ADVERTISEMENT

ಮಹಾರಾಜ ಟ್ರೋಫಿ ಕ್ರಿಕೆಟ್‌: ಮಂಗಳೂರು ಡ್ರ್ಯಾಗನ್ಸ್‌ ಶುಭಾರಂಭ

ಆರ್.ಜಿತೇಂದ್ರ
Published 12 ಆಗಸ್ಟ್ 2025, 0:25 IST
Last Updated 12 ಆಗಸ್ಟ್ 2025, 0:25 IST
<div class="paragraphs"><p>ಮಂಗಳೂರು ಡ್ರ್ಯಾಗನ್ಸ್‌ ಪರ ಅರ್ಧ ಶತಕ (53) ಗಳಿಸಿದ ಮೆಕ್ನಿಲ್‌ ನೊರೊನಾ ಬ್ಯಾಟಿಂಗ್‌ ವೈಖರಿ </p></div>

ಮಂಗಳೂರು ಡ್ರ್ಯಾಗನ್ಸ್‌ ಪರ ಅರ್ಧ ಶತಕ (53) ಗಳಿಸಿದ ಮೆಕ್ನಿಲ್‌ ನೊರೊನಾ ಬ್ಯಾಟಿಂಗ್‌ ವೈಖರಿ

   

-ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.

ಮೈಸೂರು: ಆಲ್‌ರೌಂಡರ್‌ ಮೆಕ್ನೀಲ್ ನೊರೊನಾ (53 ರನ್, 10ಕ್ಕೆ 1 ವಿಕೆಟ್‌) ಅವರ ಉಪಯುಕ್ತ ಆಟದ ನೆರವಿನಿಂದ ಮಂಗಳೂರು ಡ್ರ್ಯಾಗನ್ಸ್ ತಂಡವು ಶ್ರೀರಾಮ್‌ ಗ್ರೂಪ್‌ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಸೋಮವಾರ ಗುಲ್ಬರ್ಗ ಮಿಸ್ಟಿಕ್ಸ್‌ ಎದುರು 33 ರನ್‌ಗಳಿಂದ ಗೆದ್ದು ಶುಭಾರಂಭ ಮಾಡಿತು.

ADVERTISEMENT

ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಟೂರ್ನಿಯ ಈ ಪಂದ್ಯದಲ್ಲಿ ಮಂಗಳೂರು ಡ್ರ್ಯಾಗನ್ಸ್ ನೀಡಿದ 181 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನತ್ತಲು ಗುಲ್ಬರ್ಗ ಮಿಸ್ಟಿಕ್ಸ್‌ ಬ್ಯಾಟರ್‌ಗಳು ತಿಣುಕಾಡಿದರು. ಸಂಜೆಯ ಚಳಿ, ಹೊನಲು ಬೆಳಕಿನ ನಡುವೆ ಕ್ರೀಸ್‌ನಲ್ಲಿ ನಿಲ್ಲಲು ಪರದಾಡಿದ ತಂಡವು 147 ರನ್‌ಗೆ ಆಲೌಟ್‌ ಆಯಿತು.

ಗುರಿ ಬೆನ್ನತ್ತಿದ ಗುಲ್ಬರ್ಗ ಪರ ಆರಂಭಿಕರಾದ ಲವನೀತ್‌ ಸಿಸೋಡಿಯಾ ಹಾಗೂ ನಿಕಿನ್‌ ಜೋಸ್ ಮೊದಲ ಓವರ್‌ನಿಂದಲೇ ಆಕ್ರಮಣಕಾರಿ ಆಟಕ್ಕೆ ಇಳಿದರು. ಆದರೆ ನಾಲ್ಕನೇ ಓವರ್‌ನಲ್ಲಿ ಮಂಗಳೂರು ತಂಡದ ನಾಯಕ ಶ್ರೇಯಸ್‌ ಗೋಪಾಲ್‌ ಈ ಜೊತೆಯಾಟ ಮುರಿದರು. ಆ ಓವರ್‌ನ ಎರಡನೇ ಎಸೆತದಲ್ಲಿ ಲವನೀತ್‌, ಲೋಚನ್‌ ಗೌಡಗೆ ಕ್ಯಾಚಿತ್ತು ನಿರ್ಗಮಿಸಿದರೆ, ಐದನೇ ಎಸೆತದಲ್ಲಿ ನಿಕಿನ್‌ ಜೋಸ್‌ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

