ADVERTISEMENT

ಮ್ಯಾಚ್ ಫಿಕ್ಸಿಂಗ್‌ ಪ್ರಕರಣ: ‘ಬಳ್ಳಾರಿ ಟಸ್ಕರ್ಸ್‌’ ಮಾಲೀಕನ ಪತ್ತೆಗೆ ಲುಕ್‌ಔಟ್‌

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2019, 19:45 IST
Last Updated 15 ನವೆಂಬರ್ 2019, 19:45 IST
ಅರವಿಂದ ವೆಂಕಟೇಶ್ ರೆಡ್ಡಿ
ಅರವಿಂದ ವೆಂಕಟೇಶ್ ರೆಡ್ಡಿ   

ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಕ್ರಿಕೆಟ್‌ ಪಂದ್ಯಗಳಲ್ಲಿ ನಡೆದಿದೆ ಎನ್ನಲಾದ ಮ್ಯಾಚ್‌ ಫಿಕ್ಸಿಂಗ್‌ನಲ್ಲಿ ಬಳ್ಳಾರಿ ಟಸ್ಕರ್ಸ್ ತಂಡದ ಮಾಲೀಕ ಅರವಿಂದ ವೆಂಕಟೇಶ್ ರೆಡ್ಡಿ ಅವರೂ ಭಾಗಿಯಾಗಿರುವ ಅನುಮಾನ ಸಿಸಿಬಿ ಪೊಲೀಸರಿಗೆ ಬಂದಿದೆ.

ಪ್ರಕರಣದ ತನಿಖೆಗೆ ಹಾಜರಾಗುವಂತೆ ರೆಡ್ಡಿ ಅವರ ವಿಳಾಸಕ್ಕೆ ಸಿಸಿಬಿ ಪೊಲೀಸರು ಈಗಾಗಲೇ ನೋಟಿಸ್‌ ಕಳುಹಿಸಿದ್ದಾರೆ. ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅವರುವಿದೇಶದಲ್ಲಿ ತಲೆಮರೆಸಿಕೊಂಡು ಓಡಾಡುತ್ತಿರುವ ಮಾಹಿತಿ ಇದ್ದು, ಪತ್ತೆಗಾಗಿ ಇದೀಗ ಲುಕ್‌ಔಟ್‌ ನೋಟಿಸ್ ಸಹ ಹೊರಡಿಸಲಾಗಿದೆ.

‘ಪ್ರಕರಣದಲ್ಲಿ ರೆಡ್ಡಿ ಅವರ ಪಾತ್ರ ಇರುವ ಸಂಗತಿ ತನಿಖೆಯಿಂದ ಗೊತ್ತಾಗಿದೆ. ಅವರ ವಿಚಾರಣೆ ನಡೆಸಬೇಕಾದ ಅಗತ್ಯವಿದೆ. ಅವರಿಗೆ ನೋಟಿಸ್‌ ನೀಡಲಾಗಿದೆ. ಇದುವರೆಗೂ ವಿಚಾರಣೆಗೆ ಹಾಜರಾಗಿಲ್ಲ’ ಎಂದು ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ ತಿಳಿಸಿದರು.

ADVERTISEMENT

ದುಬೈನಲ್ಲಿರುವ ಶಂಕೆ: ‘ಬಳ್ಳಾರಿ ಟಸ್ಕರ್ಸ್ ತಂಡದ ಜೊತೆಗೆ ದುಬೈ ತಂಡಕ್ಕೂ ರೆಡ್ಡಿಯವರು ಮಾಲೀಕರಾಗಿದ್ದಾರೆ. ಈ ಹಿಂದೆಯೇ ಅವರನ್ನು ಒಂದು ಬಾರಿ ವಿಚಾರಣೆಗೆ ಒಳಪಡಿಸಲಾಗಿತ್ತು. ಎರಡನೇ ಬಾರಿ ವಿಚಾರಣೆಗೆ ಬರುವಂತೆ ನೋಟಿಸ್‌ ನೀಡಿದರೂ ಪ್ರತಿಕ್ರಿಯಿಸಿಲ್ಲ. ಸದ್ಯ ಅವರು ದುಬೈನಲ್ಲಿರುವ ಮಾಹಿತಿ ಇದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ಎಲ್ಲ ವಿಮಾನ ನಿಲ್ದಾಣ ಹಾಗೂ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೂ ರೆಡ್ಡಿ ಬಗ್ಗೆ ತಿಳಿಸಲಾಗಿದೆ. ಅವರ ಬಗ್ಗೆ ಮಾಹಿತಿ ಸಿಕ್ಕರೆ ತಿಳಿಸುವಂತೆ ಕೋರಲಾಗಿದೆ’ ಎಂದು ಮೂಲಗಳು ಹೇಳಿವೆ.

ಬೌಲರ್ ಕೆ.ಸಿ.ಕಾರ್ಯಪ್ಪ ವಿಚಾರಣೆ
ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್‌ ಪ್ರಕರಣದಲ್ಲಿ ಐಪಿಎಲ್ ಆಟಗಾರ ಕೆ.ಸಿ.ಕಾರ್ಯಪ್ಪ ಅವರು ಹೆಸರೂ ಕೇಳಿಬಂದಿದ್ದು, ಹೆಚ್ಚಿನ ಮಾಹಿತಿಗಾಗಿ ಅವರನ್ನು ಸಿಸಿಬಿ ಪೊಲೀಸರು ಶುಕ್ರವಾರ ವಿಚಾರಣೆ ನಡೆಸಿದರು.

ಕಾರ್ಯಪ್ಪ ಅವರುಕೆಪಿಎಲ್‌ನಲ್ಲಿ ವಿಜಯಪುರ ಬುಲ್ಸ್‌ ತಂಡದಲ್ಲಿ ಆಡಿದ್ದರು. ಬೌಲರ್‌ ಆಗಿರುವ ಅವರು ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡದಲ್ಲಿ ಆಡಿದ್ದರು. ಸದ್ಯ ಕಿಂಗ್ಸ್‌ ಇಲೆವೆನ್ ಪಂಜಾಬ್ ತಂಡ ಸೇರಿದ್ದರು.

‘ಪ್ರಕರಣದಲ್ಲಿ ಯಾರ ಹೆಸರು ಕೇಳಿಬರುತ್ತದೆಯೋ ಅವರೆಲ್ಲರನ್ನೂ ವಿಚಾರಣೆ ನಡೆಸಲಾಗುತ್ತಿದೆ. ಹೇಳಿಕೆ ಪಡೆದು ಪರಿಶೀಲನೆ ನಡೆಸಿದ ಬಳಿಕವೇ ಅವರ ಪಾತ್ರವೇನು ಎಂಬುದು ತಿಳಿಯಲಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.