ADVERTISEMENT

ಕೆಎಸ್‌ಸಿಎ ಚುನಾವಣೆ: ಟೀಮ್ ಬ್ರಿಜೇಶ್ ಪ್ರಣಾಳಿಕೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 16:16 IST
Last Updated 21 ನವೆಂಬರ್ 2025, 16:16 IST
<div class="paragraphs"><p>ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ‘ಟೀಮ್ ಬ್ರಿಜೇಶ್’ ಬಣದ ಅಭ್ಯರ್ಥಿಗಳು ಶುಕ್ರವಾರ ಬೆಂಗಳೂರಿನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದರು.&nbsp;  &nbsp;</p></div>

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ‘ಟೀಮ್ ಬ್ರಿಜೇಶ್’ ಬಣದ ಅಭ್ಯರ್ಥಿಗಳು ಶುಕ್ರವಾರ ಬೆಂಗಳೂರಿನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದರು.   

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕ್ರಿಕೆಟ್ ಆಟವನ್ನು ಬೇರುಮಟ್ಟದಿಂದ ಬೆಳೆಸುವುದು ಮತ್ತು ಮೂಲಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಆದ್ಯತೆ ನೀಡುವುದಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಚುನಾವಣೆಯಲ್ಲಿ ಸ್ಪರ್ಧಿಸಿರುವ ‘ಟೀಮ್ ಬ್ರಿಜೇಶ್’ ಬಣದ ಅಭ್ಯರ್ಥಿಗಳು ಘೋಷಿಸಿದರು.

ADVERTISEMENT

ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಚುನಾವಣೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸಿರುವ ದಿ. ಪ್ರಿಂಟರ್ಸ್ ಮೈಸೂರು ಪ್ರೈವೇಟ್ ಲಿಮಿಟೆಡ್ (ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌ ಪತ್ರಿಕಾ ಸಮೂಹ) ನಿರ್ದೇಶಕರಾದ ಕೆ.ಎನ್. ಶಾಂತಕುಮಾರ್ ಅವರು ಮಾತನಾಡಿದರು.

‘ಯುವ ಪ್ರತಿಭಾನ್ವಿತರನ್ನು ಪ್ರೋತ್ಸಾಹಿಸುವುದು, ಮೂಲಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದು, ಮಹಾರಾಜ ಕಪ್ ಮತ್ತು ಮಹಾರಾಣಿ ಟ್ರೋಫಿ ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸುವುದು. ಆಟಗಾರರಿಗೆ ಒಳಾಂಗಣ ಸೌಲಭ್ಯಗಳನ್ನು ಒದಗಿಸುವ ಯೋಜನೆ ಇದೆ. ಇದರಿಂದಾಗಿ ಆಟಗಾರರು ಎಲ್ಲ ಋತುಗಳಲ್ಲಿಯೂ ಅಡೆತಡೆಯಿಲ್ಲದೇ ಅಭ್ಯಾಸ ನಡೆಸಲು ಅನುಕೂಲವಾಗಲಿದೆ’ ಎಂದರು.

ಕಳೆದ ಜೂನ್ 4ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ದುರ್ಘಟನೆ ನಡೆದಿತ್ತು. ಅದರಲ್ಲಿ 11 ಜನರು ಸಾವಿಗೀಡಾಗಿದ್ದರು. ಘಟನೆಯ ಕುರಿತು ವಿಷಾದಿಸಿದ ಅವರು, ‘ಕ್ರಿಕೆಟ್‌ ವ್ಯವಸ್ಥೆಯಲ್ಲಿ ಅಭಿಮಾನಿಗಳ ಪಾತ್ರ ಪ್ರಮುಖವಾದುದು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಬರುವ ಅಭಿಮಾನಿಗಳಿಗೆ ಎಲ್ಲ ರೀತಿಯ ಉತ್ತಮ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಆದ್ಯತೆಯಾಗಲಿದೆ’ ಎಂದರು.