ಮಧ್ಯಮ ಕ್ರಮಾಂಕದಲ್ಲಿ ಗುಲ್ಬರ್ಗಕ್ಕೆ ಆಸರೆಯಾಗಿದ್ದ ಪ್ರಜ್ವಲ್‌ ಪವನ್‌ (25) ರನೌಟ್‌ ಆದರು. ಉಳಿದ ಆಟಗಾರರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ವಿಜೇತ ತಂಡದ ಪರ ನಾಯಕ ಶ್ರೇಯಸ್ ಗೋಪಾಲ್‌ ಮೂರು ವಿಕೆಟ್‌ ಉರುಳಿಸಿ ಯಶಸ್ವಿಯೆನಿಸಿದರು. ಮಧ್ಯಮ ವೇಗಿ ಕ್ರಾಂತಿಕುಮಾರ್‌ ಸಹ 3 ವಿಕೆಟ್‌ ಪಡೆದರು.

ಮೆಕ್ನೀಲ್ ಅಬ್ಬರ:

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಮಂಗಳೂರು ಡ್ರ್ಯಾಗನ್ಸ್‌ಗೆ ಆರಂಭಿಕರಾದ ಲೋಚನ್ ಗೌಡ (27) ಹಾಗೂ ಬಿ.ಆರ್. ಶರತ್ (16) ಅವರು 54 ರನ್ ಜೊತೆಯಾಟದ ಆರಂಭ ಒದಗಿಸಿದರು. ಮೌನಿಶ್‌ ರೆಡ್ಡಿ ಎಸೆದ ಟೂರ್ನಿಯ ಮೊದಲ ಎಸೆತದಲ್ಲೇ ಸಿಕ್ಸರ್ ಹೊಡೆದ ಲೋಚನ್‌ ಅಬ್ಬರಿಸುವ ಸೂಚನೆ ನೀಡಿದರು.

ಇನ್ನಿಂಗ್ಸ್‌ನ ಆರನೇ ಓವರ್‌ನಲ್ಲಿ ಎಡಗೈ ಸ್ಪಿನ್ನರ್ ಪೃಥ್ವಿರಾಜ್‌ ಶೇಖಾವತ್‌, ಶರತ್‌ ವಿಕೆಟ್‌ ಮೂಲಕ ಈ ಜೋಡಿಯನ್ನು ಬೇರ್ಪಡಿಸಿದರು. ಮರು ಎಸೆತದಲ್ಲೇ ಲೋಚನ್‌, ಶಶಿಕುಮಾರ್ ಕಾಂಬ್ಳೆ ಅವರ ಚುರುಕಾದ ಥ್ರೋಗೆ ರನೌಟ್ ಆಗಿ ನಿರಾಸೆ ಅನುಭವಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಆರ್ಭಟಿಸಿದ ಮೆಕ್ನಿಲ್‌ ನೊರೊನಾ ಕೇವಲ 28 ಎಸೆತದಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್‌ ಸಹಿತ 53 ರನ್‌ ಗಳಿಸಿ ಪೃಥ್ವಿರಾಜ್‌ಗೆ ವಿಕೆಟ್‌ ಒಪ್ಪಿಸಿದರು. ಶ್ರೇಯಸ್ ಗೋಪಾಲ್‌ (20) ಅಜೇಯರಾಗಿ ಉಳಿದು ತಂಡವನ್ನು ಸ್ಮರ್ಧಾತ್ಮಕ ಮೊತ್ತದತ್ತ ಒಯ್ದರು.

ಹೊಸ ನಿಯಮ:

ಇದೇ ಮೊದಲ ಬಾರಿಗೆ ದೇಶಿಯ ಟೂರ್ನಿಯೊಂದರಲ್ಲಿ ನೆಟ್‌ ರನ್‌ರೇಟ್‌ ಬದಲು ನೆಟ್‌ ರಿಲೆಟಿವ್ ರನ್‌ ರೇಷಿಯೊ (ಎನ್‌ಆರ್‌ಆರ್‌ಆರ್‌) ನಿಯಮ ಜಾರಿಗೆ ತರಲಾಗಿದೆ. ಇಲ್ಲಿ ತಂಡವೊಂದು ಗಳಿಸಿದ ರನ್‌ ಜೊತೆಗೆ ಆಡಿದ ಒಟ್ಟು ಓವರ್‌, ಕಳೆದುಕೊಂಡ ವಿಕೆಟ್ ಎಲ್ಲವನ್ನೂ ಪರಿಗಣಿಸಿ ರನ್‌ರೇಟ್ ಅನ್ನು ಅಳೆಯಲಾಗುತ್ತದೆ. ಅಂಪೈರ್‌ಗಳಾದ ಕೇಶವ್‌ ಕೊಲ್ಲೆ, ವಿ. ಜಯದೇವನ್‌ ಅವರು ಈ ನಿಯಮವನ್ನು ರೂಪಿಸಿದ್ದಾರೆ.

