ನವದೆಹಲಿ: ಕರುಣ್ ನಾಯರ್ ಎರಡು ವರ್ಷಗಳಿಂದ ಐಪಿಎಲ್‌ನಲ್ಲಿ ಅವಕಾಶ ಪಡೆದಿರಲಿಲ್ಲ. ‘ಡಿಯರ್ ಕ್ರಿಕೆಟ್ ಗಿವ್ ಮಿ ಒನ್ ಮೋರ್ ಛಾನ್ಸ್’ ಎಂದು ಅವರು 2022ರ ಡಿಸೆಂಬರ್‌ನಲ್ಲಿ ಟ್ವೀಟ್ ಮಾಡಿದ್ದರು ಕೂಡ. ಈ ಬಾರಿ ಅವರು ತಮಗೆ ದೊರೆತ ಮೊದಲ ಅವಕಾಶವನ್ನು ಎರಡೂ ಕೈಗಳಲ್ಲಿ ಬಾಚಿಕೊಂಡಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧ ಅಮೋಘ ಆಟವಾಡಿ 40 ಎಸೆತಗಳಲ್ಲಿ 89 ರನ್‌ಗಳ ಮಿಂಚಿನ ಇನಿಂಗ್ಸ್ ಆಡಿದ್ದಾರೆ. ಅಂತಿಮವಾಗಿ ಅವರ ಸೊಗಸಾದ ಇನಿಂಗ್ಸ್ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯ ಗೆಲ್ಲಲಾಗಲಿಲ್ಲ. 206 ರನ್‌ಗಳ ಗುರಿ ಬೆಂಬತ್ತಿದ ಅಕ್ಷರ್ ಪಟೇಲ್ ಬಳಗ 193 ರನ್‌ಗಳಿಗೆ ಆಲೌಟ್ ಆಯಿತು.
ಬೂಮ್ರಾ ಅವರಿಗೆ ಒಂದೇ ಓವರಿನಲ್ಲಿ ಎರಡು ಸಿಕ್ಸರ್ ಬಾರಿಸಿದವರು ತೀರಾ ಕಡಿಮೆ. ಆದರೆ ಕರುಣ್ ಅಂಥ ಪರಾಕ್ರಮ ತೋರಿದರು. ಅವರು ಆಡಿದ ರೀತಿ, ಮಾಡಿಕೊಂಡಿದ್ದ ಸಿದ್ಧತೆ, ತೋರಿದ ವಿಶ್ವಾಸ ಮೆಚ್ಚುಗೆ ಗಳಿಸಿತು. ಹಾಲಿ ವಿದರ್ಭ ತಂಡದಲ್ಲಿರುವ ಕರ್ನಾಟಕ ತಂಡದ ಮಾಜಿ ನಾಯಕ ಕರುಣ್, ಒಂದೇ ಋತುವಿನಲ್ಲಿ ವಿವಿಧ ಮಾದರಿಗಳಲ್ಲಿ 1870 ರನ್ ಕಲೆಹಾಕಿದ್ದರು.
‘ಪ್ರಾಮಾಣಿಕವಾಗಿ ಹೇಳುವುದಾದರೆ ಉತ್ತಮವಾಗಿ ಆಡುವ ವಿಶ್ವಾಸ ನನ್ನಲ್ಲಿತ್ತು. ನಾನು ಈ ಮೊದಲೇ ಐಪಿಎಲ್ ಆಡಿದ್ದರಿಂದ ಅಲ್ಲಿನ ಪರಿಸ್ಥಿತಿ ನನಗೆ ಹೊಸದಾಗಿರಲಿಲ್ಲ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
‘ಕಣಕ್ಕಿಳಿದು ಕೆಲವು ಎಸೆತಗಳನ್ನು ಎದುರಿಸಿ ಪಂದ್ಯದ ವೇಗಕ್ಕೆ, ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದಷ್ಟೇ ಮುಖ್ಯವಾಗಿತ್ತು’ ಎಂದು ನಾಯರ್ ಹೇಳಿದರು. ಕೊನೆಯ ಬಾರಿ ಐಪಿಎಲ್‌ನಲ್ಲಿದ್ದಾಗ ಅವರು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಆಡಿದ್ದರು.
