ನವದೆಹಲಿ :‘ ನನ್ನ ತಂದೆಯವರು ಚಿತ್ರ ನಿರ್ಮಾಪಕರಾಗಿದ್ದಾರೆ. ಆದ್ದರಿಂದ ನನಗೆ ಚಿತ್ರರಂಗದ ಪ್ರವೇಶ ಸುಲಭವಾಗಿತ್ತು. ಆದರೂ ಸಿನೆಮಾಗಳತ್ತ ನನಗೆ ಮೊದಲಿನಿಂದಲೂ ಒಲವು ಇರಲಿಲ್ಲ. ಕ್ರಿಕೆಟ್ ಆಟದತ್ತಲೇ ಹೆಚ್ಚು ಸೆಳೆತವಿತ್ತು’ ಎಂದು ಮಿಜೋರಾಂ ಕ್ರಿಕೆಟ್ ತಂಡದ ಆಟಗಾರ ಅಗ್ನಿದೇವ್ ಚೋಪ್ರಾ ಹೇಳಿದ್ದಾರೆ.
ಬಾಲಿವುಡ್ ಚಿತ್ರ ನಿರ್ಮಾಪಕ, ನಿರ್ದೇಶಕ ವಿಧು ವಿನೋದ್ ಚೋಪ್ರಾ ಅವರ ಮಗ ಅಗ್ನಿದೇವ್ ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಮಿಂಚುತ್ತಿದ್ದಾರೆ. ಈಚೆಗೆ ನಡೆದ ಪ್ಲೇಟ್ ಗುಂಪಿನ ಪಂದ್ಯದಲ್ಲಿ ಅವರು ಮೇಘಾಲಯ ಎದುರು ಶತಕ ಗಳಿಸಿದ್ದರು. ಅವರು ಒಟ್ಟು ನಾಲ್ಕು ಪಂದ್ಯಗಳಿಂದ 767 ರನ್ ಗಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಾಲ್ಯದಿಂದಲೂ ನನಗೆ ಹಲವರು ಈ ಪ್ರಶ್ನೆ ಕೇಳಿದ್ದಾರೆ. ಆದರೆ ನನ್ನ ತಂದೆ ಯಾವತ್ತೂ ನನ್ನ ಆಸೆಗೆ ಅಡ್ಡ ಬಂದಿಲ್ಲ. ಯಾವುದೇ ಕೆಲಸ ಮಾಡಿದರು ಶ್ರೇಷ್ಠ ರೀತಿಯಲ್ಲಿ ಮಾಡಬೇಕು ದೊಡ್ಡದು, ಸಣ್ಣದು ಎಂಬ ತಾರತಮ್ಯ ಬೇಡ ಎಂದು ನನಗೂ ಮತ್ತು ನನ್ನ ಸಹೋದರಿಗೆ ಅಪ್ಪ ಹೇಳಿದ್ದರು. ಕ್ರಿಕೆಟ್‌ನಲ್ಲಿ ಸಾಧನೆ ಮಾಡಲು ಅವಕಾಶ ಕೊಟ್ಟರು’ ಎಂದರು.
ಅಗ್ನಿದೇವ್ ಅವರು 19 ವರ್ಷದೊಳಗಿನ ಮತ್ತು 23 ವರ್ಷದೊಳಗಿನವರ ಕ್ರಿಕೆಟ್‌ನಲ್ಲಿ ಮುಂಬೈ ತಂಡಗಳನ್ನು ಪ್ರತಿನಿಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.