
ಮೊಹಮ್ಮದ್ ಶಮಿ
ನವದೆಹಲಿ: ಭಾರತ ತಂಡದ ಅನುಭವಿ ಬೌಲರ್ ಆಗಿದ್ದ ಮೊಹಮ್ಮದ್ ಶಮಿ ಈ ಬಾರಿಯ ರಣಜಿ ಋತುವಿನಲ್ಲಿ ಈಗಾಗಲೇ 93 ಓವರುಗಳನ್ನು ಬೌಲ್ ಮಾಡಿದ್ದಾರೆ. ಆದರೆ ದೇಶ ಕಂಡ ಶ್ರೇಷ್ಠ ವೇಗಿಗಳಲ್ಲಿ ಒಬ್ಬರಾದ ಶಮಿ ಸದ್ಯ ಟೆಸ್ಟ್ ತಂಡದಲ್ಲಿ ಆಡುವ ಅಥವಾ ಮುಂದೆ ಏಕದಿನ ತಂಡದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಕ್ಷೀಣವಾಗಿದೆ.
35 ವರ್ಷ ವಯಸ್ಸಿನ ಶಮಿ ಮಾರ್ಚ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೊನೆಯ ಬಾರಿ ಭಾರತಕ್ಕೆ ಆಡಿದ್ದರು. ನಂತರ ಯಾವುದೇ ಮಾದರಿಯ ಸರಣಿಗೆ ಅವರನ್ನು ಪರಿಗಣಿಸಿಲ್ಲ. 2023ರಲ್ಲಿ ಏಕದಿನ ವಿಶ್ವಕಪ್ ವೇಳೆ ಆದ ಪಾದದ ಗಾಯಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ದೀರ್ಘ ಕಾಲ ಆಟದಿಂದ ವಿರಾಮ ಪಡೆದಿದ್ದರು.
ಈಗಿನ ಪರಿಸ್ಥಿತಿಯಲ್ಲಿ, ಭಾರತದ ಕ್ರಿಕೆಟ್ ಸಾಗುತ್ತಿರುವ ದಿಕ್ಕು ಗಮನಿಸಿದರೆ ಶಮಿ ಈಗ ಮೂರು ಮಾದರಿಗಳಲ್ಲಿ ಆಡಿರುವ ಒಟ್ಟು 197 ಅಂತರರಾಷ್ಟ್ರೀಯ ಪಂದ್ಯಗಳಿಗೆ ಇನ್ನಷ್ಟು ಸೇರಿಸುವ ಸಾಧ್ಯತೆ ದೂರವಾಗಿದೆ.
ಟೆಸ್ಟ್ ಮತ್ತು ಟಿ20 ಕ್ರಿಕೆಟ್‌ನಲ್ಲಿ ಪ್ರಸಿದ್ಧ ಕೃಷ್ಣ ಮತ್ತು ಆಕಾಶ್ ದೀಪ್ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಹೀಗಾಗಿ ಹಿರಿಯ ಬೌಲರ್‌ಗೆ ಉಳಿದಿರುವುದು ಏಕದಿನ ಮಾದರಿ. ಆದರೆ ಭಾರತ ಮುಂದಿನ (2027ರ) ಏಕದಿನ ವಿಶ್ವಕಪ್ ಆಡುವಾಗ ಅವರಿಗೆ 37 ವರ್ಷಗಳಾಗಲಿವೆ. ಮೊಣಕಾಲು ನೋವು ಸೇರಿದಂತೆ ಮರುಕಳಿಸುತ್ತಿರುವ ಗಾಯದ ಇತಿಹಾಸ ನೋಡಿದರೆ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ.
