ವಡೋದರಾ: ಹರ್ಮನ್‌ಪ್ರೀತ್ ಕೌರ್ ಸಾರಥ್ಯದ ಭಾರತ ಮಹಿಳಾ ಕ್ರಿಕೆಟ್ ತಂಡವು ಮಂಗಳವಾರ ಇಲ್ಲಿ ನಡೆಯುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಗೆದ್ದು, ಸರಣಿಯನ್ನು ವಶಪಡಿಸಿಕೊಳ್ಳುವ ಛಲದಲ್ಲಿದೆ.
ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು ಭಾರತದ ವನಿತೆಯರು ಸಾಂಘಿಕ ಪ್ರದರ್ಶನ ನೀಡಿ ಭಾನುವಾರ 211 ರನ್‌ಗಳಿಂದ ಸುಲಭವಾಗಿ ಜಯಿಸಿದ್ದರು. ವಿಂಡೀಸ್ ವಿರುದ್ಧ ಟಿ20 ಸರಣಿಯನ್ನು 2–1ರಿಂದ ಗೆದ್ದಿರುವ ಆತಿಥೇಯ ತಂಡವು, ಏಕದಿನ ಸರಣಿಯನ್ನೂ ಒಂದು ಪಂದ್ಯ ಬಾಕಿ ಇರುವಂತೆ ಕೈವಶ ಮಾಡಿಕೊಳ್ಳುವತ್ತ ಚಿತ್ತ ಹರಿಸಿದೆ. ಆದರೆ, ಪ್ರವಾಸಿ ತಂಡವು ಸರಣಿಯನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ.
ಮುಂದಿನ ವರ್ಷ ಭಾರತದ ಆತಿಥ್ಯದಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದ್ದು, ಹೀಗಾಗಿ ಹರ್ಮನ್‌ಪ್ರೀತ್ ಬಳಗಕ್ಕೆ ಮುಂದೆ ನಡೆಯುವ ಪ್ರತಿಯೊಂದು ಪಂದ್ಯವು ಮಹತ್ವದ್ದಾಗಿದೆ. ಮಹಿಳಾ ವಿಶ್ವಕಪ್ ಅನ್ನು ಈವರೆಗೆ ಜಯಿಸದ ಭಾರತ ತಂಡವು, ತಮ್ಮ ಐಸಿಸಿ ಪ್ರಶಸ್ತಿಯ ಬರವನ್ನು ತವರಿನಲ್ಲಿ ನೀಗಿಸಲು ಎದುರು ನೋಡುತ್ತಿದೆ.
ಆಸ್ಟ್ರೇಲಿಯಾದಲ್ಲಿ 0-3 ವೈಟ್‌ವಾಷ್‌ಗೆ ಒಳಗಾದ ನಂತರ ಭಾರತ ತಂಡವು ಕೆರೀಬಿಯನ್ನರ ಮೇಲೆ ಶುಭಾರಂಭ ಮಾಡಿದೆ. ಹಲವು ಪಂದ್ಯಗಳ ಬಳಿಕ ಕಳೆದ ಪಂದ್ಯದಲ್ಲಿ ಭಾರತ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಉಪ ನಾಯಕಿ ಸ್ಮೃತಿ ಮಂದಾನ (91; 102ಎ) ಮತ್ತು ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯ ಆಡಿದ ಪ್ರತೀಕಾ ರಾವಲ್ (40; 69ಎ) ಅವರು ಮೊದಲ ವಿಕೆಟ್‌ಗೆ ಶತಕದ ಜೊತೆಯಾಟ ನೀಡಿ ಭಾರತಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಉತ್ತಮ ಲಯದಲ್ಲಿರುವ ಮಂದಾನ ಇದೇ ವೇಳೆ ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್ನ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸ್ಕೋರ್ (1602 ರನ್) ಗಳಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬ್ಯಾಟಿಂಗ್ ಮಾತ್ರವಲ್ಲದೆ ಭಾರತದ ಬೌಲಿಂಗ್ ವಿಭಾಗವೂ ಬಲಿಷ್ಠವಾಗಿದೆ. ಕಳೆದ ಪಂದ್ಯದಲ್ಲಿ ಐದು ವಿಕೆಟ್ ಪಡೆದು ಪಂದ್ಯದ ಆಟಗಾರ್ತಿ ಗೌರವಕ್ಕೆ ಪಾತ್ರವಾದ ರೇಣುಕಾ ಸಿಂಗ್ ಕೂಡ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ.
ಹೆಯಾಲಿ ಮ್ಯಾಥ್ಯೂಸ್, ದಿಯಾಂಡ್ರಾ ಡಾಟಿನ್, ಶೆಮೈನ್ ಕ್ಯಾಂಪ್‌ಬೆಲ್ ಮತ್ತು ಆಫಿ ಫ್ಲೆಚರ್ ಸೇರಿದಂತೆ ಅನುಭವಿ ಆಟಗಾರ್ತಿಯರೇ ವಿಂಡೀಸ್ ತಂಡಕ್ಕೆ ಶಕ್ತಿಯಾಗಿದ್ದಾರೆ.
ಪಂದ್ಯ ಆರಂಭ: ಮಧ್ಯಾಹ್ನ 1.30
ನೇರ ಪ್ರಸಾರ: ಸ್ಪೋರ್ಟ್ಸ್ 18 ಮತ್ತು ಜಿಯೊ ಸಿನಿಮಾ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.