ADVERTISEMENT

ಚಾಂಪಿಯನ್ಸ್ ಟ್ರೋಫಿ: ರಾಹುಲ್ ತಂಡದ ಮೊದಲ ವಿಕೆಟ್ ಕೀಪರ್: ಗಂಭೀರ್

ಪಿಟಿಐ
Published 12 ಫೆಬ್ರುವರಿ 2025, 20:48 IST
Last Updated 12 ಫೆಬ್ರುವರಿ 2025, 20:48 IST
ಕೆ.ಎಲ್. ರಾಹುಲ್
ಕೆ.ಎಲ್. ರಾಹುಲ್   

ಅಹಮದಾಬಾದ್: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಕೆ.ಎಲ್. ರಾಹುಲ್ ಅವರೇ ತಂಡದ ಮೊದಲ ವಿಕೆಟ್‌ಕೀಪರ್ ಆಗಿ ಅವಕಾಶ ಪಡೆಯಲಿದ್ದಾರೆ ಎಂದು ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಸ್ಪಷ್ಟಪಡಿಸಿದ್ದಾರೆ. 

ಬುಧವಾರ ಇಂಗ್ಲೆಂಡ್ ವಿರುದ್ಧದ ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಕೆಟ್‌ಕೀಪಿಂಗ್‌ಗೆ ರಾಹುಲ್ ನಮ್ಮ ಮೊದಲ ಆಯ್ಕೆ. ಅದರಿಂದಾಗಿಯೇ ಇಂಗ್ಲೆಂಡ್ ಎದುರಿನ ಸರಣಿಯ 3 ಪಂದ್ಯಗಳಲ್ಲಿಯೂ ರಿಷಭ್ ಪಂತ್ ಅವರಿಗೆ ಅವಕಾಶ ನೀಡಿಲ್ಲ. ರಾಹುಲ್ ಅವರನ್ನೇ ಕಣಕ್ಕಿಳಿಸಲಾಗಿತ್ತು. 11ರ ಬಳಗದಲ್ಲಿ ನಾವು ಇಬ್ಬರು ವಿಕೆಟ್‌ಕೀಪರ್‌–ಬ್ಯಾಟರ್‌ಗಳನ್ನು ಕಣಕ್ಕಿಳಿಸುವ ಪರಿಸ್ಥಿತಿ ಇಲ್ಲ’ ಎಂದರು. 

ಮುಂಬರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಡುವ ಭಾರತ ತಂಡದಿಂದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರನ್ನು ಕೈಬಿಟ್ಟಿರುವ ಕುರಿತು ಮಾತನಾಡಿದ ಗೌತಮ್, ‘ವಿಕೆಟ್‌ ಪಡೆಯುವ ಬೌಲರ್‌ಗಳಿಗೆ ಸ್ಥಾನ ನೀಡುವ ಉದ್ದೇಶ ನಮ್ಮದು. ಆದ್ದರಿಂದ ವರುಣ್ ಚಕ್ರವರ್ತಿ ಅವರನ್ನು ಆಯ್ಕೆ ಮಾಡಿದ್ದೇವೆ. ಜೈಸ್ವಾಲ್ ಅವರಿಗೆ ಇನ್ನೂ ದೀರ್ಘ ಭವಿಷ್ಯವಿದೆ. ಅವರಿಗೆ ಮತ್ತೆ ಅವಕಾಶಗಳು ಸಿಗಲಿವೆ. ನಮಗೆ 15 ಆಟಗಾರರನ್ನು ಆಯ್ಕೆ ಮಾಡುವ ಅವಕಾಶವಷ್ಟೇ ಇದೆ’ ಎಂದರು. 

ADVERTISEMENT

‘ವೇಗಿ ಜಸ್‌ಪ್ರೀತ್ ಬೂಮ್ರಾ ಅವರನ್ನು ತಂಡದಿಂದ ಕೈಬಿಡಲಾಗಿದೆ. ಅವರ ಗಾಯದ ಸ್ಥಿತಿ ಕುರಿತು ನಾನೇನೂ ಹೇಳಲು ಸಾಧ್ಯವಿಲ್ಲ. ಎನ್‌ಸಿಎ (ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ) ವೈದ್ಯಕೀಯ ತಂಡವು ನಿಗಾ ವಹಿಸಿದ್ದು, ಅವರೇ ಬೂಮ್ರಾ ಕುರಿತು ನಿರ್ಧರಿಸುವರು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.