ಕೊಪ್ಪಳ: ಕೊನೆಯ ಐದು ಓವರ್‌ಗಳಲ್ಲಿ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಜೈ ಬಸವ ಜೈ ಭೀಮ ತಂಡ, ಶರಣು ಬಾರಕೇರ ಸ್ಮರಣಾರ್ಥ ನಡೆದ ಕೊಪ್ಪಳ ಪ್ರೀಮಿಯರ್ ಲೀಗ್ (ಕೆಪಿಎಲ್) ಕ್ರಿಕೆಟ್ ಟೂರ್ನಿಯ ದ್ವಿತೀಯ ಆವೃತ್ತಿಯ ಚಾಂಪಿಯನ್ ಆಯಿತು.
ತಾಲ್ಲೂಕು ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಜೈ ಬಸವ ತಂಡ ಐದು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ಕೊಪ್ಪಳ ಕಿಂಗ್ಸ್ ತಂಡ ನಿಗದಿತ 15 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿತು. ಸವಾಲಿನ ಗುರಿ ಬೆನ್ನು ಹತ್ತಿದ ಜೈ ಬಸವ ತಂಡ 32 ರನ್ ಕಲೆ ಹಾಕುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ಆತಂಕಕ್ಕೆ ಸಿಲುಕಿತ್ತು.
ಈ ವೇಳೆ ಜೈ ಬಸವ ತಂಡದ ಮಂಜುನಾಥ ಕಿಡಾಳ (ಅಜೇಯ 43, 29ಎಸೆತ, 3 ಸಿಕ್ಸರ್) ಮತ್ತು ಸೈಯದ್ ಸಮೀರ್ (ಅಜೇಯ 34, 17 ಎಸೆತ, 1 ಬೌಂಡರಿ, 2 ಸಿಕ್ಸರ್) ತಂಡವನ್ನು ಅಪಾಯದಿಂದ ಪಾರು ಮಾಡಿದರಲ್ಲದೇ, ಗೆಲುವಿನ ರೂವಾರಿಯೂ ಆದರು. ಈ ಜೋಡಿ ಆರನೇ ವಿಕೆಟ್ ಜೊತೆಯಾಟದಲ್ಲಿ 67 ರನ್ ಕಲೆಹಾಕಿತು. ಅಂತಿಮವಾಗಿ ಜೈ ಬಸವ 14.2 ಓವರ್‌ಗಳಲ್ಲಿ ಗುರಿ ತಲುಪಿತು.
ಚಾಂಪಿಯನ್ಸ್ ತಂಡಕ್ಕೆ ಟ್ರೋಫಿ, ₹75 ಸಾವಿರ ಮತ್ತು ರನ್ನರ್ಸ್ ಅಪ್ ತಂಡಕ್ಕೆ ಟ್ರೋಫಿ ಹಾಗೂ ₹40 ಸಾವಿರ ಬಹುಮಾನ ಲಭಿಸಿತು.
ಸಾವಿರಾರು ಜನ: ಫೈನಲ್ ಪಂದ್ಯವನ್ನು ನೋಡಲು ಸಾವಿರಾರು ಕ್ರಿಕೆಟ್ ಪ್ರೇಮಿಗಳು ಸೇರಿದ್ದು ವಿಶೇಷವಾಗಿತ್ತು.
ಜೈ ಬಸವ ತಂಡ ಪ್ರಶಸ್ತಿ ಜಯಿಸುತ್ತಿದ್ದಂತೆ ಆಟಗಾರರು ಹಾಗೂ ತಂಡದ ಬೆಂಬಲಿಗರು ಮೈದಾನದ ಒಳಗೆ ಓಡಿ ಹೋಗಿ ಗೆಲುವು ತಂದುಕೊಟ್ಟ ಬ್ಯಾಟ್ಸ್‌ಮನ್‌ಗಳನ್ನು ಹೆಗಲ ಮೇಲೆ ಹೊತ್ತು ಕುಣಿದಾಡಿದರು. ಚಾಂಪಿಯನ್ ತಂಡಕ್ಕೆ ಟ್ರೋಫಿ ಪ್ರದಾನ ಮಾಡುವಾಗ ಬಾಣಬಿರುಸುಗಳ ಸದ್ದು ಅಬ್ಬರಿಸಿತು. ಟೂರ್ನಿಯಲ್ಲಿ ಒಟ್ಟು ಹತ್ತು ತಂಡಗಳು ಪಾಲ್ಗೊಂಡಿದ್ದವು.
ಉದ್ಯಮಿ ಸಾದಿಕ್ ಹುಸೇನ್ ಅತ್ತಾರ, ರಾಜಣ್ಣ ನಾಯಕ, ಸೋಮಶೇಖರ ಹಿಟ್ನಾಳ, ಸಿದ್ದು ಮಣ್ಣಿನವರ, ಮಹಾಂತೇಶ ಹಾನಗಲ್, ನಗರಸಭೆ ಸದಸ್ಯ ಚನ್ನಪ್ಪ ಕೊಟ್ಯಾಳ, ಟೂರ್ನಿ ಸಂಘಟಕ ಮೈನುದ್ದೀನ್ ವರ್ಧಿ, ವಿಜಯ ಕವಲೂರು ಹಾಗೂ ಮಲ್ಲು ಪೂಜಾರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ವೈಯಕ್ತಿಕ ಪ್ರಶಸ್ತಿಗಳು
ಕೊಪ್ಪಳ ಕಿಂಗ್ಸ್ ತಂಡದ ಗಣೇಶ ಗಣಿ ಟೂರ್ನಿ ಶ್ರೇಷ್ಠ ಮತ್ತು ಉತ್ತಮ ಬ್ಯಾಟ್ಸ್‌ಮನ್ ಗೌರವ ಪಡೆದರು. ರವಿ ಕಟಗಿ (ಉತ್ತಮ ಬೌಲರ್), ಕೊಪ್ಪಳ ಕ್ರಿಕೆಟ್ ಕ್ಲಬ್‌ನ ಸಾದಿಕ್ ಗೂದಿ (ಉತ್ತಮ ಕ್ಯಾಚ್) ಮತ್ತು ಜೈ ಉಡಾನ್ ತಂಡದ ರಾಘವೇಂದ್ರ ಬಡಿಗೇರ (ಉತ್ತಮ ವಿಕೆಟ್ ಕೀಪರ್) ವೈಯಕ್ತಿಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.
ಕೊಪ್ಪಳ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ಟೂರ್ನಿ
ಚಾಂಪಿಯನ್ ತಂಡಕ್ಕೆ ₹75 ಸಾವಿರ ಬಹುಮಾನ
ಪಂದ್ಯ ಗೆದ್ದ ಬಳಿಕ ಪಟಾಕಿಗಳ ಅಬ್ಬರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.