
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ನವೆಂಬರ್ 30ರಂದು ನಿಗದಿಯಾಗಿದ್ದ ಚುನಾವಣೆಯನ್ನು ಡಿಸೆಂಬರ್ 30ಕ್ಕೆ ಮುಂದೂಡಿದ ಚುನಾವಣಾಧಿಕಾರಿ ಬಿ. ಬಸವರಾಜು ಅವರು ಸೋಮವಾರ ಪ್ರಕಟಣೆ ನೀಡಿದರು. ಈ ಹಿನ್ನೆಲೆಯಲ್ಲಿ ಕೆಲವು ಬೆಳವಣಿಗೆಗಳು ನಡೆದವು.
ಈ ಮೊದಲು ಕೆಎಸ್‌ಸಿಎಯಲ್ಲಿ ಪದಾಧಿಕಾರಿ, ಆಡಳಿತ ಸಮಿತಿ ಸದಸ್ಯರಾಗಿ ಒಟ್ಟು 9 ವರ್ಷ ಅಧಿಕಾರದಲ್ಲಿದ್ದವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂಬ ನಿಯಮದ ಕುರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣೆ ಮುಂದೂಡಿಕೆಯನ್ನು ಚುನಾವಣಾಧಿಕಾರಿ ಪ್ರಕಟಿಸಿದ್ದಾರೆ.
‘ಸದಸ್ಯರಲ್ಲಿರುವ ಕೆಲವು ಅನುಮಾನಗಳನ್ನು ನಿವಾರಿಸದೆ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಯನ್ನು ನಡೆಸಲು ಸಾಧ್ಯವಿಲ್ಲ. ಸದಸ್ಯರ ನಡುವೆ ಯಾವುದೇ ಗೊಂದಲಕ್ಕೆ ಅವಕಾಶ ನೀಡದೇ, ಕಾನೂನಿನ ಪ್ರಕಾರ ನ್ಯಾಯಸಮ್ಮತ ಮತ್ತು ಮುಕ್ತ ರೀತಿಯಲ್ಲಿ ಚುನಾವಣೆಯನ್ನು ನಡೆಸುವುದು ನನ್ನ ಜವಾಬ್ದಾರಿಯಾಗಿದೆ‘ ಎಂದು ಬಸವರಾಜು ಅವರು ಕೆಎಸ್‌ಸಿಎಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
‘9 ವರ್ಷದ ಅಧಿಕಾರ ಅವಧಿ ಕುರಿತ ನಿಯಮವನ್ನು ರಾಜ್ಯ ಕ್ರಿಕೆಟ್ ಸಂಸ್ಥೆಯು ತಪ್ಪಾಗಿ ವ್ಯಾಖ್ಯಾನಿಸಿದೆ’ ಎಂದು ಆಕ್ಷೇಪವೆತ್ತಿದ್ದ ಕೆಎಸ್‌ಸಿಎ ಸದಸ್ಯ ಎ.ವಿ. ಶಶಿಧರ್ ಅವರು ವಿಚಾರಣಾ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ನಿಯಮ ಜಾರಿಗೆ ಮಧ್ಯಂತರ ತಡೆಯಾಜ್ಞೆಯನ್ನು (ಪ್ರತಿವಾದಿಗಳ ಗೈರುಹಾಜರಿಯಲ್ಲಿ) ಪಡೆದಿದ್ದರು.
