ADVERTISEMENT

ಸಿ.ಕೆ. ನಾಯ್ಡು ಟ್ರೋಫಿ: ಚಂಡೀಗಢ ವಿರುದ್ಧ ಗೆಲುವಿನ ಹೊಸ್ತಿಲಲ್ಲಿ ಕರ್ನಾಟಕ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 22:30 IST
Last Updated 25 ಜನವರಿ 2026, 22:30 IST
   

ಬೆಂಗಳೂರು: ಕರ್ನಾಟಕದ ಆಫ್‌  ಸ್ಪಿನ್ನರ್‌ ಮೊಹ್ಸಿನ್‌ ಖಾನ್‌ ಅವರು ಕರ್ನಲ್ ಸಿ.ಕೆ. ನಾಯ್ಡು ಟ್ರೋಫಿ ಎಲೀಟ್ ಡಿ ಗುಂಪಿನ ಪಂದ್ಯದಲ್ಲಿ ಚಂಡೀಗಡ ಎದುರಿನ ಮೊದಲ ಇನಿಂಗ್ಸ್‌ನಲ್ಲಿ ಎಂಟು ವಿಕೆಟ್ ಗಳಿಸಿದರು. ಇದು ಅವರ ಜೀವನಶ್ರೇಷ್ಠ ಬೌಲಿಂಗ್ ಆಗಿ ದಾಖಲಾಯಿತು.

ಆಲೂರು ಕೆಎಸ್‌ಸಿಎ ಕ್ರೀಡಾಂಗಣ (3)ದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾನುವಾರ ಮೂರನೇ ದಿನದಾಟದ ಅಂತ್ಯಕ್ಕೆ ಚಂಡೀಗಢ ಎರಡನೇ ಇನಿಂಗ್ಸ್‌ ನಲ್ಲಿ 3 ವಿಕೆಟ್‌ಗೆ 55 ರನ್‌ ಗಳಿಸಿದ್ದು, ಇನ್ನಿಂಗ್ಸ್‌ ಸೋಲು ತಪ್ಪಿಸಲು ಇನ್ನೂ 296 ರನ್‌ ಬೇಕಿದೆ. ಕೊನೆಯ ದಿನದ ಆಟ ಕುತೂಹಲ ಕೆರಳಿಸಿದ್ದು, ಕರ್ನಾಟಕದ ಗೆಲುವು ಏಳು ವಿಕೆಟ್‌ ದೂರದಲ್ಲಿದೆ.

3 ವಿಕೆಟ್‌ಗೆ 98 ರನ್‌ಗಳೊಂದಿಗೆ ದಿನದ ಆಟ ಆರಂಭಿಸಿದ ಚಂಡೀಗಢ ತಂಡವನ್ನು ಮೊಹ್ಸಿನ್‌ (114ಕ್ಕೆ 8) ಇನ್ನಿಲ್ಲದಂತೆ ಕಾಡಿದರು. ಇಬ್ಬರು ಬ್ಯಾಟರ್‌ಗಳು ರನೌಟ್‌ ಆದರೆ, ಉಳಿದ ಎಂಟು ಮಂದಿ 22 ವರ್ಷದ ಮೊಹ್ಸಿನ್‌ ಅವರಿಗೆ ವಿಕೆಟ್‌ ಒಪ್ಪಿಸಿದ್ದು ವಿಶೇಷ.

ADVERTISEMENT

ಚಂಡೀಗಢ ತಂಡದ ಆರಂಭದ ಆಟಗಾರ ದುಷ್ಯಂತ್‌ (59;79ಎ), ನಾಯಕ ಆರುಷ್‌ ಭಂಡಾರಿ (63; 192ಎ) ಮತ್ತು ಅಧಿರಾಜ್ (ಔಟಾಗದೇ 64;77ಎ) ಮಾತ್ರ ಕೊಂಚ ಹೋರಾಟ ಮಾಡಿದರು. ಮೊದಲ ಇನಿಂಗ್ಸ್‌ನಲ್ಲಿ 107 ಓವರ್‌ಗಳಲ್ಲಿ 283 ರನ್‌ಗಳಿಗೆ ಕುಸಿಯಿತು.

351 ರನ್‌ಗಳ ಮುನ್ನಡೆ ಪಡೆದ ಕರ್ನಾಟಕ ತಂಡವು ಎದುರಾಳಿ ತಂಡದ ಮೇಲೆ ಫಾಲೋಆನ್‌ ಹೇರಿತು. ‌

ಸಂಕ್ಷಿಪ್ತ ಸ್ಕೋರ್‌:

ಮೊದಲ ಇನಿಂ‌ಗ್ಸ್‌: ಕರ್ನಾಟಕ: 138.2 ಓವರ್‌ಗಳಲ್ಲಿ 4 ವಿಕೆಟ್‌ಗೆ 634 ಡಿಕ್ಲೇರ್ಡ್‌. ಚಂಡೀಗಢ: 107 ಓವರ್‌ಗಳಲ್ಲಿ 283 (ದುಷ್ಯಂತ್‌ 59, ಆರುಷ್‌ ಭಂಡಾರಿ 63, ಅಧಿರಾಜ್ ಔಟಾಗದೇ 64; ಮೊಹ್ಸಿನ್‌ ಖಾನ್‌ 114ಕ್ಕೆ 8).

ಎರಡನೇ ಇನಿಂಗ್ಸ್‌: ಚಂಡೀಗಢ: 28 ಓವರ್‌ಗಳಲ್ಲಿ 3 ವಿಕೆಟ್‌ಗೆ 55 (ಮನ್ವಂತ್‌ ಕುಮಾರ್‌ 29ಕ್ಕೆ 2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.