
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸಿರುವ ‘ಟೀಮ್ ಗೇಮ್ ಚೇಂಜರ್’ ತಂಡದ ವೆಂಕಟೇಶ್ ಪ್ರಸಾದ್ ಅವರು ಸಲ್ಲಿಸಿದ್ದ ನಾಮಪತ್ರ ಸ್ವೀಕೃತಗೊಂಡಿದೆ. ಆದರೆ ಅವರ ನಿಕಟ ಸ್ಪರ್ಧಿ ‘ಟೀಮ್ ಬ್ರಿಜೇಶ್’ ಬಣದ ಕೆ.ಎನ್. ಶಾಂತಕುಮಾರ್ ಅವರ ನಾಮಪತ್ರವು ತಾಂತ್ರಿಕ ಕಾರಣಗಳಿಂದಾಗಿ ತಿರಸ್ಕೃತಗೊಂಡಿದೆ.
ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ವೆಂಕಟೇಶ್ ಪ್ರಸಾದ್ ಬಣದ ವಿನಯ್ ಮೃತ್ಯುಂಜಯ್ ಅವರ ನಾಮಪತ್ರ ತಾಂತ್ರಿಕ ಕಾರಣದಿಂದ ತಿರಸ್ಕೃತವಾಗಿದೆ.
ಚುನಾವಣೆ ಮೇಲುಸ್ತುವಾರಿಗಾಗಿ ನೇಮಕವಾಗಿರುವ ನಿವೃತ್ತ ನ್ಯಾಯಮೂರ್ತಿ ಸುಭಾಷ್ ಬಿ ಅಡಿ ಹಾಗೂ ವಿವಿಧ ಹುದ್ದೆಗಳಿಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಸಮ್ಮುಖದಲ್ಲಿ ಬುಧವಾರ ನಾಮಪತ್ರಗಳ ಪರಿಶೀಲನೆ ನಡೆಯಿತು. ಚುನಾವಣಾಧಿಕಾರಿ ಬಿ. ಬಸವರಾಜು ಅವರು ಪಟ್ಟಿಯನ್ನು ಪ್ರಕಟಿಸಿದರು. ಅಧ್ಯಕ್ಷ ಹುದ್ದೆಗೆ ವೆಂಕಟೇಶ್ ಪ್ರಸಾದ್ ಮತ್ತು ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿ ಕಲ್ಪನಾ ವೆಂಕಟಾಚಾರ್ ಕಣದಲ್ಲಿದ್ದಾರೆ. ಆದರೆ ಇಬ್ಬರೂ ಒಂದೇ ಬಣದಿಂದ ಸ್ಪರ್ಧಿಸಿದ್ದು, ಕಲ್ಪನಾ ತಮ್ಮ ನಾಮಪತ್ರವನ್ನು ಹಿಂತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕಾರ್ಯದರ್ಶಿ ಸ್ಥಾನದ ಸ್ಪರ್ಧೆಯಲ್ಲಿರುವ ಇ.ಎಸ್. ಜೈರಾಮ್, ಸುಜಿತ್ ಸೋಮಸುಂದರ್ ಮತ್ತು ಸಂತೋಷ್ ಮೆನನ್ ಅವರ ನಾಮಪತ್ರಗಳು ಅಂಗೀಕೃತವಾಗಿವೆ.
ನಾಮಪತ್ರ ತಿರಸ್ಕರಿಸಿರುವ ಕ್ರಮವನ್ನು ಪ್ರಶ್ನಿಸಿ ಕೆ.ಎನ್. ಶಾಂತಕುಮಾರ್ (ದಿ ಪ್ರಿಂಟರ್ಸ್ ಮೈಸೂರು ಪ್ರೈವೇಟ್ ಲಿಮಿಟೆಡ್ ನಿರ್ದೇಶಕರು) ಅವರು ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ನಾಮಪತ್ರಗಳನ್ನು ಹಿಂಪಡೆಯಲು ಬುಧವಾರ (ನ.26) ಕೊನೆಯ ದಿನವಾಗಿದೆ. ಇದರ ನಂತರ ಕಣಕ್ಕಿಳಿಯುವ ಅಭ್ಯರ್ಥಿಗಳ ಅಂತಿಮ ಪಟ್ಟಿ ಸ್ಪಷ್ಟವಾಗಲಿದೆ. ಡಿಸೆಂಬರ್ 7ರಂದು ಚುನಾವಣೆ ನಿಗದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.