ವಾರಿಯರ್ಸ್‌ಗೆ ಜಯ

ಮೈಸೂರು: ನಾಯಕ ಮನೀಷ್‌ ಪಾಂಡೆ ಅಬ್ಬರದ ಬ್ಯಾಟಿಂಗ್‌ (ಔಟಾಗದೇ 58) ನೆರವಿನಿಂದ ಮೈಸೂರು ವಾರಿಯರ್ಸ್‌ ತನ್ನ ಮೊದಲ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ತಂಡವನ್ನು 39 ರನ್ ಅಂತರದಿಂದ ಮಣಿಸಿತು.

ಟಾಸ್‌ ಗೆದ್ದು ಬ್ಯಾಟಿಂಗ್ ಆರಂಭಿಸಿದ ವಾರಿಯರ್ಸ್‌ ಆರಂಭಿಕ ಆಘಾತ ಅನುಭವಿಸಿದ್ದು, ಮನೀಷ್‌ ಹಾಗೂ ವಿಕೆಟ್‌ ಕೀಪರ್ ಸುಮಿತ್‌ ಕುಮಾರ್ (ಔಟಾಗದೇ 44) ಆಸರೆ ಆದರು. ಈ ಜೋಡಿ ಆರನೇ ವಿಕೆಟ್‌ಗೆ 48 ಎಸೆತಗಳಲ್ಲಿ 86 ರನ್‌ ಕಲೆ ಅಜೇಯರಾಗಿ ಉಳಿಯಿತು. ಎಡಗೈ ಸಿನ್ನರ್ ಶುಭಾಂಗ್‌ ಹೆಗ್ಡೆ 4 ವಿಕೆಟ್ ಉರುಳಿಸಿದರು. 181 ರನ್‌ಗಳ ಗುರಿ ಬೆನ್ನತ್ತಿದ ಬೆಂಗಳೂರು ತಂಡ ಸಹ ಆರಂಭದಲ್ಲೇ ಆಘಾತ ಅನುಭವಿಸಿತು. ನಾಯಕ ಮಯಂಕ್‌ ಅಗರವಾಲ್‌ ಅರ್ಧಶತಕ ಗಳಿಸಿ (66) ಏಕಾಂಗಿಯಾಗಿ ಪ್ರತಿರೋಧ ತೋರಿದರು.

ಸಂಕ್ಷಿಪ್ತ ಸ್ಕೋರ್‌:

ಮಂಗಳೂರು ಡ್ರ್ಯಾಗನ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 180 (ಮೆಕ್ನಿಲ್‌ ನೊರೊನಾ 53, ಲೋಚನ್‌ ಗೌಡ 27, ಶ್ರೇಯಸ್‌ ಗೋಪಾಲ್‌ ಔಟಾಗದೆ 20. ಪೃಥ್ವಿರಾಜ್‌ ಶೇಖಾವತ್‌ 21ಕ್ಕೆ 3, ವೈಶಾಖ್‌ ವಿಜಯ್‌ಕುಮಾರ್ 28ಕ್ಕೆ2)

ಗುಲ್ಬರ್ಗ ಮಿಸ್ಟಿಕ್ಸ್‌: 19.5 ಓವರ್‌ಗಳಲ್ಲಿ 147 (ಲವನೀತ್‌ ಸಿಸೋಡಿಯಾ 26, ಪ್ರಜ್ವಲ್ ಪವನ್‌ 25. ಶ್ರೇಯಸ್ ಗೋಪಾಲ್‌ 30ಕ್ಕೆ 3, ಕ್ರಾಂತಿಕುಮಾರ್‌ 36ಕ್ಕೆ 3)

ಪಂದ್ಯದ ಆಟಗಾರ: ಮೆಕ್ನೀಲ್ ನೊರೊನಾ (ಮಂಗಳೂರು ಡ್ರ್ಯಾಗನ್ಸ್‌)

ಇಂದಿನ ಪಂದ್ಯಗಳು

ಹುಬ್ಬಳ್ಳಿ ಟೈಗರ್ಸ್‌ v/s ನಮ್ಮ ಶಿವಮೊಗ್ಗ. ಪಂದ್ಯ ಆರಂಭ– ಮಧ್ಯಾಹ್ನ 3.15

ಮೈಸೂರು ವಾರಿಯರ್ಸ್ v/s ಗುಲ್ಬರ್ಗ ಮಿಸ್ಟಿಕ್ಸ್‌. ಪಂದ್ಯ ಆರಂಭ– ಸಂಜೆ 7.15

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.