ಈ ಸಂದರ್ಭದಲ್ಲಿ ಹಾಜರಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಅನುಭವಿ ಆಡಳಿತಗಾರ ಬ್ರಿಜೇಶ್ ಪಟೇಲ್, ‘ಅಧ್ಯಕ್ಷ ಸ್ಥಾನಕ್ಕಾಗಿ ನಮ್ಮ ತಂಡದಿಂದ ಸ್ಪರ್ಧಿಸಿರುವ  ಶಾಂತಕುಮಾರ್ ಅವರು ಹಲವು ವರ್ಷಗಳಿಂದ ಬೇರೆ ಬೇರೆ ಕ್ರೀಡೆಗಳ ಆಡಳಿತದಲ್ಲಿ ಪರಿಣತರಾಗಿದ್ದಾರೆ.  ಕೆಎಸ್‌ಸಿಎ ಆಡಳಿತ ನಡೆಸಲು ಅತ್ಯಂತ ಸೂಕ್ತ ವ್ಯಕ್ತಿ ಅವರಾಗಿದ್ದಾರೆ’ ಎಂದರು.

ಈ ಸಂದರ್ಭದಲ್ಲಿ ಹಾಜರಿದ್ದ ಖಜಾಂಚಿ ಸ್ಥಾನದ ಅಭ್ಯರ್ಥಿ ಎಂ.ಎಸ್. ವಿನಯ್, ‘ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕ ತಂಡಗಳು ವಿವಿಧ ಟೂರ್ನಿಗಳಲ್ಲಿ ಉತ್ತಮ ಸಾಧನೆ ಮಾಡಿವೆ. ಕರ್ನಲ್ ಸಿ.ಕೆ. ನಾಯ್ಡು, ಕೂಚ್ ಬಿಹಾರ್ ಟ್ರೋಫಿ, ವಿಜಯ್ ಹಜಾರೆ ಟ್ರೋಫಿಯನ್ನು ಕರ್ನಾಟಕ ತಂಡಗಳು ಗೆದ್ದಿವೆ. 19 ವರ್ಷದೊಳಗಿನ ಮಹಿಳಾ ತಂಡವು ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಸಾಧನೆ ಮಾಡಿದೆ.  3961 ಪಂದ್ಯಗಳನ್ನು (ವಿವಿಧ ವಯೋಮಿತಿಯ ಟೂರ್ನಿಗಳು ಸೇರಿ) ಆಯೋಜಿಸಲಾಗಿದೆ. ಈ ಸಾಧನೆಗಳ ಶ್ರೇಯ ಆಟಗಾರರಿಗೇ ಸಲ್ಲಬೇಕು’ ಎಂದರು.

‘ಚಾಂಪಿಯನ್ಸ್ ಆಫ್ ಚಾಂಪಿಯನ್ಸ್’ ಟೂರ್ನಿಗೆ ಮರುಚಾಲನೆ ನೀಡುವುದು, ಟರ್ಫ್‌ ಪಿಚ್‌ಗಳ ಮೇಲೆ ಎಲ್ಲ ಆಟಗಾರರಿಗೆ ಆಡುವ ಅವಕಾಶ ಹೆಚ್ಚಿಸುವುದು, 12 ವರ್ಷದೊಳಗಿನವರ ಟೂರ್ನಿಗಳು ಮತ್ತು ಅಂತರ ಕಾಲೇಜು ಟೂರ್ನಿಗಳನ್ನು ಪ್ರೋತ್ಸಾಹಿಸುವುದು, ಕ್ಲಬ್‌ಗಳು, ಸದಸ್ಯರಿಗೆ ಸೌಲಭ್ಯಗಳನ್ನು ಹೆಚ್ಚಿಸುವುದು. ವಲಯಗಳಲ್ಲಿ ತರಬೇತಿ ಸೌಲಭ್ಯಗಳನ್ನು ಪ್ರೋತ್ಸಾಹಿಸುವ ಹಾಗೂ ನಗದು ಬಹುಮಾನಗಳನ್ನು ನೀಡುವ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಈ ಸಂದರ್ಭದಲ್ಲಿ ಅಭ್ಯರ್ಥಿಗಳಾದ ಡಿ. ವಿನೋದ್ ಶಿವಪ್ಪ (ಉಪಾಧ್ಯಕ್ಷ), ಇ.ಎಸ್. ಜಯರಾಮ್ (ಖಜಾಂಚಿ) ಹಾಗೂ ಬಿ.ಕೆ.ರವಿ (ಜಂಟಿ ಕಾರ್ಯದರ್ಶಿ) ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.