
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಚುನಾವಣೆಯು ನವೆಂಬರ್ 30ರಂದು ನಡೆಯಲಿದೆ.
‘ಅಕ್ಟೋಬರ್ 14ರಂದು ನಡೆದಿದ್ದ ಸಭೆಯಲ್ಲಿ ಚುನಾವಣೆಯ ದಿನಾಂಕವನ್ನು ನಿರ್ಧರಿಸಲಾಗಿತ್ತು. ತದನಂತರ ಅಕ್ಟೋಬರ್ 25 ರಂದು ನಡೆದ ಸಭೆಯಲ್ಲಿ ಚುನಾವಣೆ ದಿನಾಂಕವನ್ನು ಮರು ಉಲ್ಲೇಖಿಸಲಾಯಿತು. ನವೆಂಬರ್ 30ರಂದು (ಭಾನುವಾರ) ಚುನಾವಣೆ ನಡೆಯಲಿದೆ’ ಎಂದು ಕೆಎಸ್‌ಸಿಎ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭೇಂದು ಘೋಷ್ ಅವರು ಮಂಗಳವಾರ ಇಮೇಲ್ ಮೂಲಕ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಘುರಾಮ್ ಭಟ್ ಅಧ್ಯಕ್ಷತೆ ಸಮಿತಿಯ ಕಾರ್ಯಾವಧಿಯು ಸೆಪ್ಟೆಂಬರ್ 30ಕ್ಕೆ ಕೊನೆಗೊಂಡಿತ್ತು.
ಕೆಎಸ್‌ಸಿಎ ಅಧಿಕಾರದ ಚುಕ್ಕಾಣಿ ಹಿಡಿಯುವ ಆಕಾಂಕ್ಷಿಯಾಗಿರುವ ಭಾರತ ತಂಡದ ಮಾಜಿ ಆಟಗಾರ ವೆಂಕಟೇಶ್ ಪ್ರಸಾದ್, ಕೆಎಸ್‌ಸಿಎ ಮಾಜಿ ಪದಾಧಿಕಾರಿ ವಿನಯ್ ಮೃತ್ಯುಂಜಯ ಮತ್ತು ಅವರ ತಂಡದವರು ಶೀಘ್ರವೇ ಚುನಾವಣೆ ದಿನಾಂಕ ಪ್ರಕಟಿಸಬೇಕು ಎಂದು ಸೋಮವಾರ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದರು.
‘ನಿಯಮಾವಳಿಯಲ್ಲಿರುವ 9 ವರ್ಷ ಅಧಿಕಾರ ನಿರ್ವಹಣೆಯ ನಂತರ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ನಿಯಮವನ್ನು ತಪ್ಪಾಗಿ ವ್ಯಾಖ್ಯಾನಿಸುವ ಮೂಲಕ ಕೆಲವರನ್ನು ಅನರ್ಹಗೊಳಿಸಲಾಗುತ್ತಿದೆ’ ಎಂದೂ ಪ್ರಸಾದ ನೇತೃತ್ವದ ತಂಡವು ಆರೋಪಿಸಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ಸಿಇಒ, ‘ಆರೋಪಗಳು ಸತ್ಯವಲ್ಲ. ಯಾವುದೇ ಅರ್ಹ ವ್ಯಕ್ತಿಗಳನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯೊಡ್ಡಿಲ್ಲ’ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
‘ನಿಯಮಾವಳಿಗೆ ಸಂಸ್ಥೆಯು ಬದ್ಧವಾಗಿದೆ. ಕ್ರಿಕೆಟಿಗರಿಗೆ ಬಿಸಿಸಿಐ ಟೂರ್ನಿಗಳಲ್ಲಿ ಯಾವುದೇ ಅವಕಾಶಗಳೂ ಕೈತಪ್ಪಿಹೋಗದಂತೆ ನೋಡಿಕೊಳ್ಳುವುದು ನಮ್ಮ ಆದ್ಯತೆ. ಯಾವುದೇ ವ್ಯಕ್ತಿಗಿಂತ ಸಂಸ್ಥೆ ದೊಡ್ಡದು. ಬಿಸಿಸಿಐನಲ್ಲಿ ಕೆಎಸ್‌ಸಿಎ ತನ್ನ ಸದಸ್ಯತ್ವವನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳುವುದು ನಮ್ಮ ಪರಮೋಚ್ಛ ಗುರಿ’ ಎಂದೂ ತಿಳಿಸಿದ್ದಾರೆ.
ನಿಯಮದ ಪ್ರಕಾರ ರಾಜ್ಯ ಸಂಸ್ಥೆಯಲ್ಲಿ ಆಡಳಿತ ಸಮಿತಿಯ ಸದಸ್ಯರಾಗಿ ಒಂಬತ್ತು ಮತ್ತು ಪದಾಧಿಕಾರಿಯಾಗಿ ಒಂಬತ್ತು ವರ್ಷ ಕಾರ್ಯನಿರ್ವಹಿಸುವ ಅವಕಾಶವಿದೆ ಎಂದು ವೆಂಕಟೇಶ್ ಪ್ರಸಾದ್ ಅವರ ಬಣವು ಪ್ರತಿಪಾದಿಸುತ್ತಿದೆ. ಆದರೆ ಆಡಳಿತ ಸಮಿತಿ ಸದಸ್ಯರಾಗಿ, ಪದಾಧಿಕಾರಿಯಾಗಿ ಒಟ್ಟು ಒಂಬತ್ತು ವರ್ಷ ಕಾರ್ಯನಿರ್ವಹಿಸಿದ್ದರೆ ಮತ್ತೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ರಾಜ್ಯ ಸಂಸ್ಥೆಯಲ್ಲಿ ಯಾವುದೇ ಅಧಿಕಾರ ಪಡೆಯುವಂತಿಲ್ಲ ಎಂದು ಹಾಲಿ ಸಮಿತಿಯು ನಿಯಮವನ್ನು ವಿವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.