ADVERTISEMENT

2021ರ ಐಪಿಎಲ್‌ನಲ್ಲಿಯೂ ಆಡುವರೇ ಧೋನಿ?

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2019, 20:25 IST
Last Updated 27 ನವೆಂಬರ್ 2019, 20:25 IST
ಧೋನಿ
ಧೋನಿ   

ಚೆನ್ನೈ: ಮಹೇಂದ್ರಸಿಂಗ್ ಧೋನಿ ಅವರು 2021ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿಯೂ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ, ಆ ವರ್ಷಕ್ಕೂ ಮುನ್ನ ನಡೆಯುವ ಹರಾಜು ಪ್ರಕ್ರಿಯೆಯಲ್ಲಿ ಅವರು ಬಿಡ್‌ ಪೂಲ್‌ನಲ್ಲಿ ಲಭ್ಯರಾಗಲು ಇಚ್ಛಿಸಿದ್ದಾರೆ.

ಇಂಗ್ಲೆಂಡ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ನಂತರ ಭಾರತವು ಆಡಿದ ಯಾವುದೇ ಸರಣಿಯಲ್ಲಿಯೂ ಧೋನಿ ಆಡಿಲ್ಲ.‌ ಸ್ವತಃ ತಾವೇ ಆಯ್ಕೆ ಪ್ರಕ್ರಿಯೆಯಿಂದ ದೂರ ಉಳಿದಿದ್ದಾರೆ. ಇದೀಗ ಅವರು ಮುಂದಿನ ವರ್ಷ ಟ್ವೆಂಟಿ–20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ.

‘ನಮ್ಮ ಫ್ರ್ಯಾಂಚೈಸ್‌ನ ಪ್ರಮುಖರೊಂದಿಗೆ ಧೋನಿ ಮಾತನಾಡಿದ್ದಾರೆ. 2021ರ ಐಪಿಎಲ್‌ಗೂ ಮುನ್ನ ನಡೆಯುವ ಹರಾಜು ಪ್ರಕ್ರಿಯೆಯಲ್ಲಿ ಧೋನಿ ತಮ್ಮನ್ನು ಪಣಕ್ಕೊಡ್ಡಲು ನಿರ್ಧರಿಸಿದ್ದಾರೆ. ಇದರಿಂದಾಗಿ ಚೆನ್ನೈ ತಂಡವು ಅವರನ್ನು ಕಡಿಮೆ ಮೊತ್ತಕ್ಕೆ ಖರೀದಿಸುವ ಸಾಧ್ಯತೆಗೂ ಅವರು ಆದ್ಯತೆ ಕೊಟ್ಟಿದ್ದಾರೆ’ ಎಂದು ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಮೂಲಗಳು ಇಂಗ್ಲಿಷ್‌ ಪತ್ರಿಕೆಯೊಂದಕ್ಕೆ ಮಾಹಿತಿ ನೀಡಿವೆ.

ADVERTISEMENT

‘ನಮಗೆ ಧೋನಿ ಅತ್ಯಂತ ಮಹತ್ವದ ಆಟಗಾರ. ಅವರು ಬಿಡ್‌ ಪ್ರಕ್ರಿಯೆಗೆ ಹೋಗುವುದು ನಮಗೆ ಬೇಕಿಲ್ಲ. ಅವರು ತಂಡದಲ್ಲಿ ನಾಯಕರಾಗಿ ಇದೇ ರೀತಿ ಮುಂದುವರಿಯಬೇಕು ಎಂಬುದೇ ಫ್ರ್ಯಾಂಚೈಸ್‌ನ ಆಶಯವಾಗಿದೆ’ ಎಂದು ಮೂಲಗಳು ತಿಳಿಸಿವೆ.

ಇದೇ ಸಂದರ್ಭದಲ್ಲಿ ‘ಅವರು ಮುಂದಿನ ವರ್ಷದ ಐಪಿಎಲ್‌ ನಲ್ಲಿಯೂ ಆಡುತ್ತಾರೆ. ಅಲ್ಲಿಯವರೆಗೂ ಅವರ ಬಗ್ಗೆ ಯಾವುದೇ ಊಹಾಪೋಹಕ್ಕೆ ಆಸ್ಪದ ಕೊಡಬೇಡಿ. ಯಾವುದೇ ನಿರ್ಣಯಕ್ಕೂ ಬರಬೇಡಿ. ಐಪಿಎಲ್ ನಂತರವೇ ಅವರ ಮುಂದಿನ ನಡೆ ತಿಳಿಯಲಿದೆ’ ಎಂದು ಭಾರತ ತಂಡದ ಕೋಚ್ ರವಿಶಾಸ್ತ್ರಿ ಕೂಡ ಹೇಳಿದ್ದಾರೆ.

ಧೋನಿ ಈಚೆಗೆ ಜಾರ್ಖಂಡ್‌ನ 23 ವರ್ಷದೊಳಗಿನವರ ತರಬೇತಿ ಶಿಬಿರದಲ್ಲಿ ಆಟಗಾರರಿಗೆ ಮಾರ್ಗದರ್ಶನ ನೀಡಿದ್ದರು. ಇದರಿಂದಾಗಿ ಅವರು ಮತ್ತೆ ಕ್ರಿಕೆಟ್‌ಗೆ ಮರಳುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿಬಂದಿದ್ದವು.

‘ಐಪಿಎಲ್ ಟೂರ್ನಿಗೂ ಮುನ್ನ ಧೋನಿ ಎಷ್ಟು ಪಂದ್ಯಗಳಲ್ಲಿ ಆಡಲಿದ್ದಾರೆ ಎಂಬುದು ಮುಖ್ಯವಾಗಲಿದೆ’ ಎಂದೂ ಕೆಲವು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.