
ಮೊಹಮ್ಮದ್ ಶಮಿ
ನವದೆಹಲಿ: ‘ನನಗೆ ಮತ್ತು ಅಪ್ರಾಪ್ತ ವಯಸ್ಸಿನ ಮಗಳಿಗೆ ನೀಡುತ್ತಿರುವ ಮಧ್ಯಂತರ ಜೀವನಾಂಶದ ಮೊತ್ತವನ್ನು ಹೆಚ್ಚಿಸಬೇಕು’ ಎಂದು ಕೋರಿ ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ಪರಿತ್ಯಕ್ತ ಪತ್ನಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಮೊಹಮ್ಮದ್ ಶಮಿ ಅವರಿಗೆ ನೋಟಿಸ್ ಜಾರಿಗೊಳಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಜುಲೈ 1 ಮತ್ತು ಆಗಸ್ಟ್ 25ರಂದು ಕಲ್ಕತ್ತ ಹೈಕೋರ್ಟ್ ನೀಡಿರುವ ಆದೇಶಗಳನ್ನು ಪ್ರಶ್ನಿಸಿ ಶಮಿ ಅವರಿಂದ ದೂರವಾಗಿರುವ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿ ಶಮಿ ಅವರಿಗೆ ನೊಟೀಸ್ ಜಾರಿ ಮಾಡಿತು.
ಶಮಿ ಅವರು ಪರಿತ್ಯಕ್ತ ಪತ್ನಿ ಮತ್ತು ಮಗಳಿಗೆ ಪಾವತಿಸಬೇಕಾದ ಮಧ್ಯಂತರ ಜೀವನಾಂಶ ಮೊತ್ತವನ್ನು ಕ್ರಮವಾಗಿ ₹1.5 ಲಕ್ಷ ಮತ್ತು ₹2.5 ಲಕ್ಷಕ್ಕೆ ಹೈಕೋರ್ಟ್ ಹೆಚ್ಚಿಸಿ ಆದೇಶಿಸಿತ್ತು. ಎಂಟು ತಿಂಗಳ ಬಾಕಿಯನ್ನು ಎಂಟು ಮಾಸಿಕ ಕಂತುಗಳಲ್ಲಿ ತೀರಿಸಲು ಆಟಗಾರನಿಗೆ ಅವಕಾಶ ನೀಡಿತ್ತು.
ಶಮಿ ಅವರ ಹಣಕಾಸಿನ ಸ್ಥಿತಿ ಮತ್ತು ಸಿರಿವಂತ ಜೀವನ ಶೈಲಿ ಪರಿಗಣಿಸಿದರೆ ಈಗ ನೀಡುತ್ತಿರುವ ಮೊತ್ತ ‘ಏನೇನೂ ಸಾಲದು’ ಎಂದು ಪತ್ನಿ ಮನವಿಯಲ್ಲಿ ತಿಳಿಸಿದ್ದರು. ತಮಗೆ ಮಾಸಿಕ ₹7 ಲಕ್ಷ ಮತ್ತು ಮಗಳಿಗೆ ₹3 ಲಕ್ಷ ನೀಡಬೇಕು ಎಂದು ಮನವಿ ಮಾಡಿದ್ದರು.
2021–22ರಲ್ಲಿ ಶಮಿ ಸಲ್ಲಿಸಿದ ಆದಾಯ ತೆರಿಗೆ ರಿಟರ್ನ್ ಪ್ರಕಾರ, ಅವರ ವಾರ್ಷಿಕ ಆದಾಯ ₹48 ಕೋಟಿ ಇದೆ ಎಂದು ಪತ್ನಿ ಅರ್ಜಿಯಲ್ಲಿ ತಿಳಿಸಿದ್ದರು. ಅವರ ಬಳಿ ವಿಲಾಸಿ ಕಾರುಗಳಾದ ರೇಂಜ್ ರೋವರ್, ಜಾಗ್ವಾರ್, ಮರ್ಸಿಡಿಸ್, ಟೊಯಟಾ ಫಾರ್ಚುನರ್ ಇದೆ ಎಂದೂ ಗಮನಸೆಳೆದಿದ್ದರು. ದಂಪತಿ 2014ರಲ್ಲಿ ವಿವಾಹವಾಗಿದ್ದರು.