ADVERTISEMENT

ಕೆಪಿಎಲ್ ಉದ್ಘಾಟನೆ ಪಂದ್ಯ: ಸುಚಿತ್ ಸ್ಪಿನ್ ಮೋಡಿಗೆ ಮಳೆ ಅಡ್ಡಿ

ಕೆಪಿಎಲ್ ಉದ್ಘಾಟನೆ ಪಂದ್ಯದ ಆರಂಭದಲ್ಲಿ ಮೈಸೂರು ವಾರಿಯರ್ಸ್‌ ಎದುರು ಎಡವಿದ ಬೆಂಗಳೂರು ಬ್ಲಾಸ್ಟರ್

ಗಿರೀಶದೊಡ್ಡಮನಿ
Published 16 ಆಗಸ್ಟ್ 2019, 19:09 IST
Last Updated 16 ಆಗಸ್ಟ್ 2019, 19:09 IST
 ಜೆ. ಸುಚಿತ್
ಜೆ. ಸುಚಿತ್   

ಬೆಂಗಳೂರು: ಎಡಗೈ ಸ್ಪಿನ್ನರ್ ಜೆ. ಸುಚಿತ್ ಮೋಡಿಯ ಮುಂದೆ ಕುಸಿಯುತ್ತಿದ್ದ ಬೆಂಗಳೂರು ಬ್ಲಾಸ್ಟರ್ ತಂಡಕ್ಕೆ ಮಳೆರಾಯ ತುಸು ತಂಪೆರೆದ!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯ ಮೊದಲ ಪಂದ್ಯದಲ್ಲಿ ಮಳೆ ಬರುವ ಮುನ್ನ ಬೆಂಗಳೂರು ತಂಡವು ಮೈಸೂರು ವಾರಿಯರ್ಸ್ ವಿರುದ್ಧ 13 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 88 ರನ್ ಗಳಿಸಿತು.

ಮಳೆ ಜೋರಾದ ಕಾರಣ ಪಂದ್ಯವನ್ನು ರದ್ದು ಮಾಡಲಾಯಿತು. ಎರಡೂ ತಂಡಗಳಿಗೆ ತಲಾ ಒಂದು ಪಾಯಿಂಟ್ ನೀಡಲಾಯಿತು.

ADVERTISEMENT

ಟಾಸ್ ಗೆದ್ದ ಮೈಸೂರು ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬೆಂಗಳೂರು ತಂಡದ ಆರಂಭಿಕ ಜೋಡಿ ಬಿ.ಆರ್. ಶರತ್ ಮತ್ತು ರೋಹನ್ ಕದಂ ಅವರು ಎಚ್ಚರಿಕೆಯ ಆಟವಾಡಿದರು. ದೊಡ್ಡ ಹೊಡೆತಗಳಿಗೆ ಕೈಹಾಕಲಿಲ್ಲ.

ಬೌಲರ್‌ಗಳಾದ ವೈಶಾಖ ವಿಜಯಕುಮಾರ್ ಮತ್ತು ಕೆ.ಎಸ್. ದೇವಯ್ಯ ಅವರು ವಿಕೆಟ್ ಗಳಿಸುವಲ್ಲಿ ಸಫಲರಾಗಲಿಲ್ಲ.

ಮೈಸೂರು ತಂಡದ ನಾಯಕ ಅಮಿತ್ ವರ್ಮಾ ಅವರು ಐದನೇ ಓವರ್‌ ಬೌಲಿಂಗ್ ಮಾಡಲು ಸುಚಿತ್ ಕೈಗೆ ಚೆಂಡು ನೀಡಿದರು. ಸುಚಿತ್ ವಿಶ್ವಾಸ ಉಳಿಸಿಕೊಂಡರು. ಐದನೇ ಎಸೆತದಲ್ಲಿ ಶರತ್ ಹೊಡೆದ ಚೆಂಡನ್ನು ಸಿದ್ಧಾರ್ಥ್ ಕ್ಯಾಚ್ ಪಡೆದರು.

