ADVERTISEMENT

ಕೆಪಿಎಲ್‌ನಲ್ಲಿ ಕಾವೇರಿ‌‌‌‌ ಕೂಗು ಅಭಿಯಾನ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 19:11 IST
Last Updated 16 ಆಗಸ್ಟ್ 2019, 19:11 IST
ಕಾವೇರಿ ಕೂಗು ಅಭಿಯಾನಕ್ಕೆ ಹಿರಿಯ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಚಾಲನೆ ನೀಡಿದರು
ಕಾವೇರಿ ಕೂಗು ಅಭಿಯಾನಕ್ಕೆ ಹಿರಿಯ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಚಾಲನೆ ನೀಡಿದರು   

ಬೆಂಗಳೂರು: ಶುಕ್ರವಾರ ಆರಂಭ ವಾದ ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ದಾಖಲಾಗುವ ಪ್ರತಿಯೊಂದು ಸಿಕ್ಸರ್‌ ಮತ್ತು ಬೌಂಡರಿಗಳು ಕಾವೇರಿ ನದಿ ಜಲಾನಯನ ಪ್ರದೇಶದ ವೃಕ್ಷಸಂಪತ್ತು ವೃದ್ದಿಗೆ ಕಾಣಿಕೆ ನೀಡಲಿವೆ!

ಹೌದು; ‘ಕಾವೇರಿ ಕೂಗು’ ಕಾರ್ಯಕ್ರಮದ ಅಂಗವಾಗಿ ಆ್ಯಡ್‌ ಟು ಪ್ರೊ ಕಂಪೆನಿಯು ಈ ವಿನೂತನ ಯೋಜನೆಗೆ ಚಾಲನೆ ನೀಡಿದೆ. ಪ್ರತಿ ಪಂದ್ಯದಲ್ಲಿ ದಾಖಲಾಗುವ ಸಿಕ್ಸರ್‌ವೊಂದಕ್ಕೆ 100 ಮತ್ತು ಬೌಂಡರಿಗೆ 50 ಸಸಿಗಳನ್ನು ಈ ಸಂಸ್ಥೆಯು ದೇಣಿಗೆ ನೀಡಲಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಜೆ ನಡೆದ ಉದ್ಘಾಟನೆ ಸಮಾರಂಭದಲ್ಲಿ ಹಿರಿಯ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ವೆಂಕಟೇಶ್ ಪ್ರಸಾದ್ ಅವರು ಈ ಅಭಿಯಾನಕ್ಕೆ ಚಾಲನೆ ನೀಡಿದರು.

ADVERTISEMENT

‘ಕಾವೇರಿ ಕೊಳ್ಳದ ರಕ್ಷಣೆಗಾಗಿ ಉದ್ಯಮ ಸಂಸ್ಥೆಗಳು ಈಶ ಫೌಂಡೇಷನ್‌ನ ಸದ್ಗುರು ಜಗ್ಗಿ ವಾಸುದೇವ್ ಅವರ ನೇತೃತ್ವದಲ್ಲಿ ಈ ಅಭಿಯಾನ ನಡೆಸಿವೆ. ಈ ಸಸಿಗಳನ್ನು ಕಾವೇರಿ ಜಲಾನಯನ ಪ್ರದೇಶದ ರೈತರಿಗೆ ಆ್ಯಡ್‌ 2 ಪ್ರೊ ಸಂಸ್ಥೆಯು ತಲುಪಿಸಲಿದೆ. ರೈತರು ಈ ಸಸಿಗಳನ್ನು ಬೆಳೆಸುವರು. ಇದರಿಂದ ಅರಣ್ಯ ಕೃಷಿಗೆ ಒತ್ತು ಸಿಗಲಿದೆ. ಇಳುವರಿ ಹೆಚ್ಚಲಿದೆ. ಈ ಅಭಿಯಾನಕ್ಕಾಗಿ ಹಲವಾರು ಗಣ್ಯರು, ಕ್ರಿಕೆಟ್ ಮತ್ತು ಸಿನೆಮಾ ತಾರೆಯರು ಕೈಜೋಡಿಸಿದ್ದಾರೆ. ಬಹಳಷ್ಟು ಸಾರ್ವಜನಿಕರು ಸ್ವಯಂಸೇವಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಫೌಂಡೇಷನ್‌ನ ಋಷಭ್ ಕಶ್ಯಪ್ ಮಾಹಿತಿ ನೀಡಿದರು.

ಕೆಪಿಎಲ್ ಪ್ರಚಾರ ರಾಯಭಾರಿ, ಕನ್ನಡ ಚಿತ್ರ ತಾರೆ ರಾಗಿಣಿ ದ್ವಿವೇದಿ, ಗಾಯಕ ಚಂದನ್ ಶೆಟ್ಟಿ ಅವರು ಕೂಡ ‘ಕಾವೇರಿ ಕೂಗು’ ಅಭಿಯಾನಕ್ಕೆ ಬೆಂಬಲ ನೀಡುವಂತೆ ಪ್ರೇಕ್ಷಕರಲ್ಲಿ ಮನವಿ ಮಾಡಿದರು. ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ಅಭಿಯಾನದ ಫಲಕ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.