ADVERTISEMENT

ಕ್ರಿಕೆಟ್‌: ಏಕದಿನ ತಂಡದಲ್ಲಿ ಮುಕೇಶ್‌, ರಜತ್‌ಗೆ ಸ್ಥಾನ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 14:46 IST
Last Updated 2 ಅಕ್ಟೋಬರ್ 2022, 14:46 IST
ರಜತ್‌ ಪಾಟೀದಾರ್‌
ರಜತ್‌ ಪಾಟೀದಾರ್‌   

ನವದೆಹಲಿ: ಬಂಗಾಳದ ವೇಗದ ಬೌಲರ್‌ ಮುಕೇಶ್‌ ಕುಮಾರ್‌ ಮತ್ತು ಮಧ್ಯಪ್ರದೇಶದ ಬ್ಯಾಟರ್‌ ರಜತ್‌ ಪಾಟೀದಾರ್‌ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ದೇಸಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವುದರಿಂದ ಇವರಿಗೆ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಲಭಿಸಿದೆ. ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಗೆ ಶಿಖರ್‌ ಧವನ್‌ ಅವರು ತಂಡವನ್ನು ಮುನ್ನಡೆಸಲಿದ್ದಾರೆ.

ನ್ಯೂಜಿಲೆಂಡ್‌ ‘ಎ’ ಎದುರಿನ ಸರಣಿಯಲ್ಲಿ ಮಿಂಚಿದ್ದ ಮುಕೇಶ್‌ ಅವರು, ಇರಾನಿ ಟ್ರೋಫಿ ಪಂದ್ಯದಲ್ಲೂ ತಮ್ಮ ಸಾಮರ್ಥ್ಯ ತೋರಿದ್ದರು. ಪಾಟೀದಾರ್ ಅವರು ರಣಜಿ ಟ್ರೋಫಿ ಫೈನಲ್‌ ಮತ್ತು ನ್ಯೂಜಿಲೆಂಡ್‌ ‘ಎ’ ಎದುರಿನ ಟೆಸ್ಟ್‌ ಪಂದ್ಯದಲ್ಲಿ ಶತಕ ಗಳಿಸಿದ್ದರು.

ADVERTISEMENT

ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪರ ಆಡುತ್ತಿರುವ ಪಾಟೀದಾರ್‌, ಈ ಋತುವಿನ ಟೂರ್ನಿಯಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ಎದುರು ಶತಕ (ಅಜೇಯ 112) ಗಳಿಸಿ ಗಮನ ಸೆಳೆದಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯ ಅ.6 ರಂದು ಲಖನೌದಲ್ಲಿ ನಡೆಯಲಿದೆ. ಎರಡು ಮತ್ತು ಮೂರನೇ ಪಂದ್ಯ ಅ.9 ಮತ್ತು 11 ರಂದು ಕ್ರಮವಾಗಿ ರಾಂಚಿ ಹಾಗೂ ದೆಹಲಿಯಲ್ಲಿ ಆಯೋಜನೆಯಾಗಿವೆ.

ತಂಡ ಹೀಗಿದೆ: ಶಿಖರ್‌ ಧವನ್‌ (ನಾಯಕ), ಋತುರಾಜ್‌ ಗಾಯಕವಾಡ್, ಶುಭಮನ್‌ ಗಿಲ್‌, ಶ್ರೇಯಸ್‌ ಅಯ್ಯರ್‌, ರಜತ್‌ ಪಾಟೀದಾರ್‌, ರಾಹುಲ್‌ ತ್ರಿಪಾಠಿ, ಇಶಾನ್‌ ಕಿಶನ್, ಸಂಜು ಸ್ಯಾಮ್ಸನ್, ಶಹಬಾಜ್‌ ಅಹ್ಮದ್‌, ಶಾರ್ದೂಲ್‌ ಠಾಕೂರ್‌, ಕುಲದೀಪ್‌ ಯಾದವ್, ರವಿ ಬಿಷ್ಣೋಯಿ, ಮುಕೇಶ್‌ ಕುಮಾರ್, ಆವೇಶ್‌ ಖಾನ್, ಮೊಹಮ್ಮದ್‌ ಸಿರಾಜ್, ದೀಪಕ್‌ ಚಾಹರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.