ADVERTISEMENT

ಭರತ್ ಮಿಂಚಿನ ಬ್ಯಾಟಿಂಗ್; ಬುಲ್ಸ್‌ಗೆ ಮೊದಲ ಜಯ

ಕೆಪಿಎಲ್: ಗೆಲುವಿನ ಖಾತೆ ತೆರೆಯದ ಮೈಸೂರು; ಸಿದ್ಧಾರ್ಥ್ ಅರ್ಧಶತಕ ವ್ಯರ್ಥ

ಗಿರೀಶದೊಡ್ಡಮನಿ
Published 21 ಆಗಸ್ಟ್ 2019, 19:45 IST
Last Updated 21 ಆಗಸ್ಟ್ 2019, 19:45 IST
ಬಿಜಾಪುರ ಬುಲ್ಸ್‌ ತಂಡದ ಭರತ್ ಚಿಪ್ಲಿ ಆಟದ ವೈಖರಿ  ಪ್ರಜಾವಾಣಿ ಚಿತ್ರ/ವಿ. ಪುಷ್ಕರ್
ಬಿಜಾಪುರ ಬುಲ್ಸ್‌ ತಂಡದ ಭರತ್ ಚಿಪ್ಲಿ ಆಟದ ವೈಖರಿ  ಪ್ರಜಾವಾಣಿ ಚಿತ್ರ/ವಿ. ಪುಷ್ಕರ್   

ಬೆಂಗಳೂರು: ಅನುಭವಿ ಬ್ಯಾಟ್ಸ್‌ಮನ್ ಭರತ್ ಚಿಪ್ಲಿಯವರ‘ಗದಾಪ್ರಹಾರ’ದಂತಹ ಬ್ಯಾಟಿಂಗ್‌ ಮುಂದೆ ಮೈಸೂರು ವಾರಿಯರ್ಸ್‌ ತಂಡವು ಬೆಚ್ಚಿಬಿದ್ದಿತು.

ಈ ಬಾರಿ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯಲ್ಲಿಯೇ ವೇಗದ ಅರ್ಧಶತಕ ದಾಖಲಿಸಿದ ಭರತ್ ಬುಲ್ಸ್ ತಂಡಕ್ಕೆ ಮೊದಲ ಜಯದ ಕಾಣಿಕೆ ನೀಡಿದರು. ಮೈಸೂರು ತಂಡವು 8 ವಿಕೆಟ್‌ಗಳಿಂದ ಸೋತಿತು.

ಟಾಸ್ ಗೆದ್ದ ಬುಲ್ಸ್‌ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕೆ.ವಿ. ಸಿದ್ಧಾರ್ಥ್ (73) ಅರ್ಧಶತಕದ ಬಲದಿಂದ ಮೈಸೂರು ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 140 ರನ್ ಗಳಿಸಿತು. ಈ ಮೊತ್ತವನ್ನು ರಕ್ಷಿಸಿಕೊಳ್ಳಲು ಮೈಸೂರು ಬೌಲರ್‌ಗಳಿಗೆ ಯಾವುದೇ ಅವಕಾಶವನ್ನೂ ಭರತ್ ಮತ್ತು ಎಂ.ಜಿ. ನವೀನ್ ನೀಡಲಿಲ್ಲ. ಇಬ್ಬರ ಬೀಸಾಟ ರಂಗೇರಿತು. ತಮ್ಮೆದುರಿಗೆ ಪುಟಿದೆದ್ದು ಬಂದ ಬಹುತೇಕ ಎಲ್ಲ ಎಸೆತಗಳನ್ನು ಬೌಂಡರಿಗೆರೆ ದಾಟಿಸಿದರು. ಕೇವಲ ಒಂಬತ್ತು ಓವರ್‌ಗಳಲ್ಲಿ ತಂಡದ ಮೊತ್ತವು 100 ರನ್‌ ಮುಟ್ಟಿತು. ಭರತ್ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಕೆಪಿಎಲ್‌ನಲ್ಲಿ ಇದು ಮೂರನೇ ವೇಗದ ಅರ್ಧಶತಕವಾಗಿದೆ. ಜೆ. ಸುಚಿತ್ (15 ಎಸೆತ) ಮೊದಲ ಸ್ಥಾನದಲ್ಲಿದ್ದಾರೆ.

