ADVERTISEMENT

ಅತಿಯಾದ ಮನವಿ:‌ ವಿರಾಟ್‌ ಕೊಹ್ಲಿಗೆ ದಂಡ

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 20:00 IST
Last Updated 23 ಜೂನ್ 2019, 20:00 IST
ಅಂಪೈರ್‌ ರಿಚರ್ಡ್‌ ಇಲ್ಲಿಂಗ್‌ವರ್ಥ್‌ ಅವರೊಂದಿಗೆ ವಾದಿಸುತ್ತಿರುವ ವಿರಾಟ್‌ ಕೊಹ್ಲಿ– ರಾಯಿಟರ್ಸ್ ಚಿತ್ರ
ಅಂಪೈರ್‌ ರಿಚರ್ಡ್‌ ಇಲ್ಲಿಂಗ್‌ವರ್ಥ್‌ ಅವರೊಂದಿಗೆ ವಾದಿಸುತ್ತಿರುವ ವಿರಾಟ್‌ ಕೊಹ್ಲಿ– ರಾಯಿಟರ್ಸ್ ಚಿತ್ರ   

ಸೌತಾಂಪ್ಟನ್‌, ಇಂಗ್ಲೆಂಡ್‌: ಅಫ್ಗಾನಿಸ್ತಾನ ವಿರುದ್ಧ ಪಂದ್ಯದ ವೇಳೆ ‘ಅತಿಯಾಗಿ ಮನವಿ’ ಸಲ್ಲಿಸಿದ್ದಕ್ಕಾಗಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರಿಗೆ ಪಂದ್ಯ ಸಂಭಾವನೆಯ ಶೇ 25ರಷ್ಟನ್ನು ದಂಡವಾಗಿ ವಿಧಿಸಲಾಗಿದೆ ಎಂದುಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಪ್ರಕಟಿಸಿದೆ.

ಅಫ್ಗಾನಿಸ್ತಾನ, ಶನಿವಾರ ನಡೆದ ಪಂದ್ಯದಲ್ಲಿ ದಿಟ್ಟ ಹೋರಾಟದ ಮೂಲಕ ಭಾರತಕ್ಕೆ ತಲೆನೋವು ತಂದಿತ್ತು. ಭಾರತವನ್ನು 224 ರನ್ನಿಗೆ (8 ವಿಕೆಟ್‌ಗೆ) ನಿಯಂತ್ರಿಸಿದ ನಂತರ ಅಫ್ಗಾನಿಸ್ತಾನ ಅಚ್ಚರಿಯ ಫಲಿತಾಂಶ ನೀಡುವತ್ತ ಹೆಜ್ಜೆಯಟ್ಟಿತ್ತು. ಆದರೆ ಕೊನೆಗಳಿಗೆಯಲ್ಲಿ ಶಮಿ ದಾಳಿಗೆ ಕುಸಿದು 11 ರನ್‌ಗಳಿಂದ ಸೋತಿತ್ತು.

ಶನಿವಾರ, ಅಫ್ಗಾನಿಸ್ತಾನ ಬ್ಯಾಟ್‌ ಮಾಡುತ್ತಿದ್ದಾಗ 29ನೇ ಓವರ್‌ ವೇಳೆ ಬೂಮ್ರಾ ಎಸೆತದಲ್ಲಿ ರಹಮತ್‌ ಶಾ ಅವರ ಪ್ಯಾಡ್‌ಗೆ ಚೆಂಡು ಬಡಿದಿತ್ತು. ಎಲ್‌ಬಿ ಈ ಮನವಿಯನ್ನು ತಿರಸ್ಕರಿಸಿದಾಗ ಕೊಹ್ಲಿ ಅಸಮಾಧಾನಗೊಂಡಿದ್ದರು. ಎಲ್‌ಬಿ ಅಪೀಲು ಮಾಡುವಾಗ ಅಂಪೈರ್‌ ಅಲೀಮ್‌ ದರ್‌ ಕಡೆ ಕೊಹ್ಲಿ ‘ಒತ್ತಡ ಹೇರುವ’ ರೀತಿ ಮುನ್ನುಗ್ಗಿದ್ದರು ಎಂದು ಐಸಿಸಿ ಹೇಳಿಕೆ ತಿಳಿಸಿದೆ.

ADVERTISEMENT

‘ಕೊಹ್ಲಿ ತಪ್ಪೊಪ್ಪಿಕೊಂಡಿದ್ದಾರೆ. ಮ್ಯಾಚ್‌ ರೆಫ್ರಿ ಕ್ರಿಸ್‌ ಬ್ರಾಡ್‌ ತೀರ್ಪನ್ನು ಸಮ್ಮತಿಸಿದ್ದಾರೆ. ಹೀಗಾಗಿ ಈ ಸಂಬಂಧ ವಿಚಾರಣೆ ನಡೆಸುವ ಅಗತ್ಯವಿಲ್ಲ’ ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ.

18 ತಿಂಗಳ ಅವಧಿಯಲ್ಲಿ ಕೊಹ್ಲಿ ಎರಡನೇ ಬಾರಿ ‘ಅನರ್ಹತಾ ಅಂಕ’ ಪಡೆದಿದ್ದಾರೆ. 24 ತಿಂಗಳ ಅವಧಿಯಲ್ಲಿ ನಾಲ್ಕು ಅಥವಾ ಹೆಚ್ಚಿನ ಅನರ್ಹತಾ ಅಂಕ ಪಡೆದರೆ ಅದು ‘ಅಮಾನತು ಅಂಕ’ ವಾಗುತ್ತದೆ.

ಎರಡು ಅಮಾನತು ಅಂಕಗಳು ಬಂದರೆ ಅದು ಒಂದು ಟೆಸ್ಟ್‌ ಅಥವಾ ಎರಡು ಏಕದಿನ ಪಂದ್ಯಗಳ ನಿಷೇಧಕ್ಕೆ (ತಂಡ ಯಾವುದನ್ನು ಮೊದಲು ಆಡುವುದನ್ನು ಅವಲಂಬಿಸಿ) ಸಮನಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.