ADVERTISEMENT

ಸೈಯದ್ ಮುಷ್ತಾಕ್ ಅಲಿ ಟೂರ್ನಿ: ಕರ್ನಾಟಕ–ಸೌರಾಷ್ಟ್ರ ಮುಖಾಮುಖಿ

ವಾಯುಮಾಲಿನ್ಯದ ಆತಂಕದ ನಡುವೆ ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ನಾಕೌಟ್‌ ಹಣಾಹಣಿ

ಪಿಟಿಐ
Published 16 ನವೆಂಬರ್ 2021, 1:26 IST
Last Updated 16 ನವೆಂಬರ್ 2021, 1:26 IST
ಮಯಂಕ್ ಅಗರವಾಲ್ –ಪ್ರಜಾವಾಣಿ ಚಿತ್ರ
ಮಯಂಕ್ ಅಗರವಾಲ್ –ಪ್ರಜಾವಾಣಿ ಚಿತ್ರ   

ನವದೆಹಲಿ: ಗುಂಪು ಹಂತದಲ್ಲಿ ಅಮೋಘ ಸಾಮರ್ಥ್ಯ ತೋರಿರುವ ಕರ್ನಾಟಕ ಮತ್ತು ಸೌರಾಷ್ಟ್ರ ತಂಡಗಳು ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಂಗಳವಾರ ಮುಖಾಮುಖಿಯಾಗಲಿವೆ.

ವಿಪರೀತ ವಾಯುಮಾಲಿನ್ಯದಿಂದಾಗಿ ಆತಂಕದಲ್ಲಿರುವ ದೆಹಲಿಯಲ್ಲಿ 16ರ ಘಟ್ಟದ ಕೊನೆಯ ಮೂರು ಪಂದ್ಯಗಳು ನಡೆಯಲಿವೆ. ವಿವಿಧ ತಂಡಗಳನ್ನು ಪ್ರಮುಖ ಆಟಗಾರರು ಪ್ರತಿನಿಧಿಸುತ್ತಿದ್ದಾರೆ. ಇವರೆಲ್ಲ ಮುಂದಿನ ಐಪಿಎಲ್ ಮೇಲೆ ಕಣ್ಣಿಟ್ಟು ಕಣಕ್ಕೆ ಇಳಿಯಲಿದ್ದಾರೆ. ಹೀಗಾಗಿ ಪಂದ್ಯಗಳು ರೋಚಕವಾಗುವ ಸಾಧ್ಯತೆ ಇದೆ.

ಕರ್ನಾಟಕ ಮತ್ತು ಸೌರಾಷ್ಟ್ರ ತಂಡಗಳು ಗುಂಪು ಹಂತದಲ್ಲಿ ತಲಾ ನಾಲ್ಕು ಪಂದ್ಯಗಳಲ್ಲಿ ಜಯ ಗಳಿಸಿವೆ. ಎಲೀಟ್ ’ಡಿ‘ ಗುಂಪಿನಲ್ಲಿದ್ದ ಕರ್ನಾಟಕ ಮತ್ತು ಎಲೀಟ್ ’ಇ‘ ಗುಂಪಿನಲ್ಲಿದ್ದ ಸೌರಾಷ್ಟ್ರ ಆಯಾ ಗುಂಪಿನಲ್ಲಿ ಎರಡನೇ ಸ್ಥಾನವನ್ನು ಗಳಿಸಿದ್ದವು.

ADVERTISEMENT

ನಾಯಕ ಮನೀಷ್ ಪಾಂಡೆ ಕರ್ನಾಟಕದ ಪರ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ದೇವದತ್ತ ಪಡಿಕ್ಕಲ್‌, ಕರುಣ್ ನಾಯರ್ ಮತ್ತು ಮಯಂಕ್ ಅಗರವಾಲ್ ಅವರ ಬಲವೂ ತಂಡಕ್ಕೆ ಇದೆ. ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ಕೆ.ಸಿ.ಕಾರ್ಯಪ್ಪ ಉತ್ತಮ ಫಾರ್ಮ್‌ನಲ್ಲಿದ್ದು ಕೃಷ್ಣಪ್ಪ ಗೌತಮ್ ಕೂಡ ಮಿಂಚಬಲ್ಲರು.