ಪವರ್ ಪ್ಲೇಯಲ್ಲಿ ಕರುಣ್ ಸಾಂಪ್ರದಾಯಕ ಹೊಡೆತಗಳನ್ನು ಆಡಿದರು. ನಂತರ ಸುಧಾರಣೆ ತಂದುಕೊಂಡರು.
‘ನಾನು ಮನಸ್ಸಿನಲ್ಲೇ ಹೇಳಿಕೊಂಡೆ. ಸಮಯ ತೆಗೆದುಕೊ. ಸಹಜ ಹೊಡೆತಗಳಿಗೆ ಹೋಗು. ನಂತರ ಹೊಡೆತಗಳಲ್ಲಿ ಸುಧಾರಣೆ ತಂದುಕೊ’ ಎಂದು. ಅದೃಷ್ಟವಶಾತ್ ಎಲ್ಲವೂ ಅಂದುಕೊಡ ರೀತಿ ಆಯಿತು. ಚೆನ್ನಾಗಿ ಆಡಿದ್ದರಿಂದ ಸಂಸತವಾಗಿದೆ. ತಂಡ ಗೆದ್ದರೆ ಇನ್ನೂ ಸಂತಸವಾಗುತಿತ್ತು’ ಎಂದರು.
ಅವರು ತಂಡದ ಮೊದಲ ನಾಲ್ಕು ಪಂದ್ಯಗಳಲ್ಲಿ ಆಡಿರಲಿಲ್ಲ. ಇಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಿದ್ದರು.
ಬದಲಾವಣೆ ನೆರವಾಯಿತು:
ಅಭಿಷೇಕ್ ಪೊರೆಲ್, ಕೆ.ಎಲ್.ರಾಹುಲ್ ಮತ್ತು ಟ್ರಿಸ್ಟನ್ ಸ್ಟಬ್ಸ್ ವಿಕೆಟ್ ಪಡೆದ ಅನುಭವಿ ಲೆಗ್ ಸ್ಪಿನ್ನರ್ ಕರ್ಣ ಶರ್ಮ ಅವರು 13ನೇ ಓವರಿನಲ್ಲಿ ಚೆಂಡು ಬದಲಾವಣೆ ಮಾಡಿದ್ದು ಮುಂಬೈ ಇಂಡಿಯನ್ಸ್ ತಂಡಕ್ಕೆ ನೆರವಾಯಿತು ಎಂದು ಒಪ್ಪಿಕೊಂಡರು. ‘ಚೆಂಡಿನ ಗ್ರಿಪ್ ಸಿಕ್ಕಿ, ತಿರುವು ದೊರೆಯುತ್ತಿದ್ದ ಕಾರಣ ಬ್ಯಾಟರ್‌ಗಳಿಗೆ ಕಠಿಣ ಪರಿಸ್ಥಿತಿ ಎದುರಾಯಿತು’ ಎಂದರು.
ಕರ್ಣ ಅವರು ಐಪಿಎಲ್ ಗೆದ್ದ ಮೂರು ತಂಡಗಳಲ್ಲಿ ಆಡಿದ್ದರು. 2016ರಲ್ಲಿ ಸನ್‌ರೈಸರ್ಸ್ ಹೈದರಾಬಾದ್, 2017ರಲ್ಲಿ ಮುಂಬೈ ಇಂಡಿಯನ್ಸ್ ಮತ್ತು 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಟ್ರೋಫಿ ಗೆದ್ದಾಗ ಕರ್ಣ ಶರ್ಮಾಆ ಆ ತಂಡದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.