ಮೈಸೂರು: ಕೇವಲ 54 ರನ್ ಅಂತರದಲ್ಲಿ 8 ವಿಕೆಟ್ ಕಳೆದುಕೊಂಡ ಕೆಎಸ್‌ಸಿಎ ಕೋಲ್ಟ್ಸ್ ತಂಡ ಕ್ಯಾಪ್ಟನ್ ಕೆ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಪಂದ್ಯದ ಮೂರನೇ ದಿನವಾದ ಬುಧವಾರ ಸಂಕಷ್ಟಕ್ಕೆ ಸಿಲುಕಿತು. ಕಡೆಯ ದಿನ ಬರೋಡ ಗೆಲುವಿಗೆ 216 ರನ್ ಬೇಕಿದೆ.
ಇಲ್ಲಿನ ಎಸ್‌ಡಿಎನ್‌ಆರ್‌ಡಬ್ಲ್ಯು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಕೋಲ್ಟ್ಸ್ ಎರಡನೇ ಇನಿಂಗ್ಸ್‌ನಲ್ಲಿ ಹರ್ಷಿಲ್ ಧರ್ಮಾನಿ (105; 144 ಎ, 4x12, 6x2) ಶತಕ ಸಿಡಿಸಿದರೆ, ನಾಯಕ ಅನೀಶ್ವರ್ ಗೌತಮ್ (92; 107 ಎ, 4X14, 6X1) ಶತಕದ ಹೊಸ್ತಿಲಲ್ಲಿ ಎಡವಿದರು.
ಈ ಇಬ್ಬರು ಔಟಾಗುತ್ತಲೇ ಉಳಿದ ಬ್ಯಾಟರ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು. ತಂಡವು 382 ರನ್‌ಗೆ ಪತನಗೊಂಡಿತು. ಬರೋಡ ಪರ ರಸಿಕ್ ದಾರ್ 3 ಹಾಗೂ ಭಾರ್ಗವ್ ಭಟ್, ಲಕ್ಷಿತ್, ಪ್ರದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದರು.
358 ರನ್‌ಗಳ ಗುರಿ ಬೆನ್ನತ್ತಿದ ಬರೋಡ ದಿನದಂತ್ಯಕ್ಕೆ 2 ವಿಕೆಟ್‌ಗೆ 142 ರನ್ ಗಳಿಸಿ ಉತ್ತಮ ಆರಂಭ ಮಾಡಿತು. ಆರಂಭಿಕ ಜ್ಯೋತ್ಸಿಲ್ ಸಿಂಗ್ 74 ಹಾಗೂ ಶಿವಾಲಿಕ್ ಶರ್ಮ 35 ರನ್ ಗಳಿಸಿ ಗುರುವಾರಕ್ಕೆ ಆಟ ಕಾಯ್ದುಕೊಂಡರು.
ಸಂಕ್ಷಿಪ್ತ ಸ್ಕೋರ್:
ಎಸ್‌ಡಿಎನ್‌ಆರ್‌ಡಬ್ಲ್ಯು ಕ್ರೀಡಾಂಗಣ: ಮೊದಲ ಇನಿಂಗ್ಸ್: ಕೆಎಸ್‌ಸಿಎ ಕೋಲ್ಟ್ಸ್: 47.3 ಓವರ್‌ಗಳಲ್ಲಿ 184; ಬರೋಡ ಕ್ರಿಕೆಟ್ ಸಂಸ್ಥೆ: 59 ಓವರ್‌ಗಳಲ್ಲಿ 209; ಎರಡನೇ ಇನಿಂಗ್ಸ್: ಕೆಎಸ್‌ಸಿಎ ಕೋಲ್ಟ್ಸ್: 92.3 ಓವರ್‌ಗಳಲ್ಲಿ 382 (ಹರ್ಷಿಲ್ ಧರ್ಮಾನಿ 105, ಅನೀಶ್ವರ್ ಗೌತಮ್ 92. ರಸಿಕ್ ದಾರ್ 51ಕ್ಕೆ 3); ಬರೋಡ ಕ್ರಿಕೆಟ್ ಸಂಸ್ಥೆ: 56 ಓವರ್‌ಗಳಲ್ಲಿ 2ಕ್ಕೆ 142 (ಜ್ಯೋತ್ಸ್ನಿಲ್ ಸಿಂಗ್ ಔಟಾಗದೇ 74, ಶಿವಾಲಿಕ್ ಶರ್ಮ ಔಟಾಗದೇ 35)
ಎಸ್‌ಜೆಸಿಇ ಕ್ರೀಡಾಂಗಣ, ಮೈಸೂರು:
ಮೊದಲ ಇನಿಂಗ್ಸ್: ಆಂಧ್ರ ಕ್ರಿಕೆಟ್ ಸಂಸ್ಥೆ: 23.2 ಓವರ್‌ಗಳಲ್ಲಿ 87; ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ: 105.1 ಓವರ್‌ಗಳಲ್ಲಿ 455; ಎರಡನೇ ಇನಿಂಗ್ಸ್: ಆಂಧ್ರ ಕ್ರಿಕೆಟ್ ಸಂಸ್ಥೆ: 129.2 ಓವರ್‌ಗಳಲ್ಲಿ 500 (ಅಭಿಷೇಕ್ ರೆಡ್ಡಿ 107, ಹೇಮಂತ್ ರೆಡ್ಡಿ 105, ಅಶ್ವಿನ್ ಹೆಬ್ಬಾರ್ 83. ಮೃದುಲ್ ಸುರೋಚ್ 110ಕ್ಕೆ 3); ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ: 1 ಓವರ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 8.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.