ADVERTISEMENT

ಜಯದ ಓಟದತ್ತ ಸಮರ್ಥ್ ನೋಟ

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: ಕರ್ನಾಟಕ–ಒಡಿಶಾ ಹಣಾಹಣಿ ಇಂದು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 16:00 IST
Last Updated 23 ಫೆಬ್ರುವರಿ 2021, 16:00 IST
ಕೆ.ವಿ. ಸಿದ್ಧಾರ್ಥ್, ಆರ್. ಸಮರ್ಥ್ ಮತ್ತು ದೇವದತ್ತ ಪಡಿಕ್ಕಲ್ 
ಕೆ.ವಿ. ಸಿದ್ಧಾರ್ಥ್, ಆರ್. ಸಮರ್ಥ್ ಮತ್ತು ದೇವದತ್ತ ಪಡಿಕ್ಕಲ್    

ಬೆಂಗಳೂರು: ಸೋಮವಾರ ಬಿಹಾರದ ವಿರುದ್ಧ ಶತಕ ಗಳಿಸಿ ತಂಡಕ್ಕೆ ಜಯದ ಕಾಣಿಕೆ ನೀಡಿದ ಆರ್. ಸಮರ್ಥ್ ಈಗ ಮತ್ತೊಂದು ಗೆಲುವಿನ ಮೇಲೆ ಕಣ್ಣಿಟ್ಟಿದ್ದಾರೆ.

ಗುರುವಾರ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ವಿಜಯ್‌ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಸಿ ಗುಂಪಿನ ಮೂರನೇ ಪಂದ್ಯದಲ್ಲಿ ಕರ್ನಾಟಕ ತಂಡವು ಒಡಿಶಾ ಎದುರು ಆಡಲಿದೆ. ಗುಂಪಿನ ಮೊದಲ ಪಂದ್ಯದಲ್ಲಿ ಸೋತಿದ್ದ ಕರ್ನಾಟಕ ತಂಡವು ಎರಡನೇ ಪಂದ್ಯದಲ್ಲಿ ಸುಲಭ ಎದುರಾಳಿಯನ್ನು ಮಣಿಸಿತ್ತು. ಸಮರ್ಥ್ ಶತಕ ಗಳಿಸಿದ್ದರು. ದೇವದತ್ತ ಪಡಿಕ್ಕಲ್ ಮೂರು ರನ್‌ಗಳಿಂದ ಶತಕ ತಪ್ಪಿಸಿ ಕೊಂಡಿದ್ದರು. ಸಿದ್ಧಾರ್ಥ್ 78 ರನ್ ಗಳಿಸಿದ್ದರು. ಇದರಿಂದಾಗಿ ಬ್ಯಾಟಿಂಗ್ ಲಯ ಕಂಡುಕೊಂಡಿರುವ ಈ ಮೂವರೂ ಮುಂದಿನ ಪಂದ್ಯದಲ್ಲಿ ಮಿಂಚುವ ವಿಶ್ವಾಸದಲ್ಲಿದ್ದಾರೆ.

ಬೌಲಿಂಗ್‌ನಲ್ಲಿ ಪ್ರಸಿದ್ಧ ಕೃಷ್ಣ ಮತ್ತು ಶ್ರೇಯಸ್ ಗೋಪಾಲ್ ಮಿಂಚಿದ್ದರು. ಅದರಿಂದಾಗಿ ಬಿಹಾರ ತಂಡವನ್ನು ಅಲ್ಪಮೊತ್ತಕ್ಕೆ ಮಣಿಸಿತ್ತು. ಆದರೆ, ಶಾಂತನು ಮಿಶ್ರಾ ನಾಯಕತ್ವದ ಒಡಿಶಾ ತಂಡವು ಆಡಿರುವ ಎರಡೂ ಪಂದ್ಯಗಳಲ್ಲಿ ಸೋಲನುಭವಿಸಿದೆ. ಪುಟಿದೇಳುವ ಪ್ರಯತ್ನದಲ್ಲಿದೆ. ಆದ್ದರಿಂದ ಕರ್ನಾಟಕಕ್ಕೆ ಅನಿರೀಕ್ಷಿತ ಪೆಟ್ಟು ನೀಡುವ ಸಾಧ್ಯತೆಯೂ ಇದೆ. ಇದರಿಂದಾಗಿ ಸಮರ್ಥ್ ಬಳಗವು ತನ್ನ ಸಂಪೂರ್ಣ ಸಾಮರ್ಥ್ಯ ಮತ್ತು ಅನುಭವವನ್ನು ಪಣಕ್ಕೊಡ್ಡಿ ಆಡಬೇಕಿದೆ.

