ಲಖನೌ: ಇಂಡಿಯನ್ ಪ್ರೀಮಿಯರ್ ಲೀಗ್‌ನ(ಐಪಿಎಲ್) ಲಖನೌ ಸೂಪರ್ ಜೈಂಟ್ಸ್ ತಂಡದ ವೇಗದ ಬೌಲರ್ ಶಿವಂ ಮಾವಿ, ಪಕ್ಕೆಲುಬು ಗಾಯದಿಂದ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ.
ಕೊನೆಯ ಬಾರಿಗೆ ಆಗಸ್ಟ್ 2023ರಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್ ಆಡಿರುವ 25 ವರ್ಷದ ವೇಗಿ, ಉತ್ತರ ಪ್ರದೇಶದ ಪರ ಸಂಪೂರ್ಣ ದೇಶೀಯ ಋತುವನ್ನು ಮಿಸ್ ಮಾಡಿಕೊಂಡಿದ್ದರು.
‘ಪ್ರತಿಭಾವಂತ ಬಲಗೈ ವೇಗದ ಬೌಲರ್ ಶಿವಂ ಮಾವಿ, ಡಿಸೆಂಬರ್‌ನಲ್ಲಿ ನಡೆದ ಹರಾಜಿನ ಬಳಿಕ ತಂಡ ಸೇರಿಕೊಂಡಿದ್ದರು. ಸರಣಿಪೂರ್ವ ಶಿಬಿರದಲ್ಲಿ ಭಾಗವಹಿಸಿದ್ದರು. ಅವರು ನಮ್ಮ ತಂಡದ ಪ್ರಮುಖ ಶಕ್ತಿಯಾಗಿದ್ದರು. ಇಷ್ಟು ಬೇಗ ಮಾವಿ ತಂಡದಿಂದ ಹೊರಬೀಳುತ್ತಿರುವುದರಿಂದ ಅವರು ಮತ್ತು ನಾವು ಇಬ್ಬರೂ ಹತಾಶೆಗೊಂಡಿದ್ದೇವೆ’ಎಂದು ಎಲ್‌ಎಸ್‌ಜಿ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತದ ಪರ 6 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಮಾವಿ, ಕಳೆದ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ತಂಡದಲ್ಲಿದ್ದರು. ಆದರೆ, ಆಗ ಅವರಿಗೆ ಒಂದೇ ಒಂದು ಪಂದ್ಯ ಆಡುವ ಅವಕಾಶವೂ ಸಿಕ್ಕಿರಲಿಲ್ಲ. ಬಳಿಕ, 2023ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಲಖನೌ ತಂಡ ₹6.4 ಕೋಟಿ ನೀಡಿ ಖರೀದಿಸಿತ್ತು.
‘ಶಿವಂ ಮಾವಿ ಚೇತರಿಕೆಗೆ ಎಲ್ಲ ರೀತಿಯ ಬೆಂಬಲ ನೀಡಲು ಫ್ರಾಂಚೈಸಿ ಸಿದ್ಧವಿದೆ. ಅವರು ಸಂಪೂರ್ಣ ಚೇತರಿಸಿಕೊಂಡು ಹಿಂದಿರಗಲೆಂದು ಆಶಿಸುತ್ತೇವೆ. ಅವರು ಮತ್ತಷ್ಟು ಬಲಿಷ್ಠವಾಗಿ ಹಿಂದಿರುಗುವ ವಿಶ್ವಾಸವಿದೆ’ ಎಂದು ಪ್ರಕಟಣೆ ತಿಳಿಸಿದೆ.
‘ನಾನು ನನ್ನ ತಂಡದ ಪರ ಆಡಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ. ದುರಾದೃಷ್ಟವಶಾತ್ ಗಾಯದ ಸಮಸ್ಯೆಯಿಂದ ನಾನು ತೆರಳಬೇಕಿದೆ’ ಎಂಂದು ಮಾವಿ ಹೇಳಿದ್ದಾರೆ.
‘ಒಬ್ಬ ಆಟಗಾರ ಮಾನಸಿಕವಾಗಿ ಬಲಿಷ್ಠವಾಗಿದ್ದುಕೊಂಡು, ಪುನಶ್ಚೇತನದ ಸಂದರ್ಭ ಯಾವ ವಿಭಾಗಗಳ ಬಗ್ಗೆ ಗಮನ ಹರಿಸಬೇಕಿದೆ ಎಂಬುದನ್ನು ಅರಿತಿರಬೇಕಿದೆ .ಇಲ್ಲಿ ಒಳ್ಳೆಯ ಸಿಬ್ಬಂದಿ ಇದ್ದಾರೆ’ಎಂದು ಎಕ್ಸ್ ಪೋಸ್ಟ್‌ನ ವಿಡಿಯೊದಲ್ಲಿ ಮಾವಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.