ADVERTISEMENT

ಅಫ್ರಿದಿ ಸರಿಯಾಗಿ ನಡೆಸಿಕೊಳ್ಳುತ್ತಿರಲ್ಲಿಲ್ಲ: ದಾನಿಶ್‌ ಕನೇರಿಯಾ

ಮೌನ ಮುರಿದ ದಾನಿಶ್‌ ಕನೇರಿಯಾ

ಪಿಟಿಐ
Published 16 ಮೇ 2020, 19:59 IST
Last Updated 16 ಮೇ 2020, 19:59 IST
ದಾನಿಶ್‌ ಕನೇರಿಯಾ
ದಾನಿಶ್‌ ಕನೇರಿಯಾ   

ನವದೆಹಲಿ: ‘ವೃತ್ತಿಜೀವನದುದ್ದಕ್ಕೂ ತಮ್ಮನ್ನು ಶಹೀದ್‌ ಅಫ್ರಿದಿ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಸೀಮಿತ ಓವರುಗಳ ಕ್ರಿಕೆಟ್‌ ಬದುಕನ್ನೂ ಮೊಟಕುಗೊಳಿಸಿದರು’ ಎಂದು ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ಸ್ಪಿನ್ನರ್‌ ದಾನಿಶ್‌ ಕನೇರಿಯಾ ಆರೋಪಿಸಿದ್ದಾರೆ.

ಕನೇರಿಯಾ ಪಾಕ್‌ ತಂಡಕ್ಕೆ ಆಡಿದ್ದ ಎರಡನೇ ಹಿಂದೂ ಆಟಗಾರ ಎನಿಸಿದ್ದಾರೆ. ಅದಕ್ಕೆ ಮೊದಲು ಅವರ ಸೋದರ ಸಂಬಂಧಿ ಅನಿಲ್ ದಲಪತ್‌ ಪಾಕಿಸ್ತಾನ ತಂಡಕ್ಕೆ ವಿಕೆಟ್‌ ಕೀಪರ್‌ ಆಗಿದ್ದರು. ದಾನಿಶ್‌ 61 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು, 34.79 ಸರಾಸರಿಯಲ್ಲಿ 261 ವಿಕೆಟ್‌ ಪಡೆದಿದ್ದರು. ಆದರೆ 2000 ರಿಂದ 2010ರ ಅವಧಿಯಲ್ಲಿ ಅವರು 18 ಏಕದಿನ ಪಂದ್ಯಗಳಲ್ಲಷ್ಟೇ ಕಾಣಿಸಿಕೊಂಡಿದ್ದರು.

‘ಧರ್ಮ ಹೊರತಾಗಿ ಅಫ್ರಿದಿ ಅವರ ತಾರತಮ್ಯ ವರ್ತನೆಯ ಹಿಂದಿನ ಕಾರಣ ತಿಳಿಯಲು ಕಷ್ಟವಾಗುತಿತ್ತು’ ಎಂದು 39 ವರ್ಷದ ಕನೇರಿಯಾ ಕರಾಚಿಯಿಂದ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ADVERTISEMENT

‘ದೇಶಿಯ ಕ್ರಿಕೆಟ್‌ನಲ್ಲಿ ಅಥವಾ ಏಕದಿನ ತಂಡದಲ್ಲಿ ಆಡುವಾಗ, ಅವರು ಯಾವಾಗಲೂ ನನ್ನ ವಿರುದ್ಧವೇ ಇರುತ್ತಿದ್ದರು. ಒಬ್ಬ ವ್ಯಕ್ತಿ ನಿಮ್ಮ ವಿರುದ್ಧ ದ್ವೇಷ ತಾಳುತ್ತಿದ್ದರೆ ಅದನ್ನು (ಧರ್ಮ) ಬಿಟ್ಟು ಬೇರೇನು ಕಾರಣ ಇರಲು ಸಾಧ್ಯ’ ಎಂದು ಕನೇರಿಯಾ ಪ್ರಶ್ನಿಸಿದರು.

ಕನೇರಿಯಾ ಅವರಿಗೆ ಅನ್ಯಾಯವಾಗಿತ್ತು ಎಂದು ಕಳೆದ ವರ್ಷ ಮಾಜಿ ವೇಗಿ ಶೋಯೆಬ್‌ ಅಖ್ತರ್‌ ಹೇಳಿದ್ದರು. ಅವರನ್ನು ಕನೇರಿಯಾ ಸಮರ್ಥಿಸಿಕೊಂಡಿದ್ದರು.