ADVERTISEMENT

ಹಾಲಿ ಚಾಂಪಿಯನ್ ಕರ್ನಾಟಕವು ಎಂಟರ ಘಟ್ಟಕ್ಕೆ ಸಾಗಲು ಇನ್ನುಳಿದಿರುವ ಮೂರು ಪಂದ್ಯಗಳಲ್ಲಿಯೂ ಉತ್ತಮ ರನ್‌ ರೇಟ್‌ನೊಂದಿಗೆ ಗೆದ್ದರೆ ಉತ್ತಮ. ಒಂದು ಸೋಲು ಕೂಡ ದುಬಾರಿಯಾಗುತ್ತದೆ. ಕೊನೆಯ ಎರಡು ಪಂದ್ಯಗಳಲ್ಲಿ ಎದುರಾಗಲಿರುವ ಕೇರಳ ಮತ್ತು ರೈಲ್ವೆಸ್ ತಂಡಗಳು ಬಲಿಷ್ಠವಾಗಿದ್ದು, ಅವುಗಳನ್ನು ಮಣಿಸಲು ಒಡಿಶಾ ಪಂದ್ಯವನ್ನು ಅಭ್ಯಾಸದ ಕಣವಾಗಿ ಬಳಸಿಕೊಳ್ಳಲು ಆತಿಥೇಯರು ಸಿದ್ಧರಾಗಿದ್ದಾರೆ.

ತಂಡಗಳು

ಕರ್ನಾಟಕ: ಆರ್. ಸಮರ್ಥ್ (ನಾಯಕ), ದೇವದತ್ತ ಪಡಿಕ್ಕಲ್, ಕೆ.ವಿ. ಸಿದ್ಧಾರ್ಥ್, ಕರುಣ್ ನಾಯರ್,ಶ್ರೇಯಸ್ ಗೋಪಾಲ್, ಬಿ.ಆರ್. ಶರತ್, ಜೆ. ಸುಚಿತ್, ಅನಿರುದ್ಧ ಜೋಶಿ, ರೋನಿತ್ ಮೋರೆ, ಪ್ರಸಿದ್ಧ ಕೃಷ್ಣ, ಅಭಿಮನ್ಯು ಮಿಥುನ್, ಡಿ. ನಿಶ್ಚಲ್, ರೋಹನ್ ಕದಂ, ಕೆ.ಎಲ್. ಶ್ರೀಜಿತ್, ಆದಿತ್ಯ ಸೋಮಣ್ಣ, ನಿಕಿನ್ ಜೋಸ್, ವೈಶಾಖ ವಿಜಯಕುಮಾರ್, ಎಂ.ಬಿ. ದರ್ಶನ್.

ಒಡಿಶಾ: ಶಾಂತನು ಮಿಶ್ರಾ (ನಾಯಕ), ರಾಜೇಶ್ ಧುಪರ್ (ವಿಕೆಟ್‌ಕೀಪರ್), ಗೌರವ್ ಚೌಧರಿ, ಸಂದೀಪ್ ಪಟ್ನಾಯಕ್, ಶುಭ್ರಾಂಶು ಸೆನಾಪತಿ, ಅಭಿಷೇಕ್ ಯಾದವ್, ಅಂಕಿತ್ ಯಾದವ್, ದೇವವ್ರತ್ ಪ್ರಧಾನ್, ಸೂರ್ಯಕಾಂತ್ ಪ್ರಧಾನ್, ಸೌರವ್ ಕನೋಜಾ, ರಾಜೇಶ್ ಮೊಹಾಂತಿ, ಪ್ರಯಶ್ ಸಿಂಗ್, ದೇವಾಶಿಶ್ ಸಾಮಂತ್ರೆ, ಪ್ರಬೀನ್ ಲುನಾ, ತರಾಣಿ ಸಾ, ಕಾರ್ತಿಕ್ ಬಿಸ್ವಾಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.