ADVERTISEMENT

ನಿರ್ಧಾರ ಅಪ್ರಜ್ಞಾಪೂರ್ವಕ, ವಿಷಾದವಿಲ್ಲ: ರವಿಚಂದ್ರನ್ ಅಶ್ವಿನ್

ಚೆನ್ನೈ ತಲುಪಿದ ರವಿಚಂದ್ರನ್ ಅಶ್ವಿನ್

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2024, 12:49 IST
Last Updated 19 ಡಿಸೆಂಬರ್ 2024, 12:49 IST
ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದ ರವಿಚಂದ್ರನ್ ಅಶ್ವಿನ್ ಜೊತೆ ತಮಿಳುನಾಡು ಕ್ರಿಕೆಟ್‌ ಸಂಸ್ಥೆ ಪದಾಧಿಕಾರಿಗಳಿದ್ದರು.
ಪಿಟಿಐ ಚಿತ್ರ
ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದ ರವಿಚಂದ್ರನ್ ಅಶ್ವಿನ್ ಜೊತೆ ತಮಿಳುನಾಡು ಕ್ರಿಕೆಟ್‌ ಸಂಸ್ಥೆ ಪದಾಧಿಕಾರಿಗಳಿದ್ದರು. ಪಿಟಿಐ ಚಿತ್ರ   

ಚೆನ್ನೈ: ಅಲ್ಲಿ ಪುಷ್ಪವೃಷ್ಟಿಯಿತ್ತು. ಸ್ವಾಗತಿಸಲು ಬಂದ ಬಹಳಷ್ಟು ಜನರ ಮುಖದಲ್ಲಿ ಮಂದಹಾಸವಿತ್ತು. ಲೈವ್‌ ಬ್ಯಾಂಡ್‌ ಕೂಡ ಇತ್ತು. ಆಸ್ಟ್ರೇಲಿಯಾದಲ್ಲಿ ಬುಧವಾರ ಟೆಸ್ಟ್‌ ಸರಣಿಯ ಮಧ್ಯೆಯೇ ಹಠಾತ್ ನಿವೃತ್ತಿ ಘೋಷಿಸಿದ್ದ ರವಿಚಂದ್ರನ್ ಅಶ್ವಿನ್‌ ಗುರುವಾರ ಇಲ್ಲಿಗೆ ಬಂದಾಗ ಇವೆಲ್ಲಾ ಇದ್ದವು. ‘ಇದು ಅಪ್ರಜ್ಞಾಪೂರ್ವಕ ನಿರ್ಧಾರ. ಒಂದಿಷ್ಟೂ ವಿಷಾದವಿಲ್ಲದೇ ವಿದಾಯ ಹೇಳಿದ್ದೇನೆ’ ಎಂದು ಸ್ಟಾರ್ ಆಫ್‌ ಸ್ಪಿನ್ನರ್ ಪ್ರತಿಕ್ರಿಯಿಸಿದರು.

ಗುರುವಾರ ಬೆಳಿಗ್ಗೆ ಚೆನ್ನೈಗೆ ಬಂದಿಳಿದಾಗ ಅವರನ್ನು ರಾಜ್ಯ ಕ್ರಿಕೆಟ್‌ ಸಂಸ್ಥೆ ಪದಾಧಿಕಾರಿಗಳು ಸುತ್ತುವರಿದರು. 38 ವರ್ಷ ವಯಸ್ಸಿನ ಅಶ್ವಿನ್ ಅಲ್ಲಿ ಕಾಯುತ್ತಿದ್ದ ಮಾಧ್ಯಮದವರೊಂದಿಗೂ ಮಾತನಾಡಲು ಬಯಸಲಿಲ್ಲ. ತಮಗಾಗಿ ಕಾಯುತ್ತಿದ್ದ ಕಾರಿನತ್ತ ಧಾವಿಸಿದರು. ಪತ್ನಿ ಪ್ರೀತಿ, ಇಬ್ಬರು ಪುತ್ರಿಯರು ಕಾರಿನಲ್ಲಿದ್ದರು.