ಸೌರಾಷ್ಟ್ರದ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ದೇಶಿ ಕ್ರಿಕೆಟ್‌ನಲ್ಲಿ ಮೊನಚಾದ ದಾಳಿ ಮೂಲಕ ಬ್ಯಾಟರ್‌ಗಳನ್ನು ಕಂಗೆಡಿಸಿರುವ ಎಡಗೈ ವೇಗಿ ಜಯದೇವ ಉನದ್ಕತ್‌ ಮತ್ತು ಐಪಿಎಲ್ ಪ್ರತಿಭೆ ಚೇತನ್ ಸಕಾರಿಯ ತಂಡದಲ್ಲಿದ್ದು ಶೆಲ್ಡನ್ ಜಾಕ್ಸನ್ ಮತ್ತು ಪ್ರೇರಕ್ ಮಂಕಡ್, ಹರ್ವಿಕ್ ದೇಸಾಯಿ, ವಿಶ್ವರಾಜ್ ಜಡೇಜ, ಧರ್ಮೇಂದ್ರ ಸಿಂಗ್ ಜಡೇಜ ಮುಂತಾದವರು ತಂಡದ ಶಕ್ತಿಯಾಗಿದ್ದಾರೆ.

ಋತುರಾಜ್‌ ಗಾಯಕವಾಡ್ ಅಲಭ್ಯ

ಮಹಾರಾಷ್ಟ್ರ ತಂಡ ಸಾಂಪ್ರದಾಯಿಕ ಎದುರಾಳಿ ವಿದರ್ಭ ವಿರುದ್ಧ ಆಡಲಿದ್ದು ಋತುರಾಜ್ ಗಾಯಕವಾಡ್ ಅವರ ಅನುಪಸ್ಥಿತಿಯಲ್ಲಿ ಕಣಕ್ಕೆ ಇಳಿಯಲಿದೆ. ಐಪಿಎಲ್‌ನಲ್ಲಿ ಚೆನ್ನೈ ಗೆಲುವಿಗೆ ಪ್ರಮುಖ ಕಾರಣರಾಗಿದ್ದ ಋತುರಾಜ್ ಅವರು ಮುಷ್ತಾಕ್ ಅಲಿ ಟ್ರೋಫಿಯ ಲೀಗ್ ಹಂತದಲ್ಲಿ ಮಹಾರಾಷ್ಟ್ರಕ್ಕೆ ನೆರವಾಗಿದ್ದರು. ಈಗ ನ್ಯೂಜಿಲೆಂಡ್ ಎದುರಿನ ಟ್ವೆಂಟಿ–20 ಸರಣಿಗಾಗಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಪ್ರೀಕ್ವಾರ್ಟರ್ ಫೈನಲ್‌: ಇಂದಿನ ಹಣಾಹಣಿ

ಮುಖಾಮುಖಿಯಾಗುವ ತಂಡಗಳು;ಸ್ಥಳ;ಸಮಯ

ಮಹಾರಾಷ್ಟ್ರ–ವಿದರ್ಭ;ದೆಹಲಿ;ಬೆ 8.30

ಕೇರಳ–ಹಿಮಾಚಲಪ್ರದೇಶ;ದೆಹಲಿ;ಮ 12.00

‌ಕರ್ನಾಟಕ–ಸೌರಾಷ್ಟ್ರ–ದೆಹಲಿ;ಮ 1.00

ಕಳೆದ ವಾರಗಳಿಗೆ ಹೋಲಿಸಿದರೆ ಈಗ ಮಾಲಿನ್ಯದ ಪ್ರಮಾಣ ಸಮಾಧಾನಕರವಾಗಿದೆ. ಪಂದ್ಯಗಳಿಗೆ ಅಡ್ಡಿಯಾಗುವಷ್ಟು ಸಮಸ್ಯೆ ಏನೂ ಇಲ್ಲ.

ಡಿಡಿಸಿಎ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.