‘ಅವರಿಂದಾಗಿ ನಾನು ಹೆಚ್ಚು ಏಕದಿನ ಪಂದ್ಯಗಳನ್ನು ಆಡಲು ಆಗಲಿಲ್ಲ. ದೇಶಿಯ ಕ್ರಿಕೆಟ್‌ನಲ್ಲಿ ನಾವಿಬ್ಬರೂ ಒಂದೇ ಇಲಾಖೆಯ ತಂಡಕ್ಕೆ ಆಡುವಾಗಲೂ ನನ್ನನ್ನು ತಂಡದಿಂದ ಕೈಬಿಡುತ್ತಿದ್ದರು. ಏಕದಿನ ‍ಪಂದ್ಯಗಳ ವೇಳೆಯೂ ಕಾರಣವಿಲ್ಲದೇ ಕೈಬಿಡುತ್ತಿದ್ದರು’ ಎಂದು ಕನೇರಿಯಾ ಅಸಮಾಧಾನ ತೋಡಿಕೊಂಡಿದ್ದಾರೆ.

‘ಅವರು ಇತರ ಆಟಗಾರರನ್ನು ಬೆಂಬಲಿಸುತ್ತಿದ್ದರು. ನನ್ನನ್ನಲ್ಲ. ಆ ಸರ್ವಶಕ್ತನಿಂದಾಗಿ ನಾನು ಪಾಕಿಸ್ತಾನ ತಂಡಕ್ಕೆ ತುಂಬಾ ಸಮಯ ಆಡಲು ಸಾಧ್ಯವಾಯಿತು. ಅದರ ಬಗ್ಗೆ ನನಗೆ ಹೆಮ್ಮೆಯಿದೆ’ ಎಂದು ಕನೇರಿಯಾ ಹೇಳಿದ್ದಾರೆ.

‘ಅವರು ನನ್ನಂತೆಯೇ ಲೆಗ್‌ ಸ್ಪಿನ್ನರ್‌ ಆಗಿದ್ದರು. ಅದು ಇನ್ನೊಂದು ಕಾರಣ. ಅವರು ತಂಡದಲ್ಲಿ ತಾರಾಮೌಲ್ಯದ ಆಟಗಾರ. ಅವರು ಹೇಗೂ ತಂಡದಲ್ಲಿದ್ದೇ ಇರುತ್ತಿದ್ದರು. ಆದರೂ ನನಗೇಕೆ ಕಿರಿಕಿರಿ ಮಾಡುತ್ತಿದ್ದರು ಎಂದು ಅರ್ಥವಾಗುತ್ತಿರಲಿಲ್ಲ’ ಎಂದಿದ್ದಾರೆ.

‘ಆಡುವ ಹನ್ನೊಂದರಲ್ಲಿ ಇಬ್ಬರು ಸ್ಪಿನ್ನರಗಳಿಗೆ ಅವಕಾಶ ಕೊಡಲಾಗದು, ನನ್ನ ಫೀಲ್ಡಿಂಗ್‌ ಉತ್ತಮವಾಗಿರಲಿಲ್ಲ ಎಂದೆಲ್ಲಾ ನನ್ನ ವಿರುದ್ಧ ಹೇಳಲಾಗುತಿತ್ತು. ಆದರೆ ನೀವೇ ಹೇಳಿ. ಆಗ ತಂಡದಲ್ಲಿ ಅತ್ಯುತ್ತಮ ಫೀಲ್ಡರ್‌ಗಳು ಯಾರಾದರೂ ಇದ್ದರೇ. ಒಬ್ಬಿಬ್ಬರಷ್ಟೇ ಇರುತ್ತಿದ್ದರು. ಪಾಕ್‌ ತಂಡ ಫೀಲ್ಡಿಂಗ್‌ನಿಂದಾಗಿ ಎಂದೂ ಹೆಸರು ಪಡೆದಿರಲಿಲ್ಲ’ ಎಂದು ವಿವರಿಸಿದ್ದಾರೆ.