ADVERTISEMENT

ಭರತ್ ಅವರು ನವೀನ್ ಜೊತೆಗೆ ಮೊದಲ ವಿಕೆಟ್‌ ಜೊತೆಯಾಟದಲ್ಲಿ 114 ರನ್ (65 ಎಸೆತ) ಕಲೆಹಾಕಿದರು. ಇದರಿಂದಾಗಿ ತಂಡದ ಜಯ ಸುಲಭವಾಯಿತು. ಶತಕದತ್ತ ಸಾಗಿದ್ದ ಭರತ್ (77; 40ಎಸೆತ, 7ಬೌಂಡರಿ, 6ಸಿಕ್ಸರ್) 11ನೇ ಓವರ್‌ನಲ್ಲಿ ಔಟಾದರು. ವೈಶಾಖ ವಿಜಯಕುಮಾರ್ ಎಸೆತವನ್ನು ಹೊಡೆದ ಅವರು ಮಂಜೇಶ್ ರೆಡ್ಡಿಗೆ ಕ್ಯಾಚ್ ನೀಡಿದರು. ಇದಕ್ಕೂ ಎರಡು ಓವರ್‌ಗಳಿಗೆ ಮುನ್ನ ಭರತ್‌ಗೆ ಒಂದು ಜೀವದಾನ ಲಭಿಸಿತ್ತು.

ನವೀನ್ (45 ರನ್) ಕೇವಲ ಐದು ರನ್‌ಗಳಿಂದ ಅರ್ಧಶತಕ ತಪ್ಪಿಸಿಕೊಂಡರು. ಅವರ ವಿಕೆಟ್‌ ಕೂಡ ವೈಶಾಖ ಪಾಲಾಯಿತು. ಆದರೆ ರಾಜು ಭಟ್ಕಳ ಮತ್ತು ಜಿರಂಜೀವಿ ತಂಡವನ್ನು ಜಯದ ದಡ ಸೇರಿಸಿದರು.

ಬುಲ್ಸ್ ತಂಡವು ತನ್ನ ಮೊದಲ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಸೋತಿತ್ತು. ಇನ್ನೊಂದು ಟೈ ಆಗಿತ್ತು. ಮೈಸೂರು ತಂಡಕ್ಕೆ ಜಯದ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ತಂಡದ ಸಿದ್ಧಾರ್ಥ್ ಮತ್ತು ಶೋಯಬ್ ಮ್ಯಾನೇಜರ್ ಉತ್ತಮವಾಗಿ ಆಡಿದರು. ಆದರೆ ಮಧ್ಯಮಕ್ರಮಾಂಕದಲ್ಲಿ ಅಮಿತ್ ವರ್ಮಾ ಸೊನ್ನೆ ಸುತ್ತಿದ್ದು ತಂಡದ ಮೊತ್ತ ಗಳಿಕೆಯು ಹೆ್ಚ್ಚದಿರಲು ಕಾರಣವಾಯಿತು. ಬುಲ್ಸ್‌ ತಂಡದ ಬೌಲರ್ ಪ್ರತೀಕ್ ಜೈನ್ ಎರಡು ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರು:

ಮೈಸೂರು ವಾರಿಯರ್ಸ್: 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 140 (ಕೆ.ವಿ. ಸಿದ್ಧಾರ್ಥ ಔಟಾಗದೆ 73, ಎನ್‌.ವಿ. ಮಂಜೆಶ್ ರೆಡ್ಡಿ 23, ಶೋಯಬ್ ಮ್ಯಾನೇಜರ್ 28, ಅನಿರುದ್ಧ ಎ ಜೋಶಿ ಔಟಾಗದೆ 12, ಪ್ರತೀಕ್ ಜೈನ್ 16ಕ್ಕೆ2, ಎಂ.ಜಿ. ನವೀನ್ 18ಕ್ಕೆ1, ಸೂರಜ್ ಕಾಮತ್ 31ಕ್ಕೆ1) ಬಿಜಾಪುರ ಬುಲ್ಸ್‌:14.4 ಓವರ್‌ಗಳಿಗೆ 2 ವಿಕೆಟ್‌ಗಳಿಗೆ 144 (ಎಂ.ಜಿ. ನವೀನ್ 45, ಭರತ್ ಚಿಪ್ಲಿ 77, ರಾಜು ಭಟ್ಕಳ ಔಟಾಗದೆ 10, ಜಿ.ಎಸ್. ಚಿರಂಜೀವಿ ಔಟಾಗದೆ 5, ವಿ. ವೈಶಾಖ 36ಕ್ಕೆ2) ಫಲಿತಾಂಶ: ಬಿಜಾಪುರ ಬುಲ್ಸ್‌ಗೆ 8 ವಿಕೆಟ್‌ಗಳ ಜಯ. ಪಂದ್ಯಶ್ರೇಷ್ಠ: ಭರತ್‌ ಚಿಪ್ಲಿ.

ಇಂದಿನ ಪಂದ್ಯಗಳು

ಬಳ್ಳಾರಿ ಟಸ್ಕರ್ಸ್‌– ಬೆಂಗಳೂರು ಬುಲ್ಸ್‌ (ಮಧ್ಯಾಹ್ನ 3)

ಹುಬ್ಬಳ್ಳಿ ಟೈಗರ್ಸ್‌–ಬಿಜಾಪುರ ಬುಲ್ಸ್‌ (ಸಂಜೆ 7)

ಸ್ಥಳ: ಚಿನ್ನಸ್ವಾಮಿ ಕ್ರೀಡಾಂಗಣ

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.