ಮನೆ ತಲುಪಿದ ತಕ್ಷಣ ಅವರಿಗೆ ಹೂವಿನ ಹಾರಗಳೊಂದಿಗೆ ಬರಮಾಡಿಕೊಳ್ಳಲಾಯಿತು. ತಂದೆ–ತಾಯಿ ಅವರನ್ನು ಆಲಿಂಗಿಸಿದರು. ಕೆಲವರು ಅಭಿನಂದಿಸಿದರು. ಮತ್ತೆ ಕೆಲವರು ಹಸ್ತಾಕ್ಷರ ಪಡೆದರು. ಆದರೆ ಮನೆಯ ಬಳಿ ಕಾಯುತ್ತಿದ್ದ ಪತ್ರಿಕಾಮಾಧ್ಯಮದವರನ್ನು ನಿರಾಸೆಗೊಳಿಸಲಿಲ್ಲ. ತಮ್ಮ ನಿವೃತ್ತಿ ನಿರ್ಧಾರದ ಬಗ್ಗೆ ಮನಬಿಚ್ಚಿ ಮಾತನಾಡಿದರು.

ADVERTISEMENT

‘ಇದು ಬಹಳಷ್ಟು ಮಂದಿಗೆ ಭಾವನಾತ್ಮಕ ಎನಿಸಬಹುದು. ಕೆಲ ಸಮಯದ ನಂತರ ಕೈಗೊಳ್ಳಬೇಕಾದ ನಿರ್ಧಾರವೂ ಆಗಿತ್ತು. ಆದರೆ ಈಗ ನನಗೆ ನಿರಾಳ ಭಾವ ಮೂಡಿದೆ. ತೃಪ್ತಿಯೂ ಇದೆ. ಅದು ಆ ಕ್ಷಣಕ್ಕೆ ಕೈಗೊಂಡ ನಿರ್ಧಾರ. ಕೆಲದಿನಗಳಿಂದ ಈ ವಿಷಯ ನನ್ನ ಮನದಲ್ಲಿ ಸುಳಿದಾಡುತಿತ್ತು. ಅದನ್ನು ಘೋಷಿಸಿಬಿಟ್ಟೆ’ ಎಂದು ಬ್ರಿಸ್ಬೇನ್‌ನಲ್ಲಿ ಡ್ರಾ ಆದ ಟೆಸ್ಟ್‌ ಪಂದ್ಯದಲ್ಲಿ ತಮ್ಮ ನಿರ್ಧಾರದ ಬಗ್ಗೆ ಅಶ್ವಿನ್ ಪ್ರಸ್ತಾಪಿಸಿದರು.

‘ನನ್ನ ಮಟ್ಟಿಗೆ ಇದು (ನಿವೃತ್ತಿ) ದೊಡ್ಡ ನಿರ್ಧಾರವೇನಲ್ಲ. ನಾನು ಹೊಸ ಹಾದಿಯೊಂದರತ್ತ ಸಾಗಬೇಕೆಂದಿದ್ದೇನೆ’ ಎಂದು ಅಶ್ವಿನ್ ಮುಂದುವರಿಸಿದರು.

ರಾಷ್ಟ್ರೀಯ ತಂಡದ ನಾಯಕನಾಗದ್ದಕ್ಕೆ ವಿಷಾದವಿದೆಯೇ ಎಂಬ ಪ್ರಶ್ನೆಗೆ ಅವರ ಉತ್ತರ– ‘ಆ ಬಗ್ಗೆ ಈಗೇನೂ ಮಾಡುವಂತಿಲ್ಲ. ನನಗೆ ಅಂಥ ವಿಷಾದವಿಲ್ಲ. ವಾಸ್ತವದಲ್ಲಿ ಒಂದಿಷ್ಟೂ ವಿಷಾದದ ಭಾವವಿಲ್ಲ’ ಎಂದು 537 ಟೆಸ್ಟ್‌ ವಿಕೆಟ್‌ಗಳನ್ನು ಗಳಿಸಿರುವ ಆಫ್‌ ಸ್ಪಿನ್ನರ್ ಸ್ಪಷ್ಟಮಾತುಗಳಲ್ಲಿ ಹೇಳಿದರು.

‘ಇಷ್ಟೊಂದು ಮಂದಿ ಇಲ್ಲಿಗೆ ಬರುತ್ತಾರೆಂದು ಯೋಚಿಸಿರಲಿಲ್ಲ. ಮೌನವಾಗಿ ಮನೆ ಸೇರೋಣ ಎಂದುಕೊಂಡಿದ್ದೆ. ನಾನು ಸಾಕಷ್ಟು ವರ್ಷ ಟೆಸ್ಟ್‌ ಆಡಿದ್ದೇನೆ. ಆದರೆ 2011ರ ವಿಶ್ವಕಪ್ ಗೆಲುವಿನ ನಂತರ ಇದೇ ಮೊದಲ ಬಾರಿ ಇಂಥ ಸ್ವಾಗತ ದೊರಕಿದೆ’ ಎಂದರು.