ಆಯ್ಕೆಗಾರರ ಬಗ್ಗೆ ಶಮಿ ಅಸಮಾಧಾನವನ್ನೂ ಹೊರಹಾಕಿದ್ದರು. ತಾವು ರಣಜಿ ಆಡುತ್ತಿದ್ದು ಫಿಟ್ ಆಗಿರುವ ಬಗ್ಗೆ ತಿಳಿದುಕೊಳ್ಳುವುದು ಆಯ್ಕೆಗಾರರ ಕೆಲಸ ಎಂದಿದ್ದರು. ಆದರೆ ಇದು ಅವರನ್ನು ಪರಿಗಣಿಸದಿರಲು ಸಕಾರಣವಲ್ಲ ಎಂದು ಬಿಸಿಸಿಐನ ಮೂಲಗಳು ತಿಳಿಸಿವೆ.
‘ರಾಷ್ಟ್ರೀಯ ಆಯ್ಕೆಗಾರರು ಮತ್ತು ಬಿಸಿಸಿಐ ಶ್ರೇಷ್ಠತಾ ಕೇಂದ್ರದ ನೆರವು ಸಿಬ್ಬಂದಿ ಸಾಕಷ್ಟು ಸಲ ಶಮಿ ಅವರಿಗೆ ಕರೆ ಮಾಡಿದ್ದು ಫಿಟ್ನೆಸ್ ಬಗ್ಗೆ ವಿಚಾರಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ ಅವರು ಮೂರು ಟೆಸ್ಟ್‌ಗಿಂತ ಹೆಚ್ಚು ಆಡುವುದಿಲ್ಲ ಎಂದು ಹೇಳಿದ್ದಾಗ ಆಯ್ಕೆ ಸಮಿತಿಯು ಶಮಿ ಅವರ ಸೇವೆ ಪಡೆಯಲು ಆಸಕ್ತಿ ತಾಳಿತ್ತು’ ಎಂದು ಮಂಡಳಿಯ ಹಿರಿಯ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.
‘ಶಮಿ ಅಂಥ ವರ್ಚಸ್ಸಿನ ಬೌಲರ್‌ನನ್ನು ಪಡೆಯಲು ಯಾರು ತಾನೇ ಬಯಸುವುದಿಲ್ಲ. ಸೀನಿಯರ್ ಆಯ್ಕೆ ಸಮಿತಿಯು ಅವರಿಗೆ ಫಿಟ್ನೆಸ್ ಸ್ಥಿತಿಗತಿ ಕೇಳಿ ಸಂದೇಶಗಳನ್ನು ಕಳುಹಿಸಿತ್ತು. ಇಂಗ್ಲೆಂಡ್ ಲಯನ್ಸ್ ವಿರುದ್ಧ ಕ್ಯಾಂಟರ್ಬರಿ ಅಥವಾ ನಾರ್ತಾಂಪ್ಟನ್‌ನಲ್ಲಿ ಭಾರತ ‘ಎ’ ತಂಡದ ಪರ ಕಡೇಪಕ್ಷ ಒಂದು ಪಂದ್ಯವನ್ನಾದರೂ ಆಡುವಂತೆ ಮನವಿ ಮಾಡಿತ್ತು’ ಎಂದು ಅವರು ತಿಳಿಸಿದ್ದಾರೆ. ಆದರೆ ಕಾರ್ಯದೊತ್ತಡ ನಿಭಾಯಿಸಬೇಕಿದ್ದು, ತಮ್ಮನ್ನು ಪ್ರವಾಸಕ್ಕೆ ಪರಿಗಣಿಸದಿರುವಂತೆ ಅವರು ತಿಳಿಸಿದ್ದರು ಎನ್ನಲಾಗಿದೆ. ಇಂಗ್ಲೆಂಡ್– ಭಾರತ ನಡುವಣ ಆ ಟೆಸ್ಟ್ ಸರಣಿ 2–2 ಸಮನಾಗಿತ್ತು.
ಶಮಿ ಈ ಋತುವಿನಲ್ಲಿ ಬಂಗಾಳಕ್ಕೆ ಮೂರು ರಣಜಿ ಪಂದ್ಯಗಳನ್ನಾಡಿದ್ದಾರೆ. ಸೂರತ್‌ನಲ್ಲಿ ರೈಲ್ವೇಸ್ ವಿರುದ್ಧ ನಡೆಯುತ್ತಿರುವ ಅವರು ಆಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.