ಇಂಗ್ಲೆಂಡ್‌ ಕೌಂಟಿಯಲ್ಲಿ ಡರ್ಹ್ಯಾಮ್‌ ವಿರುದ್ಧದ ಪಂದ್ಯದಲ್ಲಿ (ಎಸೆಕ್ಸ್‌ ಪರ) ಆಡುತ್ತಿದ್ದ ವೇಳೆ ಮರ್ವಿನ್‌ ವೆಸ್ಟ್‌ಫೀಲ್ಡ್‌ ಜೊತೆ ಕನೇರಿಯಾ ಕೂಡ ‘ಸ್ಪಾಟ್‌ ಫಿಕ್ಸಿಂಗ್‌’ ಪ್ರಕರಣದಲ್ಲಿ ದೋಷಿ ಎನಿಸಿದ್ದರು. ಅವರು ಕೆಲ ವರ್ಷಗಳ ಕಾಲ ಪಾಕ್‌ ಕ್ರಿಕೆಟ್‌ ಮಂಡಳಿ (ಪಿಸಿಬಿ) ನೆರವು ಯಾಚಿಸಿದ್ದರು. ಮತ್ತೆ ಕ್ರಿಕೆಟ್‌ಗೆ ಮರಳಲು ಬಯಸಿದ್ದರು.

‘ನನಗೆ ಧರ್ಮದ ಕಾರ್ಡ್‌ ಬಳಸಲು ಇಷ್ಟವಿಲ್ಲ. ಪಾಕ್‌ ಮಂಡಳಿಯ ಬೆಂಬಲ ಕೇಳಿದ್ದೆ. ಅವರು ಮೊಹಮ್ಮದ್‌ ಅಮೀರ್‌, ಸಲ್ಮಾನ್‌ ಬಟ್‌ ಅವರಿಗೆ ಮರಳಲು ಅವಕಾಶ ಕೊಟ್ಟರು. ನನಗೇಕೆ ಕೊಡಲಿಲ್ಲ’ ಎಂದು ಕೇಳಿದ್ದಾರೆ.

‘ಹೌದು, ನಾನು ತಪ್ಪು ಮಾಡಿದ್ದೆ. ಬೇರೆಯವರೂ ಕೂಡ. ಆದರೆ ನನ್ನನ್ನು ಟಾಯ್ಲೆಟ್‌ ಪೇಪರ್‌ ರೀತಿ ಬಳಸಿ ಬಿಸಾಡಬಾರದಿತ್ತು. ನಾನು ಪಾಕ್‌ ತಂಡಕ್ಕೆ ದೀರ್ಘ ಕಾಲ ಸೇವೆ ಸಲ್ಲಿಸಿದ್ದೆ. ಹಾಗಾಗಿ ಅವರು ನನ್ನ ಬೆಂಬಲಕ್ಕೆ ನಿಲ್ಲಬೇಕಿತ್ತು’ ಎಂದಿದ್ದಾರೆ.

ದಾನಿಶ್‌ ಕನೇರಿಯಾ ಹೆಚ್ಚಿನ ಪಂದ್ಯಗಳನ್ನು ಇಂಜಮಾಮ್–ಉಲ್‌–ಹಕ್‌ ನಾಯಕತ್ಬದಡಿ ಆಡಿದ್ದರು. ಇಂಜಿ ಭಾಯಿ (ಇಂಜಮಾಮ್‌) ಮತ್ತು ಯೂನಿಸ್‌ ಭಾಯಿ (ಯೂನಿಸ್‌ ಖಾನ್‌) ತಮಗೆ ಬೆಂಬಲ ನೀಡುತ್ತಿದ್ದರು ಎಂದು ಕನೇರಿಯಾ ಹೇಳಿದ್ದಾರೆ.

‘ಇಂಜಿ ಬಹಿರಂಗವಾಗಿ ನನ್ನ ಬಗ್ಗೆ ಒಳ್ಳೆಯದನ್ನು ಮಾತನಾಡುತ್ತಿರಲಿಲ್ಲ. ಆದರೆ ಅವರು ಕೊಟ್ಟ ಬೆಂಬಲಕ್ಕೆ ನಾನು ಚಿ್ರಋಣಿ. ನಾನು ಅವರ ನೇತೃತ್ವದಲ್ಲಿ ಸಾಕಷ್ಟು ಬೆಳೆದೆ’ ಎಂದು ಸ್ಮರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.