ADVERTISEMENT

IPL-2020: ರಾಹುಲ್ ಪಡೆಗೆ ಮನೀಷ್ ಸವಾಲು

ಕಿಂಗ್ಸ್ ಇಲೆವನ್ ಪಂಜಾಬ್–ಸನ್‌ರೈಸರ್ಸ್‌ ಹೈದರಾಬಾದ್ ಹಣಾಹಣಿ ಇಂದು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 19:24 IST
Last Updated 23 ಅಕ್ಟೋಬರ್ 2020, 19:24 IST
ಮನೀಷ್ ಪಾಂಡೆ
ಮನೀಷ್ ಪಾಂಡೆ   

ದುಬೈ (ಪಿಟಿಐ): ಕಿಂಗ್ಸ್ ಇಲೆವನ್ ಪಂಜಾಬ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ಪ್ಲೇ ಆಫ್‌ ಕನಸು ಜೀವಂತವಾಗಿರಲು ಕರ್ನಾಟಕದ ಕ್ರಿಕೆಟಿಗರೇ ಕಾರಣ.

ಪಾಯಿಂಟ್ಸ್ ಪಟ್ಟಿಯ ಕೊನೆಯ ಸ್ಥಾನದಲ್ಲಿದ್ದ ಕಿಂಗ್ಸ್‌ ಜಯದ ಹ್ಯಾಟ್ರಿಕ್ ಸಾಧಿಸಿ ಮುನ್ನಡೆಯುತ್ತಿದೆ. ಅದರಲ್ಲಿ ಕಿಂಗ್ಸ್‌ ನಾಯಕ ಕೆ.ಎಲ್. ರಾಹುಲ್ ಮತ್ತು ಮಯಂಕ್ ಅಗರವಾಲ್ ಜೋಡಿಯ ಭರ್ಜರಿ ಬ್ಯಾಟಿಂಗ್‌ನದ್ದು ಸಿಂಹಪಾಲಿದೆ. ಗುರುವಾರ ರಾತ್ರಿಯಷ್ಟೇ ಸನ್‌ರೈಸರ್ಸ್ ತಂಡಕ್ಕೆ ಅಮೋಘ ಜಯದ ಕಾಣಿಕೆ ನೀಡಿದ್ದವರು ಮನೀಷ್ ಪಾಂಡೆ.

ಶನಿವಾರ ಈ ಎರಡೂ ತಂಡಗಳು ಮುಖಾಮುಖಿಯಾಗಲಿವೆ. ಪ್ಲೇ ಆಫ್‌ ಪ್ರವೇಶದ ಹಾದಿಯು ಈ ಉಭಯ ತಂಡಗಳಿಗೂ ಕಠಿಣವಾಗಿದೆ. ಆದ್ದರಿಂದ ಮುಂದೆ ಆಡುವ ಪ್ರತಿಯೊಂದು ಪಂದ್ಯದಲ್ಲಿಯೂ ಜಯಿಸುವ ಒತ್ತಡದಲ್ಲಿವೆ. ಟೂರ್ನಿಯಲ್ಲಿ ತಲಾ ಹತ್ತು ಪಂದ್ಯಗಳನ್ನು ಆಡಿರುವ ಎರಡೂ ತಂಡಗಳು ಸೋಲು–ಗೆಲುವುಗಳ ಲೆಕ್ಕದಲ್ಲಿ ಸಮಬಲಶಾಲಿಗಳಾಗಿವೆ. ಈ ಪಂದ್ಯದಲ್ಲಿ ಜಯಿಸುವ ತಂಡಕ್ಕೆ ಮುಂದಿನ ಹಾದಿ ತುಸು ಸುಲಭವಾಗಲಿದೆ. ಆದ್ದರಿಂದ ಈ ಹಣಾಹಣಿಯು ರೋಚಕವಾಗುವ ಸಾಧ್ಯತೆ ಹೆಚ್ಚಿದೆ.

ADVERTISEMENT

ಕಿಂಗ್ಸ್‌ನ ರಾಹುಲ್, ಮಯಂಕ್ ಅವರೊಂದಿಗೆ ಕ್ರಿಸ್ ಗೇಲ್ ಕೂಡ ಮಿಂಚುತ್ತಿರುವುದು ತಂಡದ ಬ್ಯಾಟಿಂಗ್ ವಿಭಾಗವನ್ನು ಸದೃಢಗೊಳಿಸಿದೆ. ನಿಕೊಲಸ್ ಪೂರನ್ ಕೂಡ ಒಳ್ಳೆಯ ಫಾರ್ಮ್‌ನಲ್ಲಿದ್ದಾರೆ. ಮೊಹಮ್ಮದ್ ಶಮಿ, ಕ್ರಿಸ್ ಜೋರ್ಡಾನ್, ಆರ್ಷದೀಪ್ ಸಿಂಗ್ ಬೌಲಿಂಗ್‌ ವಿಭಾಗದ ಭರವಸೆಯಾಗಿದ್ದಾರೆ.

ರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯದಲ್ಲಿ ಸನ್‌ರೈಸರ್ಸ್‌ನ ಆರಂಭಿಕ ಜೋಡಿ ಡೇವಿಡ್ ವಾರ್ನರ್ ಮತ್ತು ಜಾನಿ ಬೆಸ್ಟೊ ಮುಗ್ಗರಿಸಿದ್ದರು. ಆಗ ಮನೀಷ್ ಪಾಂಡೆ, ವಿಜಯ್ ಶಂಕರ್ ಅವರೊಂದಿಗೆ ಮುರಿಯದ ಮೂರನೇ ವಿಕೆಟ್ ಜೊತೆಯಾಟವಾಡಿ ತಂಡಕ್ಕೆ ಅಮೋಘ ಜಯದ ಕಾಣಿಕೆ ನೀಡಿದ್ದರು. ಬೌಲಿಂಗ್‌ನಲ್ಲಿ ಮಿಂಚಿದ್ದ ಜೇಸನ್ ಹೋಲ್ಡರ್, ಸಂದೀಪ್ ಶರ್ಮಾ ಮತ್ತು ಸ್ಪಿನ್ನರ್ ರಶೀದ್ ಖಾನ್ ತಂಡಕ್ಕೆ ಜಯದ ಕಾಣಿಕೆ ನೀಡುವ ಸಮರ್ಥರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.