ADVERTISEMENT

ಹಾಕಿದ್ದು 4 ಓವರ್‌, ಅದ್ರಲ್ಲಿ 3 ಮೇಡನ್‌–2 ವಿಕೆಟ್‌, ನೀಡಿದ್ದು ಕೇವಲ 1 ರನ್‌

ಏಜೆನ್ಸೀಸ್
Published 26 ಆಗಸ್ಟ್ 2018, 17:29 IST
Last Updated 26 ಆಗಸ್ಟ್ 2018, 17:29 IST
ಮೊಹಮ್ಮದ್‌ ಇರ್ಫಾನ್‌ ಬೌಲಿಂಗ್‌ ವೈಖರಿ
ಮೊಹಮ್ಮದ್‌ ಇರ್ಫಾನ್‌ ಬೌಲಿಂಗ್‌ ವೈಖರಿ   

ಪ್ಯಾರಿಸ್‌ : ಹಾಕಿದ್ದು ನಾಲ್ಕು ಓವರ್‌, ಮಾಡಿದ್ದು ಮೂರು ಮೇಡನ್‌, ಪಡೆದದ್ದು ಎರಡು ವಿಕೆಟ್‌, ನೀಡಿದ್ದು ಕೇವಲ ಒಂದು ರನ್‌...

ಪಾಕಿಸ್ತಾನದ ವೇಗದ ಬೌಲರ್‌ ಮೊಹಮ್ಮದ್‌ ಇರ್ಫಾನ್‌ ಅವರ ಬೌಲಿಂಗ್‌ ಸಾಧನೆ ಇದು.

ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಸಿಪಿಎಲ್‌) ಬಾರ್ಬಡೀಸ್‌ ಟ್ರೈಡೆಂಟ್‌ ತಂಡದ ಪರ ಆಡುವ ಇರ್ಫಾನ್‌, ಶನಿವಾರ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಸೇಂಟ್‌ ಕೀಟ್ಸ್‌ ಆ್ಯಂಡ್‌ ನೆವಿಸ್‌ ಪೇಟ್ರಿಯಾಟ್ಸ್‌ ಎದುರಿನ ಪಂದ್ಯದಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿದೆ.

ADVERTISEMENT

ಏಳು ಅಡಿ ಎತ್ತರದ ಎಡಗೈ ವೇಗಿ ಇರ್ಫಾನ್‌, ಮೊದಲ ಓವರ್‌ನ ಮೊದಲ ಎಸೆತದಲ್ಲೇ ಕ್ರಿಸ್‌ ಗೇಲ್‌ ವಿಕೆಟ್‌ ಉರುಳಿಸಿದರು. ನಂತರದ ಐದು ಎಸೆತಗಳಲ್ಲಿ ಅವರು ಎದುರಾಳಿಗಳಿಗೆ ರನ್‌ ನೀಡಲಿಲ್ಲ. ಇನಿಂಗ್ಸ್‌ನ ಮೂರನೇ ಓವರ್‌ ಬೌಲ್‌ ಮಾಡಿದ ಅವರು ನಾಲ್ಕನೇ ಎಸೆತದಲ್ಲಿ ಎವಿನ್‌ ಲೂಯಿಸ್‌ ವಿಕೆಟ್‌ ಉರುಳಿಸಿದರು.

ಐದನೇ ಓವರ್‌ ಮೇಡನ್‌ ಮಾಡಿದ ಇರ್ಫಾನ್‌, ಏಳನೇ ಓವರ್‌ನ ಮೊದಲ ಐದು ಎಸೆತಗಳಲ್ಲಿ ರನ್‌ ನೀಡಲಿಲ್ಲ. ಹೀಗಾಗಿ ನಾಲ್ಕೂ ಓವರ್‌ ಮೇಡನ್‌ ಮಾಡಿದ ದಾಖಲೆಗೆ ಪಾತ್ರರಾಗಲಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ಕೊನೆಯ ಎಸೆತದಲ್ಲಿ ಬ್ರೆಂಡನ್‌ ಕಿಂಗ್‌ ಒಂದು ರನ್‌ ಗಳಿಸಿದರು.

ಈ ಪಂದ್ಯದಲ್ಲಿ ಬಾರ್ಬಡೀಸ್‌ ತಂಡ 6 ವಿಕೆಟ್‌ಗಳಿಂದ ಸೋತಿತು.

‘ಟ್ವೆಂಟಿ–20 ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದು ಅತೀವ ಖುಷಿ ನೀಡಿದೆ. ತಂಡ ಗೆದ್ದಿದ್ದರೆ ಸಂತಸ ಇಮ್ಮಡಿಸುತ್ತಿತ್ತು. ಚುಟುಕು ಕ್ರಿಕೆಟ್‌ನಲ್ಲಿ ಶ್ರೇಷ್ಠ ಬೌಲಿಂಗ್‌ ಮಾಡಿದ್ದು ಹೆಮ್ಮೆಯಿಂದ ಬೀಗುವಂತೆ ಮಾಡಿದೆ’ ಎಂದು ಇರ್ಫಾನ್‌ ಖುಷಿ ವ್ಯಕ್ತಪಡಿಸಿದ್ದಾರೆ.

36 ವರ್ಷ ವಯಸ್ಸಿನ ಇರ್ಫಾನ್ ಅವರು 2016ರಲ್ಲಿ ಪಾಕಿಸ್ತಾನದ ಪರ ಕೊನೆಯ ಅಂತರರಾಷ್ಟ್ರೀಯ ಪಂದ್ಯ ಆಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.