ADVERTISEMENT

ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌: ಬೆಂಗಳೂರಿಗೆ ಮಯಂಕ್‌, ಗುಲ್ಬರ್ಗಕ್ಕೆ ಮನೀಷ್‌

ಆಗಸ್ಟ್ 7ರಿಂದ ಮಹಾರಾಜ ಟ್ರೋಫಿ ಟೂರ್ನಿ: ಡ್ರಾಫ್ಟ್ ಮೂಲಕ ಆಟಗಾರರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2022, 14:39 IST
Last Updated 30 ಜುಲೈ 2022, 14:39 IST
ಮಯಂಕ್ ಅಗರವಾಲ್ ಮತ್ತು ಮನೀಷ್ ಪಾಂಡೆ– ಪ್ರಜಾವಾಣಿ ಚಿತ್ರ
ಮಯಂಕ್ ಅಗರವಾಲ್ ಮತ್ತು ಮನೀಷ್ ಪಾಂಡೆ– ಪ್ರಜಾವಾಣಿ ಚಿತ್ರ   

ಬೆಂಗಳೂರು: ಮಯಂಕ್ ಅಗರವಾಲ್‌ ಮತ್ತು ಮನೀಷ್ ಪಾಂಡೆ ಅವರು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಆಯೋಜಿಸಲಿರುವ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಕ್ರಮವಾಗಿ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಗುಲ್ಬರ್ಗಾ ಮಿಸ್ಟಿಕ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಡ್ರಾಫ್ಟ್‌ ಮೂಲಕ ಆಟಗಾರರನ್ನು ಆಯ್ಕೆ ಮಾಡಲಾಯಿತು.ಆಗಸ್ಟ್ 7ರಿಂದ ಮೈಸೂರಿನಲ್ಲಿ ಟೂರ್ನಿ ಆರಂಭವಾಗಲಿದೆ.

ಬ್ಯಾಟರ್‌ ಕರುಣ್‌ ನಾಯರ್ ಮೈಸೂರು ವಾರಿಯರ್ಸ್, ಆಲ್‌ರೌಂಡರ್ ಕೆ.ಗೌತಮ್‌ ಶಿವಮೊಗ್ಗ ಸ್ಟ್ರೈಕರ್ಸ್, ಅಭಿನವ್ ಮನೋಹರ್ ಮಂಗಳೂರು ಯುನೈಟೆಡ್‌ ಮತ್ತು ವೇಗದ ಬೌಲರ್ ಅಭಿಮನ್ಯು ಮಿಥುನ್‌ ಹುಬ್ಬಳ್ಳಿ ಟೈಗರ್ಸ್ ಪಾಲಾದರು.

ADVERTISEMENT

ಆರೂ ತಂಡಗಳ ಮಾಲೀಕರು ಮೊದಲಿಗೆ ಕೋಚ್‌ಗಳನ್ನು ಆಯ್ಕೆ ಮಾಡಿಕೊಂಡರು. ಬಳಿಕ ಆಟಗಾರರ ಆಯ್ಕೆ ನಡೆಯಿತು. ಆಟಗಾರರನ್ನು ಎ,ಬಿ.ಸಿ,ಡಿ ಗುಂಪುಗಳಾಗಿ ವರ್ಗೀಕರಿಸಲಾಗಿತ್ತು. ಎ ಗುಂಪಿನಲ್ಲಿ ಭಾರತ ಮತ್ತು ಐಪಿಎಲ್‌ ತಂಡದಲ್ಲಿ ಆಡಿದವರು, ಬಿ ಗುಂಪಿನಲ್ಲಿ ರಾಜ್ಯ ತಂಡ ಪ್ರತಿನಿಧಿಸಿದವರು, ಸಿ ಗುಂಪಿನಲ್ಲಿ 19, 24, 25 ವರ್ಷದೊಳಗಿನ ರಾಜ್ಯ ತಂಡವನ್ನು ಪ್ರತಿನಿಧಿಸಿದವರು ಹಾಗೂ ಇನ್ನುಳಿದ ಆಟಗಾರರು ಡಿ ಗುಂಪಿನಲ್ಲಿ ಇದ್ದರು.

ಡ್ರಾಫ್ಟ್‌ನಲ್ಲಿ ಒಟ್ಟು 740 ಆಟಗಾರರಿದ್ದರು. ‘ಎ’ ಗುಂಪಿನಲ್ಲಿ 14, ‘ಬಿ’ಯಲ್ಲಿ 32, ‘ಸಿ’ಯಲ್ಲಿ 111 ಮತ್ತು ಡಿ ಗುಂಪಿನಲ್ಲಿ 583 ಆಟಗಾರರು ಲಭ್ಯ ಇದ್ದರು.

ಟೂರ್ನಿಯ ಉದ್ಘಾಟನೆಯು ಮೈಸೂರಿನಲ್ಲಿ ನಡೆಯಲಿದ್ದು ಒಟ್ಟು 18 ಪಂದ್ಯಗಳು ಅಲ್ಲಿ ನಡೆಯಲಿವೆ. ಆಗಸ್ಟ್ 26ರಂದು ಫೈನಲ್ ಸೇರಿದಂತೆ 16 ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ.

ಈ ಸಂದರ್ಭದಲ್ಲಿ ಕೆಎಸ್‌ಸಿಎ ಅಧ್ಯಕ್ಷ ರೋಜರ್ ಬಿನ್ನಿ, ಉಪಾಧ್ಯಕ್ಷ ಜೆ.ಅಭಿರಾಮ್‌, ಕಾರ್ಯದರ್ಶಿ ಸಂತೋಷ್ ಮೆನನ್‌, ಜಂಟಿ ಕಾರ್ಯದರ್ಶಿ ಶಾವೀರ್ ತಾರಾಪುರೆ, ಖಜಾಂಚಿ ವಿನಯ್ ಮೃತ್ಯುಂಜಯ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.