ADVERTISEMENT

ಪಾಕ್‌ ಕೋಚ್‌ ಹುದ್ದೆಗೆ ಮಿಸ್ಬಾ ಅರ್ಜಿ

ಏಜೆನ್ಸೀಸ್
Published 27 ಆಗಸ್ಟ್ 2019, 19:30 IST
Last Updated 27 ಆಗಸ್ಟ್ 2019, 19:30 IST
ಮಿಸ್ಬಾ ಉಲ್‌ ಹಕ್‌
ಮಿಸ್ಬಾ ಉಲ್‌ ಹಕ್‌   

ಕರಾಚಿ: ಹಿರಿಯ ಕ್ರಿಕೆಟಿಗ ಮಿಸ್ಬಾ ಉಲ್‌ ಹಕ್‌ ಅವರು ಪಾಕಿಸ್ತಾನ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.

ವಿಶ್ವಕಪ್‌ನಲ್ಲಿ ಪಾಕಿಸ್ತಾನವು ‌ಸೆಮಿಫೈನಲ್ ಪ್ರವೇಶಿಸಲು ವಿಫಲವಾಗಿತ್ತು. ಹೀಗಾಗಿ ಮಿಕಿ ಆರ್ಥರ್‌ ಅವರನ್ನು ಕೋಚ್‌ ಹುದ್ದೆಯಲ್ಲಿ ಮುಂದುವರಿಸದಿರಲು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ನಿರ್ಧರಿಸಿತ್ತು.

‘ಪಾಕ್‌ ತಂಡದ ಕೋಚ್‌ ಆಗಿ ಕೆಲಸ ಮಾಡುವುದು ನನ್ನ ಕನಸು. ಹೀಗಾಗಿ ಅರ್ಜಿ ಸಲ್ಲಿಸಿದ್ದೇನೆ. ಇದಕ್ಕಾಗಿ ಪಿಸಿಬಿ ಕಾರ್ಯಕಾರಿ ಮಂಡಳಿ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದೇನೆ’ ಎಂದು ಮಿಸ್ಬಾ ನುಡಿದಿದ್ದಾರೆ.

ADVERTISEMENT

ಆಸ್ಟ್ರೇಲಿಯಾದ ಹಿರಿಯ ಬ್ಯಾಟ್ಸ್‌ಮನ್‌ ಡೀನ್‌ ಜೋನ್ಸ್‌ ಮತ್ತು ವೆಸ್ಟ್‌ ಇಂಡೀಸ್‌ನ ಹಿರಿಯ ಕ್ರಿಕೆಟಿಗ ಕರ್ಟ್ನಿ ವಾಲ್ಶ್‌ ಅವರೂ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿರುವುದಾಗಿ ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ಪಿಸಿಬಿ ಯಾವುದೇ ಮಾಹಿತಿ ನೀಡಿಲ್ಲ.

ಮಿಸ್ಬಾ ಅವರು ಟೆಸ್ಟ್‌ ಮಾದರಿಯಲ್ಲಿ ಪಾಕಿಸ್ತಾನದ ಯಶಸ್ವಿ ನಾಯಕ ಎನಿಸಿದ್ದರು. ಅವರ ಮುಂದಾಳತ್ವದಲ್ಲಿ 56 ಟೆಸ್ಟ್‌ ಆಡಿದ್ದ ತಂಡವು 26 ಪಂದ್ಯಗಳಲ್ಲಿ ಗೆದ್ದಿತ್ತು. ಅವರು 2017ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.

ಸೆಪ್ಟೆಂಬರ್‌ 27ರಿಂದ ಕರಾಚಿಯಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ಏಕದಿನ ಮತ್ತು ಟ್ವೆಂಟಿ–20 ಸರಣಿ ನಡೆಯಲಿದೆ. ಅದಕ್ಕೂ ಮುನ್ನ ಪಿಸಿಬಿ, ನೂತನ ಕೋಚ್‌ ನೇಮಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.