ADVERTISEMENT

ನಿವೃತ್ತಿಗೆ ಸಮಯ ಬಂದಿಲ್ಲ; ಬಂದಾಗ ಹಿಂಜರಿಯಲ್ಲ: ಕೆ.ಎಲ್.ರಾಹುಲ್‌ ಮನದಾಳದ ಮಾತು

ಪಿಟಿಐ
Published 27 ಜನವರಿ 2026, 16:22 IST
Last Updated 27 ಜನವರಿ 2026, 16:22 IST
ಕೆ.ಎಲ್.ರಾಹುಲ್‌
ಕೆ.ಎಲ್.ರಾಹುಲ್‌   

ನವದೆಹಲಿ: ‘ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಆಲೋಚನೆ ಬಂದಿತ್ತು. ಆದರೆ, ಅದಕ್ಕೆ ಇನ್ನೂ ಸಮಯವಿದೆ. ಆ ಸಮಯ ಬಂದಾಗ ಹಿಂಜರಿಯುವುದಿಲ್ಲ...’

– ಭಾರತ ಟೆಸ್ಟ್‌ ಮತ್ತು ಏಕದಿನ ಕ್ರಿಕೆಟ್‌ ತಂಡದ ಅನುಭವಿ ಬ್ಯಾಟರ್‌ ಕೆ.ಎಲ್.ರಾಹುಲ್‌ ಅವರ ಮನದಾಳದ ಮಾತುಗಳಿವು.

ಇಂಗ್ಲೆಂಡ್‌ ತಂಡದ ಮಾಜಿ ನಾಯಕ ಕೆವಿನ್‌ ಪೀಟರ್ಸನ್‌ ಜೊತೆಗಿನ ಸಂದರ್ಶನದಲ್ಲಿ ನಿವೃತ್ತಿ ಕುರಿತಾದ ಆಲೋಚನೆಗಳನ್ನು ರಾಹುಲ್‌ ಹಂಚಿಕೊಂಡಿದ್ದಾರೆ. ಕ್ರಿಕೆಟ್‌ನ ಆಚೆಗೂ ಬದುಕು ಇದೆ. ಹಾಗಾಗಿ, ನಿವೃತ್ತಿ ಅಷ್ಟೊಂದು ಕಠಿಣವಾಗಲಾರದು ಎಂದು 33 ವರ್ಷ ವಯಸ್ಸಿನ ಕರ್ನಾಟಕದ ಆಟಗಾರ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ನನ್ನ ನಿವೃತ್ತಿಯ ಬಳಿಕವೂ ದೇಶದಲ್ಲಿ ಕ್ರಿಕೆಟ್‌ ಆಟ ಮುಂದುವರಿಯುತ್ತದೆ. ಬದುಕಿನಲ್ಲಿ ವೃತ್ತಿಗಿಂತಲೂ ಅತಿ ಮುಖ್ಯವೆನಿಸುವ ಹಲವು ವಿಚಾರಗಳಿವೆ. ಮೊದಲ ಮಗುವಿನ ಜನನದ ಬಳಿಕ ಜೀವನದ ಕುರಿತಾದ ನನ್ನ ದೃಷ್ಟಿಕೋನ ಸಂಪೂರ್ಣ ಬದಲಾಗಿದೆ’ ಎಂದು ರಾಹುಲ್‌ ಹೇಳಿದ್ದಾರೆ.

‘ಕ್ರೀಡಾಪಟುಗಳಿಗೆ ಗಾಯವೇ ಬಹುದೊಡ್ಡ ಸವಾಲು. ನಾನೂ ಹಲವಾರು ಬಾರಿ ಗಾಯಗೊಂಡು ಚೇತರಿಸಿಕೊಂಡಿದ್ದೇನೆ. ಆ ಸಂದರ್ಭದಲ್ಲಿ ‘ಎಲ್ಲವೂ ಮುಗಿಯಿತು. ಆಟವನ್ನು ನಿಲ್ಲಿಸೋಣ’ ಎಂದು ಮನಸ್ಸು ಹೇಳಿದ್ದಿದೆ. ಗಾಯದ ನೋವಿಗಿಂತಲೂ, ಆ ಮಾನಸಿಕ ಯಾತನೆ ಅತಿ ಕಠಿಣ’ ಎಂದು ಅವರು ಹೇಳಿದ್ದಾರೆ.

‘ಬದುಕಿರುವವರೆಗೂ ಖರ್ಚು ಮಾಡಬಹುದಾದಷ್ಟು ಹಣವನ್ನು ಕ್ರಿಕೆಟ್‌ ನನಗೆ ನೀಡಿದೆ. ಅದಕ್ಕೆ ಕೃತಜ್ಞನಾಗಿರುವೆ’ ಎಂದೂ ಹೇಳಿದ್ದಾರೆ.

ರಾಹುಲ್‌ 67 ಟೆಸ್ಟ್‌ ಪಂದ್ಯಗಳಿಂದ 35.8ರ ಸರಾಸರಿಯಲ್ಲಿ 4,053 ರನ್‌ ಗಳಿಸಿದ್ದಾರೆ. ಏಕದಿನ ಮಾದರಿಯ 94 ಪಂದ್ಯಗಳಿಂದ 50.9ರ ಸರಾಸರಿಯಲ್ಲಿ 3,360 ರನ್‌ ಗಳಿಸಿದ್ದಾರೆ. ಟಿ20ಯಲ್ಲಿ 2,265 ರನ್‌ (72 ಪಂದ್ಯ) ಹೊಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.