಕೆ.ಎಲ್. ರಾಹುಲ್(ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯಾ, ಅಕ್ಷರ್ ಪಟೇಲ್, ಆರ್. ಅಶ್ವಿನ್, ಯಜುವೇಂದ್ರ ಚಾಹಲ್, ರವಿ ಬಿಷ್ಣೋಯಿ, ಭುವನೆಶ್ವರ್ ಕುಮಾರ್, ಅರ್ಶ್‌ದೀಪ್ ಸಿಂಗ್ ಮತ್ತು ಆವೆಶ್ ಖಾನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.