ADVERTISEMENT

ಕೋವಿಡ್ ಗೆದ್ದ ಕರುಣ್ ನಾಯರ್; ಐಪಿಎಲ್‌ಗೆ ಸಿದ್ಧ

ಪಿಟಿಐ
Published 13 ಆಗಸ್ಟ್ 2020, 14:01 IST
Last Updated 13 ಆಗಸ್ಟ್ 2020, 14:01 IST
ಕರುಣ್ ನಾಯರ್
ಕರುಣ್ ನಾಯರ್   

ನವದೆಹಲಿ: ಹೋದ ತಿಂಗಳು ಕೋವಿಡ್ –19 ಸೋಂಕು ತಗುಲಿದ್ದ ಕ್ರಿಕೆಟಿಗ ಕರುಣ್ ನಾಯರ್ ಅವರು ಗುಣಮುಖರಾಗಿದ್ದಾರೆ. ಅವರು ಯುಎಇಯಲ್ಲಿ ನಡೆಯಲಿರುವ ಐಪಿಎಲ್‌ನಲ್ಲಿ ಆಡಲು ಸಿದ್ಧರಾಗಿದ್ಧಾರೆ.

ಕೆ.ಎಲ್.ರಾಹುಲ್ ನಾಯಕತ್ವದ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಅವರು ಪ್ರತಿನಿಧಿಸುತ್ತಾರೆ. ಸೆಪ್ಟೆಂಬರ್ 19ರಿಂದ ಟೂರ್ನಿಯು ಆರಂಭವಾಗಲಿದೆ.

’ಹೋದ ತಿಂಗಳು ವೈರಸ್‌ ಸೋಂಕು ಇರುವುದು ತಿಳಿದಾಗ ಕರುಣ್ ನಾಯರ್ ಅವರು ಎರಡು ವಾರಗಳ ಸ್ವಯಂ ಪ್ರತ್ಯೇಕವಾಸ ವಿಧಿಸಿಕೊಂಡಿದ್ದರು. ಇದೀಗ ಅವರ ತಪಾಸಣೆಯಲ್ಲಿ ನೆಗೆಟಿವ್ ಬಂದಿದೆ‘ ಎಂದು ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿ ಮಾಡಿದೆ. ಆದರೆ ಈ ಕುರಿತು ಪಂಜಾಬ್ ತಂಡದವರು ಯಾವುದೇ ಹೇಳಿಕೆ ನೀಡಿಲ್ಲ.

ADVERTISEMENT

’ಆಗಸ್ಟ್‌ ಎಂಟರಂದು ಅವರ ಕ್ವಾರಂಟೈನ್ ಅವಧಿ ಮುಗಿದಿತ್ತು. ಆಗ ಮಾಡಿದ ಪರೀಕ್ಷೆಯಲ್ಲಿ ನೆಗೆಟಿವ್ ಆಗಿದ್ದಾರೆ. ಆದರೆ ಅವರು ಇನ್ನೂ ಮೂರು ಪರೀಕ್ಷೆಗಳಿಗೆ ಒಳಪಡಬೇಕು. ತಂಡವು ಆಗಸ್ಟ್‌ 20ರಂದು ಯುಎಇಗೆ ಪಯಣಿಸಲಿದೆ‘ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

’ಅವರು ಈಗ ಸಂಪೂರ್ಣ ಗುಣಮುಖರಾಗಿದ್ದಾರೆ. ಅವರು ಅಸಿಂಪ್ಟೆಮೆಟಿಕ್ ಇದ್ದರು. ಎರಡು ವಾರಗಳ ಕ್ವಾರಂಟೈನ್ ನಂತರ ಅವರ ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಎಂದು ಬಂದಿತ್ತು. ಸದ್ಯ ಅವರು ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ. ಈಗ ಅವರಿಗೆ ಯಾವುದೇ ಸಮಸ್ಯೆಯಿಲ್ಲ‘ ಎಂದು ಮೂಲಗಳು ತಿಳಿಸಿವೆ.

28 ವರ್ಷದ ಕರುಣ್ ಅವರು ಕರ್ನಾಟಕ ರಣಜಿ ತಂಡದ ನಾಯಕರೂ ಹೌದು. 2017ರ ಇಂಗ್ಲೆಂಡ್ ಎದುರಿನ ಟೆಸ್ಟ್‌ ಪಂದ್ಯದಲ್ಲಿ ಕರುಣ್ ತ್ರಿಶತಕ ದಾಖಲಿಸಿದ್ದರು.2018ರಿಂದ ಅವರು ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದಲ್ಲಿದ್ದಾರೆ. ರಾಜ್ಯದ ಮಯಂಕ್ ಅಗರವಾಲ್, ಕೆ. ಗೌತಮ್, ಜೆ. ಸುಚಿತ್ ಕೂಡ ತಂಡದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.