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ರನ್‌ಗಳ ಹೊಳೆ ಹರಿಸಿದ್ದ ರೋಹನ್ ಕದಂ ಆಟಕ್ಕೆ ಕುದುರಿಕೊಂಡರು. ಆದರೆ ಸುಚಿತ್ ಮೋಡಿಯ ಮುಂದೆ ಅವರ ಆಟವೂ ನಡೆಯಲಿಲ್ಲ. ಏಳನೇ ಓವರ್‌ನಲ್ಲಿ ದೇವಯ್ಯ ಪಡೆದ ಕ್ಯಾಚ್‌ಗೆ ರೋಹನ್ ಆಟ ಮುಗಿಯಿತು.

ಈ ಸಂದರ್ಭದಲ್ಲಿ ಕ್ರೀಸ್‌ನಲ್ಲಿದ್ದ ನಿಕಿನ್ ಜೋಸ್ ಜೊತೆಗೂಡಿದ ನಾಯಕ ಆರ್. ಜೋನಾಥನ್ ಇನಿಂಗ್ಸ್‌ಗೆ ಚೇತರಿಕೆ ನೀಡುವ ಪ್ರಯತ್ನ ಮಾಡಿದರು. 20 ಎಸೆತಗಳಲ್ಲಿ 17 ರನ್‌ ಗಳಿಸಿದ್ದರು. ಅವರಿಗೂ ಸುಚಿತ್ ಪೆವಿಲಿಯನ್ ದಾರಿ ತೋರಿಸಿದರು. 12ನೇ ಓವರ್‌ನಲ್ಲಿ ಜೋನಾಥನ್ ಔಟಾದರು. ಇನ್ನೊಂದಡೆ ಇದ್ದ ನಿಕಿನ್ ಜೋಸ್ (ಬ್ಯಾಟಿಂಗ್ 28; 20ಎಸೆತ, 2ಬೌಂಡರಿ, 1ಸಿಕ್ಸರ್) ಮಾತ್ರ ಆತ್ಮವಿಶ್ವಾ ಸದಿಂದ ಆಡಿದರು. ಅವರೊಂದಿಗೆ ನಾಗಭರತ್ ಕೂಡ ಉತ್ತಮವಾಗಿ ಆಡುತ್ತಿದ್ದರು. ರಾತ್ರಿ 8.07ಕ್ಕೆ ಮಳೆ ಆರಂಭವಾಯಿತು. 9.30ರವರೆಗೆ ಸುರಿಯಿತು. ಅಂಪೈರ್‌ಗಳು ಪಿಚ್ ಮತ್ತು ಹೊರಾಂಗಣ ಮೈದಾನವನ್ನು ಪರಿಶೀಲಿಸಿದರು.

ರಂಗುರಂಗಿನ ಚಾಲನೆ: ಸಂಜೆ ಕೆಪಿಎಲ್ ಟೂರ್ನಿಯನ್ನು ಹಿರಿಯ ಕ್ರಿಕೆಟಿಗ ಜಿ.ಆರ್. ವಿಶ್ವನಾಥ್ ಉದ್ಘಾಟಿಸಿದರು. ಟೂರ್ನಿಯ ಪ್ರಚಾರ ರಾಯಭಾರಿ ರಾಗಿಣಿ ದ್ವಿವೇದಿ, ಹಿನ್ನೆಲೆ ಗಾಯಕ ಚಂದನ್ ಶೆಟ್ಟಿ, ಕೆಎಸ್‌ಸಿಎ ಹಂಗಾಮಿ ಅಧ್ಯಕ್ಷ ಸಂಜಯ್ ದೇಸಾಯಿ, ಹಂಗಾಮಿ ಕಾರ್ಯದರ್ಶಿ ಸುಧಾಕರ್ ರಾವ್, ಜಂಟಿ ಕಾರ್ಯದರ್ಶಿ ಸಂತೋಷ್ ಮೆನನ್ ಮತ್ತಿತರರು ಹಾಜರಿದ್ದರು.

ಸಂಕ್ಷಿಪ್ತ ಸ್ಕೋರು: ಬೆಂಗಳೂರು ಬ್ಲಾಸ್ಟರ್ಸ್‌:13 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 88 (ಬಿ.ಆರ್. ಶರತ್ 13, ರೋಹನ್ ಕದಂ 23, ನಿಕಿನ್ ಜೋಸ್ ಔಟಾಗದೆ 28, ಆರ್. ಜೋನಾಥನ್ 17, ನಾಗಭರತ್ ಔಟಾಗದೆ 5, ಜೆ.ಸುಚಿತ್ 13ಕ್ಕೆ3).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.