ಗುರಿಗಳಿಲ್ಲ:

‘ಈಗ ನನ್ನ ಮುಂದೆ ಯಾವುದೇ ಗುರಿಗಳಿಲ್ಲ. ಆರಾಮವಾಗಿ ಇರಬೇಕೆಂದುಕೊಂಡಿದ್ದೇನೆ. ಸುಮ್ಮನಿರುವುದು ನನ್ನ ಪಾಲಿಗೆ ಕಷ್ಟ. ಈಗ ಅದನ್ನು ಪ್ರಯತ್ನಿಸುತ್ತಿರುವೆ’ ಎಂದರು.

ಅವರು ಐಪಿಎಲ್‌ ಸೇರಿದಂತೆ ಕ್ಲಬ್ ಕ್ರಿಕೆಟ್‌ನಲ್ಲಿ ಮುಂದುವರಿಯಲಿದ್ದಾರೆ. ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಆಡಲಿದ್ದಾರೆ. ಭಾರತ ತಂಡದ ಕ್ರಿಕೆಟರ್ ಆಗಿ ಅಶ್ವಿನ್ ದಿನಗಳು ಮುಗಿದಿವೆ. ಆದರೆ ಕ್ರಿಕೆಟರ್ ಆಗಿ ಆಶ್ವಿನ್ ಮುಂದುವರಿಯಲಿದ್ದಾರೆ’ ಎಂದು ಪುನರುಚ್ಚರಿಸಿದರು.

ವಿಮಾನ ನಿಲ್ದಾಣದಿಂದ ಮನೆಯತ್ತ ಪಯಣ. ಕಾರಿನಲ್ಲಿ ಸೂಟ್‌ಕೇಸ್‌ ಇಟ್ಟ ಅಶ್ವಿನ್ ಪಿಟಿಐ ಚಿತ್ರ

ಆಸ್ಟ್ರೇಲಿಯಾ ಪಾಲಿಗೆ ಕೆಲಮಟ್ಟಿಗೆ ಮುಳ್ಳಾಗಿದ್ದರು

ಸ್ಟಾರ್ಕ್ ಬ್ರಿಸ್ಬೇನ್ (ಪಿಟಿಐ): ನಿವೃತ್ತಿ ಘೋಷಿಸಿರುವ ಆರ್‌.ಅಶ್ವಿನ್ ಬಗ್ಗೆ ಗುಣಗಾನ ಮಾಡಿರುವ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಅವರು ‘ಕೆಲವು ಸ್ಮರಣೀಯ ಪಂದ್ಯಗಳಲ್ಲಿ ಅವರು ತಮ್ಮ ತಂಡದ ಪಾಲಿಗೆ ಮುಳ್ಳಾಗಿದ್ದರು’ ಎಂದೂ ಹೇಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ 2011 ರಿಂದ 2024ರ ಅವಧಿಯಲ್ಲಿ 23 ಟೆಸ್ಟ್‌ಗಳನ್ನು ಆಡಿರುವ ಅಶ್ವಿನ್ 115 ವಿಕೆಟ್‌ಗಳನ್ನು ಪಡೆದಿದ್ದಾರೆ. ಒಮ್ಮೆ 10 ವಿಕೆಟ್‌ ಹಾಗೂ ಏಳು ಬಾರಿ ಐದು ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ. 2020–21ರ ಅಮೋಘ ಸರಣಿಯ ಜಯದ ಹಿಂದೆ ಅವರ ಪಾತ್ರ ಪ್ರಮುಖ ಆಗಿತ್ತು. ‘ಅಶ್ವಿನ್ ತವರು ಮತ್ತು ಹೊರಗೆ ನಮ್ಮ ತಂಡದ ಪಾಲಿಗೆ ಕೆಲಮಟ್ಟಿಗೆ ಮುಳ್ಳಾಗಿದ್ದರು’ ಎಂದು ಸ್ಟಾರ್ಕ್‌ ಎಸ್‌ಇಎನ್‌ ರೇಡಿಯೊಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.