ADVERTISEMENT

FIFA 2022: ಅರ್ಜೆಂಟೀನಾಗೆ ಗೆಲುವಿನ ವಿಶ್ವಾಸ- ಪೋಲೆಂಡ್‌ ಜೊತೆ ಸೆಣಸು

‘ಸಿ’ ಗುಂಪಿನಲ್ಲಿಂದು ರೋಚಕ ಹಣಾಹಣಿ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2022, 14:43 IST
Last Updated 29 ನವೆಂಬರ್ 2022, 14:43 IST
ಅರ್ಜೆಂಟೀನಾ ತಂಡದ ಲಯೊನೆಲ್‌ ಮೆಸ್ಸಿ (ಎಡ) ಹಾಗೂ ರಾಡ್ರಿಗೊ ಡಿ ಪಾಲ್ –ಎಎಫ್‌ಪಿ ಚಿತ್ರ
ಅರ್ಜೆಂಟೀನಾ ತಂಡದ ಲಯೊನೆಲ್‌ ಮೆಸ್ಸಿ (ಎಡ) ಹಾಗೂ ರಾಡ್ರಿಗೊ ಡಿ ಪಾಲ್ –ಎಎಫ್‌ಪಿ ಚಿತ್ರ   

ದೋಹಾ (ಎಪಿ): ಲಯೊನೆಲ್‌ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ವಿಶ್ವಕಪ್‌ ಟೂರ್ನಿಯ ಲೀಗ್‌ ಹಂತದಲ್ಲಿ ಇಷ್ಟೊಂದು ಒತ್ತಡಕ್ಕೆ ಒಳಗಾಗಲಿದೆ ಎಂದು ಯಾರೂ ಉಹಿಸಿರಲಿಕ್ಕಿಲ್ಲ.

ಪ್ರಶಸ್ತಿ ಗೆಲ್ಲುವ ‘ಫೇವರಿಟ್’ ತಂಡಗಳಲ್ಲಿ ಒಂದಾಗಿರುವ ಅರ್ಜೆಂಟೀನಾ ಬುಧವಾರ ನಡೆಯಲಿರುವ ‘ಸಿ’ ಗುಂಪಿನ ಕೊನೆಯ ಪಂದ್ಯದಲ್ಲಿ ಪೋಲೆಂಡ್‌ನ ಸವಾಲು ಎದುರಿಸಲಿದ್ದು, ನಾಕೌಟ್‌ ಹಂತ ಪ್ರವೇಶಿಸಲು ಗೆಲುವು ಅನಿವಾರ್ಯ ಎನಿಸಿದೆ.

ಬುಧವಾರ ಕೊನೆಯ ಪಂದ್ಯ ಆಡಲಿರುವ ‘ಸಿ’ ಗುಂಪಿನ ಎಲ್ಲ ನಾಲ್ಕು ತಂಡಗಳೂ ನಾಕೌಟ್‌ ಪ್ರವೇಶಿಸುವ ಅವಕಾಶ ಹೊಂದಿವೆ. ಇನ್ನೊಂದು ಪಂದ್ಯದಲ್ಲಿ ಸೌದಿ ಅರೇಬಿಯಾ –ಪೋಲೆಂಡ್‌ ಎದುರಾಗಲಿವೆ.

ADVERTISEMENT

ಪೋಲೆಂಡ್‌ ತಂಡ ನಾಲ್ಕು ಪಾಯಿಂಟ್ಸ್‌ಗಳೊಂದಿಗೆ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ತಲಾ ಮೂರು ಪಾಯಿಂಟ್ಸ್‌ ಹೊಂದಿರುವ ಅರ್ಜೆಂಟೀನಾ ಮತ್ತು ಸೌದಿ ಅರೇಬಿಯಾ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನಗಳಲ್ಲಿವೆ. ಒಂದು ಪಾಯಿಂಟ್‌ ಗಳಿಸಿರುವ ಮೆಕ್ಸಿಕೊ ಕೊನೆಯ ಸ್ಥಾನದಲ್ಲಿದೆ.

