ADVERTISEMENT

ಬ್ರಿಸ್ಬೇನ್: ನೆಟ್ಸ್‌ನಲ್ಲಿ ಹೊಸ, ಹಳೆ ಚೆಂಡು ಎದುರಿಸಿದ ರೋಹಿತ್

ತಂಡದ ಆಟಗಾರರಿಗೆ ವಿರಾಟ್ ಸ್ಪೂರ್ತಿಯ ನುಡಿ

ಪಿಟಿಐ
Published 12 ಡಿಸೆಂಬರ್ 2024, 20:00 IST
Last Updated 12 ಡಿಸೆಂಬರ್ 2024, 20:00 IST
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ    

ಬ್ರಿಸ್ಬೇನ್: ಭಾರತ ತಂಡದ ನಾಯಕರಾಗಿದ್ದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರ ಮೇಲೆಯೇ ಎಲ್ಲರ ಕಣ್ಣುಗಳು ನೆಟ್ಟಿರುತ್ತಿದ್ದರು. ಅಲ್ಲದೇ ಬ್ಯಾಟಿಂಗ್‌ ಶಕ್ತಿಯಾಗಿಯೂ ಅವರು ಗುರುತಿಸಿಕೊಂಡಿದ್ದರು.  ಅಲ್ಲದೇ ತಂಡದ ಆಟಗಾರರೊಂದಿಗೆ ಅವರು ಬಹಳಷ್ಟು ಮಾತುಕತೆ ನಡೆಸುತ್ತಿದ್ದರು. 

ಅಡಿಲೇಡ್‌ನಲ್ಲಿ ನಡೆದಿದ್ದ ಬಾರ್ಡರ್‌–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡವು 10 ವಿಕೆಟ್‌ಗಳ ಸೋಲನುಭವಿಸಿತ್ತು. ಇದರಿಂದಾಗಿ ಭಾರತ ತಂಡಕ್ಕೆ ಶನಿವಾರ ಇಲ್ಲಿ ಆರಂಭವಾಗಲಿರುವ ಮೂರನೇ ಟೆಸ್ಟ್ ಪ್ರಮುಖವಾಗಿದೆ. ಅದಕ್ಕಾಗಿ ಈಗ ಮತ್ತೊಮ್ಮೆ ಕೊಹ್ಲಿ ಅವರು ತಂಡದ ಆಟಗಾರರಿಗೆ ಸ್ಪೂರ್ತಿ ತುಂಬುತ್ತಿದ್ದಾರೆ. ಗುರುವಾರ ಅವರು ತಂಡದ ಅಟಗಾರರಿಗೆ ತಮ್ಮ ಅನುಭವದ ಮಾತುಗಳನ್ನು ಅರುಹಿದರು.  ದಿನದ ಅಭ್ಯಾಸ ಶುರುವಾಗುವ ಮುಂಚೆ ಆಟಗಾರರೊಂದಿಗೆ ಚುಟುಕು ಸಭೆಯಲ್ಲಿ   ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ಅವರು ಮಾತನಾಡಿದರು.

ರೋಹಿತ್ ಅಭ್ಯಾಸ

ADVERTISEMENT

ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ರೋಹಿತ್ ಶರ್ಮಾ ಅವರು ನೆಟ್ಸ್‌ನಲ್ಲಿ ಹೊಸ ಚೆಂಡು ಮತ್ತು ಅರ್ಧ ಹಳತಾದ ಚೆಂಡುಗಳ ಬೌಲಿಂಗ್‌ ಎದುರಿಸಿದರು.

ಅವರು ನ್ಯೂಜಿಲೆಂಡ್ ಎದುರಿನ ಸರಣಿಯಲ್ಲಿ ಆರಂಭಿಕ ಬ್ಯಾಟರ್ ಆಗಿ ಹೊಸ ಚೆಂಡು ಎದುರಿಸುವಲ್ಲಿ ವಿಫಲರಾಗಿದ್ದರು. ಈಚೆಗೆ ಅಡಿಲೇಡ್‌ನಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿಯೂ ವಿಫಲರಾಗಿದ್ದರು. ಹಳೆ ಚೆಂಡು ಎದುರಿಸುವಲ್ಲಿಯೂ ಅವರು ಯಶಸ್ವಿಯಾಗಿರಲಿಲ್ಲ.

ಈ ಪಂದ್ಯದಲ್ಲಿಯೂ ಒಂದೊಮ್ಮೆ ಕೆ.ಎಲ್. ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್  ಇನಿಂಗ್ಸ್ ಆರಂಭಿಸಿದರೆ ರೋಹಿತ್ ಆರನೇ ಕ್ರಮಾಂಕದಲ್ಲಿ ಆಡಬಹುದು. ಇಲ್ಲದಿದ್ದರೆ ಅವರು ಇನಿಂಗ್ಸ್ ಆರಂಭಿಸಬಹುದು.

ಹದವಾದ ಹಸಿರು ಗರಿಕೆಗಳ ಹೊದಿಕೆ ಇರುವ ಗಾಬಾದ ಪಿಚ್‌ನಲ್ಲಿ ಚೆಂಡಿನ ಪುಟಿತ ಉತ್ತಮವಾಗಿರುತ್ತದೆ. ಏಕಾಗ್ರತೆ ಮತ್ತು ತಾಳ್ಮೆಯುತವಾಗಿ ಆಡುವ ಬ್ಯಾಟರ್‌ಗಳಿಗೂ ಇಲ್ಲಿ ಉತ್ತಮ ಅವಕಾಶವಿದೆ. ಇಲ್ಲದಿದ್ದರೆ ಬೌಲರ್‌ಗಳು ವಿಜೃಂಭಿಸುವುದಂತೂ ಖಚಿತ. ಅದರಿಂದಾಗಿ ನಾಯಕ ರೋಹಿತ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ರೂಪಿಸುವ ತಂತ್ರಗಾರಿಕೆಯೂ ಪ್ರಮುಖವಾಗಲಿದೆ. ಅವರು ಬೌಲಿಂಗ್ ವಿಭಾಗದಲ್ಲಿ ಕೆಲವು ಬದಲಾವಣೆಗೆ ಚಿತ್ತ ಹರಿಸುವ ಸಾಧ್ಯತೆ ಇದೆ.

ಹರ್ಷಿತ್ ರಾಣಾಗೆ ವಿಶ್ರಾಂತಿ ನೀಡಿ ಆಕಾಶ್ ದೀಪ್ ಅವರಿಗೆ ಅವಕಾಶ ಕೊಡುವ ಸಾಧ್ಯತೆ  ಇದೆ. ಹರ್ಷಿತ್ ಅವರು ಮೊದಲ ಟೆಸ್ಟ್‌ನಲ್ಲಿ ಭರವಸೆ ಮೂಡಿಸಿದ್ದರು. ಆದರೆ ಅಡಿಲೇಡ್‌ನಲ್ಲಿ 16 ಓವರ್‌ಗಳಲ್ಲಿ 86 ರನ್ ನೀಡಿ ದುಬಾರಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.