ADVERTISEMENT

ಕೆಎಸ್‌ಸಿಎ ಅಧ್ಯಕ್ಷ ಸ್ಥಾನಕ್ಕೆ ರಘುರಾಮ್ ಭಟ್ ನಾಮಪತ್ರ

ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 19:31 IST
Last Updated 8 ನವೆಂಬರ್ 2022, 19:31 IST
ರಘುರಾಮ್ ಭಟ್
ರಘುರಾಮ್ ಭಟ್   

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಎ. ರಘುರಾಮ್ ಭಟ್ ಅವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ.

ನವೆಂಬರ್ 20ರಂದು ನಿಗದಿಯಾಗಿರುವ ಕೆಎಸ್‌ಸಿಎ ಚುನಾವಣೆಗಾಗಿ ನಾಮಪತ್ರ ಸಲ್ಲಿಸಿದವರ ಪಟ್ಟಿಯನ್ನು ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

1980 ರಿಂದ 1993ರವರೆಗೆ ರಘುರಾಮ್ ಭಟ್ ಅವರು ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ್ದಾರೆ. ಭಾರತ ತಂಡವನ್ನು ಎರಡು ಟೆಸ್ಟ್ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದರು. ಕರ್ನಾಟಕ ತಂಡದಲ್ಲಿ ಎಡಗೈ ಸ್ಪಿನ್ನರ್ ಆಗಿ ಮಿಂಚಿದ್ದ ಅವರು 82 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿ 374 ವಿಕೆಟ್‌ಗಳನ್ನು ಗಳಿಸಿದ್ದಾರೆ.

ADVERTISEMENT

ನಿವೃತ್ತಿಯ ನಂತರಅಂಪೈರ್, ಕೋಚ್ ಮತ್ತು ರಾಜ್ಯ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ್ದಾರೆ. 64 ವರ್ಷ ರಘುರಾಮ್, ಉಪಾಧ್ಯಕ್ಷ ಸ್ಥಾನಕ್ಕೂ ನಾಮಪತ್ರ ಸಲ್ಲಿಸಿದ್ದಾರೆ.

ಈ ಹಿಂದೆ ಅಧ್ಯಕ್ಷರಾಗಿದ್ದ ರೋಜರ್ ಬಿನ್ನಿ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಈಚೆಗೆ ಆಯ್ಕೆಯಾಗಿದ್ದರು. ಉಪಾಧ್ಯಕ್ಷರಾಗಿದ್ದ ಜೆ. ಅಭಿರಾಮ್ ಅವರು ನಾಮಪತ್ರ ಸಲ್ಲಿಸಿಲ್ಲ. ಕಳೆದ ಮೂರು ವರ್ಷಗಳಿಂದ ಖಜಾಂಚಿಯಾಗಿದ್ದ ವಿನಯ್ ಮೃತ್ಯುಂಜಯ ಅವರೂ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದ್ದಾರೆ. ಸಂತೋಷ್ ಮೆನನ್ ಕೂಡ ಪುನರಾಯ್ಕೆ ಬಯಸಿ ಕಾರ್ಯದರ್ಶಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವರು.

ನಾಮಪತ್ರ ಹಿಂಪಡೆಯಲು ಬುಧವಾರ ಕೊನೆಯ ದಿನವಾಗಿದೆ. ಇದರಲ್ಲಿ ಕೆಲವರು ಹಿಂಪಡೆಯುವ ಸಾಧ್ಯತೆ ಇದೆ ಎಂದು ಕೆಎಸ್‌ಸಿಎ ಮೂಲಗಳು ತಿಳಿಸಿವೆ.

ನಾಮಪತ್ರ ಸಲ್ಲಿಸಿದವರು

ಅಧ್ಯಕ್ಷ; ಬಿ.ಎನ್. ಮಧುಕರ್, ರಘುರಾಮ್ ಭಟ್ ಎ., ಸಂಜಯ್ ಪೋಳ್, ವಿನಯ್ ಮೃತ್ಯುಂಜಯ.

‌ಉಪಾಧ್ಯಕ್ಷ; ವಿ.ಎಂ. ಮಂಜುನಾಥ್, ಕೆ.ಎಸ್‌. ರಘುರಾಮ್, ರಘುರಾಮ್ ಭಟ್ ಎ., ಬಿ.ಕೆ. ಸಂಪತ್ ಕುಮಾರ್

ಕಾರ್ಯದರ್ಶಿ;ಬಿ.ಎನ್ ಮಧುಕರ್, ಕೆ.ಎಸ್. ರಘುರಾಮ್, ಸಂತೋಷ್ ಮೆನನ್, ವಿನಯ್ ಮೃತ್ಯುಂಜಯ, ಎ. ಶಂಕರ್, ಬಿ.ಎನ್. ಸುಬ್ರಮಣ್ಯ

ಜಂಟಿ ಕಾರ್ಯದರ್ಶಿ;ಕೆ.ಎಸ್. ರಘುರಾಮ್, ಶಾವೀರ್ ತಾರಾಪುರ್

ಖಜಾಂಚಿ; ಇ.ಎಸ್. ಜೈರಾಮ್, ಸಿ.ಆರ್. ಕೃಷ್ಣ, ಬಿ.ಎನ್. ಮಧುಕರ್

ವಲಯ ನಿಮಂತ್ರಕರು (ಅವಿರೋಧ)

* ಧಾರವಾಡ: ನಿಖಿಲ್ ಎಂ ಭೂಸದ್ (ಬಿಡಿಕೆ ಕ್ರೀಡಾ ಪ್ರತಿಷ್ಠಾನ)

* ರಾಯಚೂರು: ಸುಜಿತ್ ಬೊಹರಾ, (ಸಿಟಿ ಇಲೆವನ್ ಕ್ರಿಕೆಟ್ ಕ್ಲಬ್)

* ಮೈಸೂರು: ಹರಿಕೃಷ್ಣ ಕುಮಾರ್ ಆರ್.ಕೆ. (ಫ್ರೆಂಡ್ಸ್‌ಯೂನಿಯನ್ ಸಿಸಿ, ನ್ಯಾಷನಲ್, ಸರಸ್ವತಿಪುರಂ ಸಿಸಿ, ರೈಸಿಂಗ್ ಸ್ಟಾರ್ ಸಿಸಿ)

ವಲಯ ನಿಮಂತ್ರಕರು (ಸ್ಪರ್ಧೆ ಸಂಭವ)

* ಶಿವಮೊಗ್ಗ: ಎಚ್‌.ಎಸ್. ಸದಾನಂದ (ದುರ್ಗಿಗುಡಿ ಸಿಎ), ಎ.ವಿ. ಸಂಜಯಕುಮಾರ್ (ಫ್ರೆಂಡ್ಸ್‌ ಸಿಸಿ)

* ತುಮಕೂರು: ಸಿ.ಆರ್. ಹರೀಶ್ (ತುಮಕೂರು ಸಿಸಿ), ಕೆ. ಶಶಿಧರ್ (ವೀನಸ್ ಸಿಸಿ), ಜಿ.ಕೆ. ಸತೀಶಚಂದ್ರ (ತುಮಕೂರ ಒಕೆಷನಲ್ಸ್)

* ಮಂಗಳೂರು: ಮಹಾಬಲ ಮಾರ್ಲ (ಸಿಟಿ ಕ್ರಿಕೆಟರ್ಸ್, ಮಂಗಳೂರು), ರತನ್ ಕುಮಾರ್ (ಮಂಗಳೂರು ಸ್ಪೋರ್ಟ್ಸ್ ಕ್ಲಬ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.