ದ್ವಿಶತಕ ಸಿಡಿಸಿದ ಜಸ್ಟೀನ್ ಗ್ರೀವ್ಸ್
ಚಿತ್ರ: @cricbuzz
ನ್ಯೂಜಿಲೆಂಡ್ ಪ್ರವಾಸದಲ್ಲಿರುವ ವೆಸ್ಟ್ ಇಂಡೀಸ್ ತಂಡ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ರೋಚಕವಾಗಿ ಡ್ರಾ ಮಾಡಿಕೊಳ್ಳುವ ಮೂಲಕ ನ್ಯೂಜಿಲೆಂಡ್ ತಂಡಕ್ಕೆ ಆಘಾತ ನೀಡಿತು.
ಕ್ರೈಸ್ಟ್ ಚರ್ಚ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ 4ನೇ ಇನಿಂಗ್ಸ್‌ನಲ್ಲಿ 531 ರನ್ಗಳ ಗುರಿ ಪಡೆದ ವಿಂಡೀಸ್, 277 ರನ್ ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಕಣಕ್ಕಿಳಿದ ಜಸ್ಟಿನ್ ಗ್ರೀವ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶೀಸುವ ಮೂಲಕ ತಂಡವನ್ನು ಸೋಲಿನಿಂದ ಪಾರು ಮಾಡಿದರು.
ಆ ಮೂಲಕ ನ್ಯೂಜಿಲೆಂಡ್ ಗೆಲುವಿನ ಆಸೆಗೆ ತಣ್ಣೀರು ಎರಚಿದರು. ಗ್ರೀವ್ಸ್ ಅಮೋಘ ಬ್ಯಾಟಿಂಗ್ ಜೊತೆಗೆ ಅನೇಕ ದಾಖಲೆಗಳನ್ನು ಬರೆದಿದ್ದಾರೆ. ಪ್ರಮುಖವಾಗಿ ಅನೇಕ ದಿಗ್ಗಜ ಬ್ಯಾಟರ್‌ಗಳ ಸಾಲಿಗೆ ಅವರು ಸೇರಿದರು.
ನ್ಯೂಜಿಲೆಂಡ್ ವಿರುದ್ಧ ಸ್ಮರಣೀಯ ಇನಿಂಗ್ಸ್ ಕಟ್ಟಿದ ಗ್ರೀವ್ಸ್, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ನಾಲ್ಕನೇ ಇನಿಂಗ್ಸ್‌ನಲ್ಲಿ ದ್ವಿಶತಕ ಸಿಡಿಸಿದ 7ನೇ ಆಟಗಾರ ಎಂಬ ಸಾಧನೆ ಮಾಡಿದರು.
ತಂಡ ಸಂಕಷ್ಟದಲ್ಲಿದ್ದಾಗ ಬ್ಯಾಟಿಂಗ್ ಇಳಿದ ಗ್ರೀವ್ಸ್ ಬರೋಬ್ಬರಿ 388 ಎಸೆತಗಳನ್ನು ಎದುರಿಸಿದರು. ಈ ವೇಳೆ 19 ಬೌಂಡರಿ ಮೂಲಕ 202 ರನ್ ಕಲೆಹಾಕಿದರು.
ಇದಕ್ಕೂ ಮುನ್ನ ಈ ಸಾಧನೆ ಮಾಡಿದ್ದು ವೆಸ್ಟ್ ಇಂಡೀಸ್ನ ಜಾರ್ಜ್ ಹೆಡ್ಲಿ, ಇಂಗ್ಲೆಂಡ್ನ ಬಿಲ್ ಹೆಡ್ರಿಚ್, ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್, ನ್ಯೂಜಿಲೆಂಡ್ನ ನಾಥನ್ ಅಸ್ಟ್ಲೆ ಹಾಗೂ ವೆಸ್ಟ್ ಇಂಡೀಸ್ನ ಕೈಲ್ ಮೇಯರ್ಸ್ ಸಿಡಿಸಿದ್ದರು.
ಇಂದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ಜಸ್ಟಿನ್ ಗ್ರೀವ್ಸ್ ದಿಗ್ಗಜರ ಸಾಲಿಗೆ ಸೇರಿದರು. ಮಾತ್ರವಲ್ಲ, ತಮ್ಮ ಅಮೋಘ ಪ್ರದರ್ಶನದಿಂದಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.