ADVERTISEMENT

IND vs SL 2nd Test: ಬೆಂಗಳೂರಿನಲ್ಲಿ ಶೇ 100ರಷ್ಟು ಆಸನ ಭರ್ತಿಗೆ ಅವಕಾಶ

ಪಿಟಿಐ
Published 11 ಮಾರ್ಚ್ 2022, 3:23 IST
Last Updated 11 ಮಾರ್ಚ್ 2022, 3:23 IST
   

ಬೆಂಗಳೂರು: ನಾಳೆಯಿಂದ ಬೆಂಗಳೂರಿನಲ್ಲಿ ಆರಂಭವಾಗಲಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಶೇಕಡ 100ರಷ್ಟು ಆಸನಗಳ ಭರ್ತಿಗೆ ಕೆಎಸ್‌ಸಿಎ ಅವಕಾಶ ಕಲ್ಪಿಸಿದೆ. ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದು, ಟಿಕೆಟ್‌ಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ.

‘2022ರ ಮಾರ್ಚ್ 12ರಿಂದ 16ರ ವರೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ಹಗಲು–ರಾತ್ರಿ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಅದನ್ನು ಪರಿಗಣಿಸಿ ಕೋವಿಡ್ ಸೋಂಕಿತರ ಸಂಖ್ಯೆಯೂ ಇಳಿದಿರುವುದರಿಂದ ಕ್ರೀಡಾಂಗಣದ ಪೂರ್ಣ ಆಸನಗಳ ಟಿಕೆಟ್‌ ಮಾರಾಟಕ್ಕೆ ಅನುವು ಮಾಡಿಕೊಟ್ಟಿದ್ದೇವೆ’ ಎಂದು ಕೆಎಸ್‌ಸಿಎ ಖಜಾಂಚಿ ವಿನಯ್ ಮೃತ್ಯುಂಜಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಟಿಕೆಟ್‌ಗಳ ದರವನ್ನು ಕ್ರಮವಾಗಿ ₹ 1,250 (ಗ್ರ್ಯಾಂಡ್ ಟೆರೇಸ್), ₹ 750 (ಇ-ಎಕ್ಸಿಕ್ಯುಟಿವ್), ₹ 500 (ಡಿ ಕಾರ್ಪೊರೇಟ್) ಮತ್ತು ₹100(ಸಾಮಾನ್ಯ)ಗೆ ನಿಗದಿಪಡಿಸಲಾಗಿದೆ.

ADVERTISEMENT

ವಿರಾಟ್ ಕೊಹ್ಲಿ ಅವರ 100 ನೇ ಟೆಸ್ಟ್ ಪಂದ್ಯವಾಗಿದ್ದ ಮೊಹಾಲಿಯ ಪಿಸಿಎ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್‌ನಲ್ಲಿ ಶೇಕಡ 50 ರಷ್ಟು ಆಸನಗಳ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.