ADVERTISEMENT

ಹ್ಯಾಟ್ರಿಕ್’ ಜಯದ ಛಲದಲ್ಲಿ ಕರ್ನಾಟಕ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 20:08 IST
Last Updated 28 ಡಿಸೆಂಬರ್ 2025, 20:08 IST
<div class="paragraphs"><p>ಮಯಂಕ್ ಅಗರವಾಲ್ ಮತ್ತು ದೇವದತ್ತ ಪಡಿಕ್ಕಲ್</p></div>

ಮಯಂಕ್ ಅಗರವಾಲ್ ಮತ್ತು ದೇವದತ್ತ ಪಡಿಕ್ಕಲ್

   

ಅಹಮದಾಬಾದ್: ಸತತ ಎರಡು ಗೆಲುವುಗಳಿಂದ ಆತ್ಮವಿಶ್ವಾಸದ ಉತ್ತುಂಗದಲ್ಲಿರುವ ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಫಿ ಎಲೀಟ್ ಎ ಗುಂಪಿನ ಕ್ರಿಕೆಟ್ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಎದುರಿಸಲಿದೆ. 

ಸೋಮವಾರ ಇಲ್ಲಿ ನಡೆಯಲಿರುವ ಪಂದ್ಯವು ತಮಿಳುನಾಡು ತಂಡಕ್ಕೆ ಮಹತ್ವದ್ದಾಗಿದೆ. ಏಕೆಂದರೆ; ಎನ್. ಜಗದೀಶನ್ ನಾಯಕತ್ವದ ತಂಡವು ಕಳೆದ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದು, ಇನ್ನೊಂದರಲ್ಲಿ ಸೋತಿದೆ. ಅದರಿಂದಾಗಿ ಕೇವಲ 4 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. 

ADVERTISEMENT

ಕರ್ನಾಟಕ ತಂಡವು ಎಂಟು ಅಂಕ ಗಳಿಸಿದ್ದರೂ ಎರಡನೇ ಸ್ಥಾನದಲ್ಲಿದೆ. ನೆಟ್‌ ರನ್‌ ರೇಟ್‌ನಲ್ಲಿ ಮಧ್ಯ ಪ್ರದೇಶ ಮುಂದಿರುವುದರಿಂದ ಮೊದಲ ಸ್ಥಾನದಲ್ಲಿದೆ. ಅದರಿಂದಾಗಿ ಕರ್ನಾಟಕ ತಂಡವು ಮುಂದಿನ ಹಂತದ ಪಂದ್ಯಗಳಲ್ಲಿ ಜಯದೊಂದಿಗೆ ರನ್‌ರೇಟ್‌ ಕೂಡ
ಉತ್ತಮಪಡಿಸಿಕೊಂಡರೆ ಅಗ್ರಸ್ಥಾನಕ್ಕೇರಬಹುದು. 

ತಂಡದ ಎಡಗೈ ಬ್ಯಾಟರ್ ದೇವದತ್ತ ಪಡಿಕ್ಕಲ್  ಸತತ ಎರಡು ಭರ್ಜರಿ ಶತಕ ಗಳಿಸಿ ಅಮೋಘ  ಫಾರ್ಮ್‌ನಲ್ಲಿದ್ದಾರೆ. ಕೇರಳದ ವಿರುದ್ಧ ಶತಕ ಬಾರಿಸಿದ್ದ ಅನುಭವಿ ಕರುಣ್ ನಾಯರ್, ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ನಾಯಕ ಮಯಂಕ್ ಅಗರವಾಲ್, ಭರವಸೆಯ ಆಟಗಾರ ಸ್ಮರಣ್, ಅಭಿನವ್ ಮನೋಹರ್ ಅವರೂ ಉತ್ತಮ ಲಯದಲ್ಲಿದ್ದಾರೆ. ಇದರಿಂದಾಗಿ ಪರಿಣಾಮಕಾರಿ ಬೌಲರ್‌ಗಳಾದ ತಮಿಳುನಾಡಿನ ಗುರ್ಜಪನೀತ್ ಸಿಂಗ್, ಸೋನು ಯಾದವ್ ಮತ್ತು ಆರ್. ಸಾಯಿಕಿಶೋರ್ ಅವರಿಗೆ ಕಠಿಣ ಸವಾಲು ಎದುರಾಗುವುದು ಖಚಿತ. 

ಕರ್ನಾಟಕದ ವೇಗಿಗಳಾದ ವಿದ್ವತ್ ಕಾವೇರಪ್ಪ, ಅಭಿಲಾಷ್ ಶೆಟ್ಟಿ ಅವರು ವಿಕೆಟ್‌ ಗಳಿಸುತ್ತಿದ್ದಾರೆ. ಆದರೆ ರನ್‌ ನಿಯಂತ್ರಿಸುವತ್ತ ಹೆಚ್ಚು ಗಮನ ನೀಡಬೇಕಿದೆ. ವಿದ್ಯಾಧರ್ ಪಾಟೀಲ, ನವಪ್ರತಿಭೆ ಶ್ರೀಶ ಆಚಾರ್ ಅವರೂ ಲಯ ಕಂಡುಕೊಳ್ಳಬೇಕಿದೆ. ತಮಿಳುನಾಡಿನ  ಜಗದೀಶನ್,  ಪ್ರದೋಷ್ ಪಾಲ್, ಇಂದ್ರಜೀತ್ ಮತ್ತು ಸನ್ನಿ ಸಂಧು ಅವರು ಬೌಲರ್‌ಗಳಿಗೆ ಸವಾಲೊಡ್ಡಬಲ್ಲ ಬ್ಯಾಟರ್‌ಗಳಾಗಿದ್ದಾರೆ. ಅವರನ್ನು ಕಟ್ಟಿಹಾಕಲು ‘ಹಾಲಿ ಚಾಂಪಿಯನ್’ ಕರ್ನಾಟಕದ ಬೌಲರ್‌ಗಳು ವಿಶೇಷ
ತಂತ್ರಗಾರಿಕೆಯೊಂದಿಗೆ ಕಣಕ್ಕಿಳಿಯುವ ನಿರೀಕ್ಷೆ ಇದೆ.

ಪಂದ್ಯ ಆರಂಭ : ಬೆಳಿಗ್ಗೆ 9

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.