ADVERTISEMENT

ಮಾನಸಿಕ ತುಮುಲ ಮೆಟ್ಟಿನಿಂತ ಗ್ಲೆನ್‌

ಬಿಗ್ ಬ್ಯಾಷ್‌ ಟೂರ್ನಿಯಲ್ಲಿ ಉತ್ತಮ ಸಾಧನೆ; ಐಪಿಎಲ್‌ನಲ್ಲಿ ಮಿಂಚುವರೇ?

ವಿಕ್ರಂ ಕಾಂತಿಕೆರೆ
Published 18 ಸೆಪ್ಟೆಂಬರ್ 2020, 17:42 IST
Last Updated 18 ಸೆಪ್ಟೆಂಬರ್ 2020, 17:42 IST
ಗ್ಲೆನ್‌ ಮ್ಯಾಕ್ಸ್‌ವೆಲ್ –ರಾಯಿಟರ್ಸ್ ಚಿತ್ರ
ಗ್ಲೆನ್‌ ಮ್ಯಾಕ್ಸ್‌ವೆಲ್ –ರಾಯಿಟರ್ಸ್ ಚಿತ್ರ   

ಮೆಲ್ಬರ್ನ್: ಒಂದು ವರ್ಷದ ಹಿಂದೆ ನಡೆದ ಬೆಳವಣಿಗೆ. ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್‌ ಮ್ಯಾಕ್ಸ್‌ವೆಲ್ ಕ್ರಿಕೆಟ್‌ನಿಂದ ದೂರ ಉಳಿಯಲು ನಿರ್ಧರಿಸಿದಾಗ ಅವರ ದೇಶ ಆಸ್ಟ್ರೇಲಿಯಾ ಮಾತ್ರವಲ್ಲ, ಕ್ರಿಕೆಟ್ ಜಗತ್ತೇ ಬೆಚ್ಚಿತ್ತು. ಮಾನಸಿಕ ಒತ್ತಡ ಮೆಟ್ಟಿನಿಲ್ಲಲು ಆಗುತ್ತಿಲ್ಲ ಎಂದು ಹೇಳಿ ಅವರು ಅಂಗಣ ತೊರೆಯಲು ತೀರ್ಮಾನಿಸಿದ್ದು ಕ್ರೀಡಾ ಅಭಿಮಾನಿಗಳ ಈ ಆತಂಕಕ್ಕೆ ಕಾರಣ.

ಕಳೆದ ಅಕ್ಟೋಬರ್‌ನಲ್ಲಿ ಶ್ರೀಲಂಕಾ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಮ್ಯಾಕ್ಸ್‌ವೆಲ್ ಅವರ ಮಾನಸಿಕ ತುಮುಲಗಳು ಹೆಚ್ಚಿದ್ದವು. ಹೀಗಾಗಿ ಅವರು ಸರಣಿಯಲ್ಲಿ ಆಡದೇ ಇರಲು ಹಾಗೂ ಕೆಲಕಾಲ ಕ್ರಿಕೆಟ್‌ನಿಂದ ದೂರವಿರಲು ನಿರ್ಧರಿಸಿದ್ದರು.

ಆದರೆ ಮಾನಸಿಕ ಸಮಸ್ಯೆಯನ್ನು ಹಾಗೆಯೇ ಉಳಿಸಿಕೊಂಡು ಅವರು ಕೊರಗಲಿಲ್ಲ. ತಮ್ಮನ್ನು ತಾವೇ ಪುನಶ್ಚೇ ತನಕ್ಕೆ ಒಡ್ಡಿ ಬದುಕಿನ ಹಾದಿಗೆ ಮರಳಿದರು.

ADVERTISEMENT

ಇಂಗ್ಲೆಂಡ್‌ನಲ್ಲಿ ಎರಡು ದಿನಗಳ ಹಿಂದೆ ಮುಕ್ತಾಯಗೊಂಡ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾಗೆ ಜಯ ಗಳಿಸಿಕೊಟ್ಟು ಮಾನಸಿಕವಾಗಿ ತಾನು ‘ಫಿಟ್‌’ ಆಗಿದ್ದೇನೆ ಎಂದು ತೋರಿಸಿಕೊಟ್ಟರು.

