
ತಾವು ಯಾಕೆ ಯಾವಾಗಲು ಭಾರತವನ್ನು ಬೆಂಬಲಿಸುತ್ತೇನೆ ಎಂಬುದಕ್ಕೆ ಮೂರು ಸರಳ ಕಾರಣಗಳನ್ನು ನೀಡುವ ಮೂಲಕ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಬ್ಯಾಟರ್ ಕೆವಿನ್ ಪೀಟರ್ಸನ್ ಬಹಿರಂಗಪಡಿಸಿದ್ದಾರೆ.
ಇಂಗ್ಲೆಂಡ್ ತಂಡದ ಪರವಾಗಿ ಉತ್ತಮವಾಗಿ ಆಡುತ್ತಿದ್ದ ಕೆವಿನ್ ಪೀಟರ್ಸನ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಭಾಗವಹಿಸಿದ ಬಳಿಕ ಭಾರತದಾದ್ಯಂತ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.
ಕೆವಿನ್ ಪೀಟರ್ಸನ್ ಕ್ರಿಕೆಟ್‌ನಿಂದ ನಿವೃತ್ತರಾಗಿ ಸುಮಾರು ಹತ್ತು ವರ್ಷಗಳೇ ಕಳೆದಿವೆ. ಆದರೆ, ಅವರು ಆಗಾಗ ಭಾರತದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ ಮತ್ತು ಇಲ್ಲಿ ಅವರ ಜನಪ್ರಿಯತೆ ವ್ಯಾಪಕವಾಗಿದೆ. ವಿಶೇಷವಾಗಿ ಐಪಿಎಲ್ ವೀಕ್ಷಕ ವಿವರಣೆಗಾರರಾಗಿ, ತಂಡದ ತರಬೇತುದಾರರಾಗಿ ಕಾಣಿಸಿಕೊಳ್ಳುತ್ತಾರೆ. ಅನೇಕ ಸಂದರ್ಭದಲ್ಲಿ ಅವರು ಭಾರತವನ್ನು ಹೊಗಳಿರುವುದನ್ನು ಕಾಣಬಹುದಾಗಿದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಪೀಟರ್ಸನ್, ‘ನಾನು ಯಾಕೆ ಭಾರತದ ಪರವಾಗಿ ಮಾತನಾಡುತ್ತೇನೆ ಎಂದು ಜನರು ಆಗಾಗ ನನ್ನನ್ನು ಪ್ರಶ್ನಿಸುತ್ತಾರೆ. ಉತ್ತರ ಸರಳವಾಗಿದೆ. ನನಗೆ ಭಾರತದ ಜೊತೆ 20 ವರ್ಷಗಳಿಗೂ ಹೆಚ್ಚು ಕಾಲದ ನಂಟಿದೆ. ಅನೇಕ ಪ್ರವಾಸಗಳಿಗೆ ಹೋಗಿದ್ದೇನೆ. ನಾನು ಅಲ್ಲಿ ಒಮ್ಮೆಯೂ ಅಗೌರವ, ನಕಾರಾತ್ಮಕತೆ, ನಂಬಿಸಿ ಮೋಸ ಮಾಡುವುದು ಸೇರಿದಂತೆ ಯಾವುದೇ ಕೆಟ್ಟ ಸನ್ನಿವೇಶವನ್ನು ಎದುರಿಸಿಲ್ಲ’ ಎಂದು ಹೇಳಿದ್ದಾರೆ.
‘ಭಾರತೀಯರು ಸದಾ ಪ್ರೀತಿ, ದಯೆ, ನಿಷ್ಠೆ ಮತ್ತು ಗೌರವವನ್ನು ಪ್ರತಿ ಬಾರಿಯೂ ನನಗೆ ನೀಡಿದ್ದಾರೆ’ ಎಂದು ಎಕ್ಸ್ ಖಾತೆಯಲ್ಲಿ ಸುಧೀರ್ಘ ಪೋಸ್ಟ್ ಒಂದನ್ನು ಬರೆದು ವಿವರಿಸಿದ್ದಾರೆ.
‘ನಾನು ಅಲ್ಲಿ ಅನೇಕರ ಸ್ನೇಹ ಸಂಪಾದಿಸಿದ್ದೇನೆ. ಅವರ ಸ್ನೇಹವನ್ನು ನಾನು ಅಮೂಲ್ಯವೆಂದು ಪರಿಗಣಿಸುತ್ತೇನೆ. ಅಲ್ಲಿನ ಸ್ನೇಹಿತರು ನನಗೆ ಕುಟುಂಬವಿದ್ದಂತೆ ನಾನು ಅವರ ಗೌರವವನ್ನು ಕಾಪಾಡಿಕೊಳ್ಳಬೇಕು ಎಂಬುದು ನನಗೆ ತಿಳಿದಿದೆ. ನಾನು ಭಾರತ ವಿರುದ್ಧ ಆಡಿದಾಗಲು ಮತ್ತು ಐಪಿಎಲ್ ತಂಡದ ಪರ ಆಡಿದಾಗಲೂ ನನಗೆ ಭಾರತೀಯರು ಪ್ರೀತಿ ಕೊಟ್ಟಿದ್ದಾರೆ’ ಎಂದು ಬರೆದಿದ್ದಾರೆ.
‘ಒಂದು ದೇಶ ಮತ್ತು ಅಲ್ಲಿನ ಜನರು ಜೀವನದುದ್ದಕ್ಕೂ ಶುದ್ಧ ಪ್ರೀತಿ ನೀಡಿದಾಗ, ನಾವು ಅವರಿಗೆ ಕೃತಜ್ಞರಾಗಿರಬೇಕು. ಭಾರತೀಯರು ನನಗೆ ಅವರ ಹೃದಯದಲ್ಲಿ ಸ್ಥಾನ ಕೊಟ್ಟಿದ್ದಾರೆ. ಹಾಗಾಗಿ ನನ್ನ ಹೃದಯದಲ್ಲಿ ಭಾರತೀಯರ ಪರವಾದ ಭಾವನೆ ಇರುತ್ತದೆ. ನಾನು ಅವರ ಪ್ರೀತಿಗೆ ಎಂದೆಂದಿಗೂ ಕೃತಜ್ಞರಾಗಿರಬೇಕು’ ಎಂದು ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.