ಅಧೀನ ವಿಚಾರಣಾ ನ್ಯಾಯಾಲಯವು ನೀಡಿರುವ ತಡೆಯಾಜ್ಞೆಯಲ್ಲಿ ಡಿಸೆಂಬರ್ 16ರಂದು ಮುಂದಿನ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದೆ. ಆದ್ದರಿಂದ ಡಿಸೆಂಬರ್ 30ರವರೆಗೆ ಚುನಾವಣೆ ಮುಂದೂಡಲಾಗಿದೆ ಎಂದೂ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಆದರೆ ಚುನಾವಣಾ ಮುಂದೂಡಿಕೆಯ ಬಗ್ಗೆ ಚುನಾವಣಾಧಿಕಾರಿಗೆ ಪತ್ರ ಬರೆದಿರುವ ಕೆಎಸ್‌ಸಿಎ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭೇಂದು ಘೋಷ್ ಅವರು, ‘ಪೂರ್ವನಿಗದಿಯಂತೆಯೇ ಚುನಾವಣೆಯನ್ನು ನಡೆಸಬೇಕು. ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆಯ ದಿನಾಂಕವನ್ನು ಮಾತ್ರ ಬದಲಿಸಬೇಕು’ ಎಂದು ಕೋರಿದ್ದಾರೆ.
ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಭಾನುವಾರ (ನ.16) ಕೊನೆಯ ದಿನವಾಗಿತ್ತು. ಸೋಮವಾರ ನಾಮಪತ್ರಗಳ ಪರಿಶೀಲನೆಯ ನಂತರ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟವಾಗಬೇಕಿತ್ತು.
ಸ್ಪರ್ಧಾಕಣದಲ್ಲಿರುವ ಟೇಮ್ ಬ್ರಿಜೇಶ್ ಬಣ ಮತ್ತು ವೆಂಕಟೇಶ್ ಪ್ರಸಾದ್ ಅವರ ಗೇಮ್ ಚೇಂಜರ್ಸ್ ತಂಡಗಳು ಚುನಾವಣೆಯ ಮುಂದೂಡಿಕೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿವೆ. ಅಧ್ಯಕ್ಷ ಸ್ಥಾನಕ್ಕಾಗಿ ಟೀಮ್ ಬ್ರಿಜೇಶ್ ಪರವಾಗಿ ದಿ ಪ್ರಿಂಟರ್ಸ್ ಮೈಸೂರು ಪ್ರೈವೇಟ್ ಲಿಮಿಟೆಡ್ ನಿರ್ದೇಶಕರಾದ ಕೆ.ಎನ್. ಶಾಂತಕುಮಾರ್ ಮತ್ತು ವೆಂಕಟೇಶ್ ಪ್ರಸಾದ್ ಅವರ ನಡುವೆ ಪೈಪೋಟಿಯಿದೆ.
‘ಚುನಾವಣೆಯನ್ನು ನಿಗದಿತ ಸಮಯಕ್ಕೆ ನಡೆಸಬೇಕು. ಮುಂದೂಡುವ ಸಂಗತಿಯು ನಮಗೆ ಅತೀವ ಬೇಸರ ಮೂಡಿಸಿದೆ. ಕರ್ನಾಟಕದ ಕ್ರಿಕೆಟ್ ಹಿತರಕ್ಷಣೆಯೇ ನಮ್ಮ ಆದ್ಯತೆಯಾಗಿದೆ. ಸಂಸ್ಥೆಗೆ ಬಿಸಿಸಿಐ ಮಾನ್ಯತೆಯು ಅಬಾಧಿತವಾಗಿರಬೇಕು ಮತ್ತು ನಮ್ಮ ಆಟಗಾರರಿಗೆ ಬಿಸಿಸಿಐ ಟೂರ್ನಿಗಳಲ್ಲಿ ಆಡಲು ಎಲ್ಲ ಅನುಕೂಲಗಳೂ ಸಿಗಬೇಕು. ಅದಕ್ಕಾಗಿ ಎಲ್ಲ ಪ್ರಯತ್ನಗಳನ್ನೂ ಮಾಡಲು ನಾವು ಬದ್ಧ’ ಎಂದು ಟೀಮ್ ಬ್ರಿಜೇಶ್ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ವೆಂಕಟೇಶ್ ಪ್ರಸಾದ್, ‘ಇದು ಆಘಾತಕಾರಿ ಬೆಳವಣಿಗೆ. ಡಿಸೆಂಬರ್ 30ರವರೆಗೆ ಮುಂದೂಡುವ ಈ ಆದೇಶ ಸರಿಯಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.