ಈಗ ಐಪಿಎಲ್‌ಗೂ ಸಜ್ಜಾಗಿದ್ದು ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಅವರ ಸಾಮರ್ಥ್ಯ ಪ್ರದರ್ಶನಕ್ಕಾಗಿ ಕಾಯುತ್ತಿದೆ.

ಮ್ಯಾಕ್ಸ್‌ವೆಲ್‌ ಪ್ರತಿಭಾವಂತ ಆಟಗಾರ. ಆದರೆ ತಮ್ಮ ಚಂಚಲ ಸ್ವಭಾವದಿಂದಾಗಿ ಕ್ರೀಸ್‌ನಲ್ಲಿ ಹೆಚ್ಚು ಕಾಲ ಉಳಿಯಲು ಆಗುತ್ತಿರಲಿಲ್ಲ. ಉದ್ವೇಗಕ್ಕೆ ಒಳಗಾಗುತ್ತಿದ್ದ ಅವರು ಕೆಟ್ಟ ಹೊಡೆತಗಳಿಗೆ ಕೈಹಾಕಿ ವಿಕೆಟ್ ಒಪ್ಪಿಸುವ ‘ಚಾಳಿ’ ಹೊಂದಿದ್ದರು. ಮಾನಸಿಕ ತುಮುಲ ಮೆಟ್ಟಿ ನಿಂತ ಅವರು ಈಗ ಮಾಗಿದ್ದಾರೆ, ಪ್ರಬುದ್ಧತೆ ಮೆರೆಯುತ್ತಿದ್ದಾರೆ.

ಎರಡು ತಿಂಗಳು ಕ್ರಿಕೆಟ್‌ನಿಂದ ದೂರ ಉಳಿದಿದ್ದ ವಿಕ್ಟೋರಿಯಾ ರಾಜ್ಯದ ಮ್ಯಾಕ್ಸ್‌ವೆಲ್, ಬಿಗ್ ಬ್ಯಾಷ್ ಟೂರ್ನಿಯಲ್ಲಿ ಚೇತರಿಕೆಯ ಲಕ್ಷಣಗಳನ್ನು ತೋರಿದ್ದರು. ಮೆಲ್ಬರ್ನ್ ಸ್ಟಾರ್ ಪರ ಅಜೇಯ 83 ರನ್‌ ಗಳಿಸಿ ಒತ್ತಡದಿಂದ ಮುಕ್ತ ಆಗಿರುವುದನ್ನು ಸಾಬೀತು ಮಾಡಿದ್ದರು.

ಫೆಬ್ರುವರಿಯಲ್ಲಿ ಮೊಣಕೈ ನೋವು ಕಾಡಿತು. ಆದರೂ ಅವರು ಎದೆಗುಂದಲಿಲ್ಲ. ಕೋವಿಡ್‌–19 ತಂದೊಡ್ಡಿದ ಸಂಕಷ್ಟದಿಂದಾಗಿ ವಿಕ್ಟೋರಿಯಾದಲ್ಲಿ ದೀರ್ಘಕಾಲದ ಲಾಕ್‌ಡೌನ್ ಹೇರಿದಾಗಲೂ ಅವರ ಮನೋಬಲಕ್ಕೆ ಧಕ್ಕೆಯಾಗಲಿಲ್ಲ. ಇಂಗ್ಲೆಂಡ್‌ ಎದುರಿನ ಸರಣಿಯ ನಿರ್ಣಾಯಕ ಪಂದ್ಯದ ನಿರ್ಣಾಯಕ ಘಟ್ಟಮ್ಯಾಕ್ಸ್‌ವೆಲ್‌ಗೆ ಸವಾ ಲಾಗಿತ್ತು. ಅವರು ಕ್ರೀಸ್‌ಗೆ ಬಂದಾಗ ಗೆಲುವಿಗೆ 199 ಎಸೆತಗಳಲ್ಲಿ 230 ರನ್‌ ಬೇಕಾಗಿತ್ತು. ಉದ್ವೇಗ, ಆತಂಕ ಮೆಟ್ಟಿನಿಂತು ಅವರು ಪಂದ್ಯ ಗೆದ್ದರು; ಜೀವನ ಹೋರಾಟದಲ್ಲೂ ಜಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.