ಮೊದಲ ಪಂದ್ಯದಲ್ಲಿ ಸೌದಿ ಅರೇಬಿಯಾ ಕೈಯಲ್ಲಿ 1–2 ರಲ್ಲಿ ಆಘಾತ ಅನುಭವಿಸಿದ್ದ ಮೆಸ್ಸಿ ಬಳಗ, ಎರಡನೇ ಪಂದ್ಯದಲ್ಲಿ ಪುಟಿದೆದ್ದು ನಿಂತು 2–0 ರಲ್ಲಿ ಮೆಕ್ಸಿಕೊ ತಂಡವನ್ನು ಮಣಿಸಿತ್ತು.

ಅರ್ಜೆಂಟೀನಾ ಬುಧವಾರ ಗೆದ್ದರೆ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಪ್ರೀ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಡಲಿದೆ. ಡ್ರಾ ಸಾಧಿಸಿದರೆ, ನಾಕೌಟ್‌ ಪ್ರವೇಶಕ್ಕೆ ಸೌದಿ ಅರೇಬಿಯಾ– ಮೆಕ್ಸಿಕೊ ನಡುವಿನ ಪಂದ್ಯದ ಫಲಿತಾಂಶವನ್ನು ಅವಲಂಬಿಸಬೇಕಾಗುತ್ತದೆ.

ಅರ್ಜೆಂಟೀನಾ ತಂಡ ಮೆಸ್ಸಿ ಅವರನ್ನು ನೆಚ್ಚಿಕೊಂಡಿರುವಂತೆಯೇ ಪೋಲೆಂಡ್‌ ತಂಡ 34 ವರ್ಷದ ಅನುಭವಿ ಆಟಗಾರ ರಾಬರ್ಟ್‌ ಲೆವಂಡೊವ್‌ಸ್ಕಿ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ. ಈ ಪಂದ್ಯ ಮೆಸ್ಸಿ– ಲೆವಂಡೊವ್‌ಸ್ಕಿ ನಡುವಿನ ಪೈಪೋಟಿಯ ಕಾರಣ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಲುಸೈಲ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಸೌದಿ ಅರೇಬಿಯಾ– ಮೆಕ್ಸಿಕೊ ಪಂದ್ಯ ಕೂಡಾ ಫುಟ್‌ಬಾಲ್‌ ಪ್ರೇಮಿಗಳ ಗಮನ ಸೆಳೆಯಲಿದೆ. ಮೆಕ್ಸಿಕೊ ತಂಡ ತಾನಾಡಿದ ಕೊನೆಯ ಏಳು ವಿಶ್ವಕಪ್‌ ಟೂರ್ನಿಗಳಲ್ಲೂ ನಾಕೌಟ್‌ಗೆ ತೇರ್ಗಡೆಯಾಗಿತ್ತು. ಆದರೆ ಈ ಬಾರಿ ಗುಂಪು ಹಂತದಲ್ಲೇ ನಿರ್ಗಮಿಸುವ ಅಪಾಯಕ್ಕೆ ಸಿಲುಕಿದೆ.

ಸೌದಿ ಅರೇಬಿಯಾ ತಂಡ 1994 ರಲ್ಲಿ ತನ್ನ ಚೊಚ್ಚಲ ವಿಶ್ವಕಪ್‌ ಟೂರ್ನಿಯಲ್ಲಿ ನಾಕೌಟ್‌ ಹಂತ ಪ್ರವೇಶಿಸಿದ್ದನ್ನು ಬಿಟ್ಟರೆ, ಆ ಬಳಿಕ ಗುಂಪು ಹಂತದಿಂದ ಮೇಲೆ ಬಂದಿಲ್ಲ. ಈ ಬಾರಿ ಪ್ರಿ ಕ್ವಾರ್ಟರ್‌ಗೆ ಲಗ್ಗೆಯಿಡುವ ವಿಶ್ವಾಸ ಹೊಂದಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.