ADVERTISEMENT

ಮಂದಾನಾ, ಜೆಮಿಮಾ ಅರ್ಧ ಶತಕ, ಭಾರತ ಮಹಿಳೆಯರಿಗೆ ಸರಣಿ ಜಯ

ವೆಸ್ಟ್‌ ಇಂಡೀಸ್‌ ವಿರುದ್ಧ ಏಕದಿನ ಸರಣಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 18:30 IST
Last Updated 7 ನವೆಂಬರ್ 2019, 18:30 IST
   

ನಾರ್ತ್‌ ಸೌಂಡ್‌, ಆ್ಯಂಟಿಗಾ: ತಂಡಕ್ಕೆ ಪುನರಾಗಮನ ಮಾಡಿದ ಸ್ಮೃತಿ ಮಂದಾನ ಮತ್ತು ಜೆಮಿಮಾ ರೋಡ್ರಿಗಸ್‌ ಅವರ ಅರ್ಧಶತಕಗಳ ನೆರವಿನಿಂದ ಭಾರತ ಮಹಿಳೆಯರು ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್‌ ತಂಡವನ್ನು ಆರು ವಿಕೆಟ್‌ಗಳಿಂದ ಸುಲಭವಾಗಿ ಸೋಲಿಸಿದರು.

ಬುಧವಾರ ರಾತ್ರಿ ನಡೆದ ಈ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ಸರಣಿಯನ್ನೂ 2–1 ರಿಂದ ಗೆದ್ದುಕೊಂಡಿತು.

ಟಾಸ್‌ ಗೆದ್ದ ವೆಸ್ಟ್ ಇಂಡೀಸ್‌ ಸರಿಯಾಗಿ 50 ಓವರುಗಳಲ್ಲಿ 194 ರನ್‌ಗಳಿಗೆ ಆಲೌಟ್‌ ಆಯಿತು. ಭಾರತ 43ನೇ ಓವರ್‌ನ ಮೊದಲ ಎಸೆತದಲ್ಲಿ ನಾಲ್ಕು ವಿಕೆಟ್‌ ನಷ್ಟದಲ್ಲಿ ಗುರಿತಲುಪಿತು.

ADVERTISEMENT

ಕಾಲಿನ ಹೆಬ್ಬೆರಳಿಗಾದ ಗಾಯದಿಂದ ಮೊದಲ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದ ಮಂದಾನಾ 63 ಎಸೆತಗಳಲ್ಲಿ 74 ರನ್‌ ಹೊಡೆದರು. ಅವರು ಜೆಮಿಮಾ ಜೊತೆ (92 ಎಸೆತಗಳಲ್ಲಿ 69) ಜೊತೆ 141 ರನ್‌ ಜೊತೆಯಾಟವಾಡಿ ತಂಡವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಿದರು.

ಅರ್ಧ ಶತಕದ ಹಾದಿಯಲ್ಲಿ ಮಂದಾನಾ ಏಕದಿನ ಪಂದ್ಯಗಳಲ್ಲಿ ಅತಿ ವೇಗವಾಗಿ ಎರಡು ಸಹಸ್ರ ರನ್‌ ಪೂರೈಸಿದ ಭಾರತೀಯ ಬ್ಯಾಟ್ಸ್‌ವುಮನ್‌ ಎಂಬ ಗೌರವಕ್ಕೆ ಪಾತ್ರರಾದರು. 23 ವರ್ಷದ ಆಟಗಾರ್ತಿ 51ನೇ ಇನಿಂಗ್ಸ್‌ನಲ್ಲಿ ಈ ಮೈಲಿಗಲ್ಲನ್ನು ದಾಟಿದರು.

ಇನ್ನು ಉಭಯ ತಂಡಗಳು ಐದು ಪಂದ್ಯಗಳ ಟಿ–20 ಸರಣಿಯನ್ನು ಆಡಲಿವೆ. ಮೊದಲ ಪಂದ್ಯ ಗ್ರಾಸ್‌ ಐಲ್‌ನಲ್ಲಿ ಭಾನುವಾರ ನಡೆಯಲಿದೆ.

ಸ್ಕೋರುಗಳು
ವೆಸ್ಟ್‌ ಇಂಡೀಸ್‌:
50 ಓವರುಗಳಲ್ಲಿ 194 (ಎಚ್‌.ಕೆ.ಮ್ಯಾಥ್ಯೂಸ್‌ 26, ಸ್ಟೆಫಾನಿ ಟೇಲರ್‌ 79, ಸ್ಟೇಸಿ ಆ್ಯನ್‌ ಕಿಂಗ್‌ 38; ಜೂಲನ್‌ ಗೋಸ್ವಾಮಿ 30ಕ್ಕೆ2, ಪೂನಂ ಯಾದವ್‌ 35ಕ್ಕೆ2)
ಭಾರತ: 42.1 ಓವರುಗಳಲ್ಲಿ 4 ವಿಕೆಟ್‌ಗೆ 195 (ಸ್ಮೃತಿ ಮಂದಾನಾ 77, ಜೆಮಿಮಾ ರೋಡ್ರಿಗಸ್‌ 69, ಪಿ.ಜಿ.ರಾವುತ್‌ 24, ಮಿತಾಲಿ ರಾಜ್‌ 20; ಹೇಯ್ಲಿ ಮ್ಯಾಥ್ಯೂಸ್‌ 27ಕ್ಕೆ3).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.