ADVERTISEMENT

ಜಯಭೇರಿ ಮೊಳಗಿಸಿದ ಕರ್ನಾಟಕ

ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್: ರೋಹನ್‌ ಉತ್ತಮ ಆಟ

ಪಿಟಿಐ
Published 8 ಮಾರ್ಚ್ 2019, 18:49 IST
Last Updated 8 ಮಾರ್ಚ್ 2019, 18:49 IST
ರೋಹನ್ ಕದಂ
ರೋಹನ್ ಕದಂ   

ಇಂದೋರ್‌: ಲೀಗ್ ಹಂತದ ಎಲ್ಲ ಏಳು ಪಂದ್ಯಗಳನ್ನು ಗೆದ್ದಿದ್ದ ಕರ್ನಾಟಕ ತಂಡ ಸೈಯದ್ ಮುಷ್ತಾಕ್‌ ಅಲಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೂಪರ್ ಲೀಗ್‌ ಹಂತದಲ್ಲಿ ಶುಭಾರಂಭ ಮಾಡಿದೆ.

ಇಲ್ಲಿ ಶುಕ್ರವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಮನೀಷ್ ಪಾಂಡೆ ಬಳಗ ಮುಂಬೈ ತಂಡವನ್ನು ಒಂಬತ್ತು ವಿಕೆಟ್‌ಗಳಿಂದ ಮಣಿಸಿತು.

98 ರನ್‌ಗಳ ಸುಲಭ ಗುರಿ ಬೆನ್ನತ್ತಿದ ಕರ್ನಾಟಕಕ್ಕೆ ಆರಂಭಿಕ ಜೋಡಿ ರೋಹನ್ ಕದಂ ಮತ್ತು ಬಿ.ಆರ್.ಶರತ್ ಭದ್ರ ತಳಪಾಯ ಹಾಕಿಕೊಟ್ಟರು. ಇವರಿಬ್ಬರು ಮೊದಲ ವಿಕೆಟ್‌ಗೆ 79 ರನ್ ಸೇರಿಸಿದರು. ಶರತ್ ಔಟಾದ ನಂತರ ಬಂದ ಮಯಂಕ್ ಅಗರವಾಲ್ ಸುಲಭ ಜಯಕ್ಕೆ ನೆರವಾದರು.

ADVERTISEMENT

ರೋಹನ್ ಕದಂ 62 ರನ್ ಗಳಿಸಿ ಅಜೇಯರಾಗಿ ಉಳಿದರು. 45 ಎಸೆತ ಎದುರಿಸಿದ ಅವರು ಒಂದು ಸಿಕ್ಸರ್‌ ಮತ್ತು ಎಂಟು ಬೌಂಡರಿ ಸಿಡಿಸಿದ್ದರು.

ಮುಂಬೈ ಬ್ಯಾಟ್ಸ್‌ಮನ್‌ಗಳ ಪರದಾಟ: ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಮುಂಬೈ ತಂಡದವರು ಕರ್ನಾಟಕದ ಕರಾರುವಾಕ್ ದಾಳಿಗೆ ತತ್ತರಿಸಿದರು.

ಪೃಥ್ವಿ ಶಾ, ಸಿದ್ದೇಶ್‌ ಲಾಡ್‌, ಶ್ರೇಯಸ್‌ ಅಯ್ಯರ್ ಮುಂತಾದವರನ್ನು ಒಳಗೊಂಡ ಬಲಿಷ್ಠ ಬ್ಯಾಟಿಂಗ್ ಪಡೆ ಯನ್ನು ಕರ್ನಾಟಕದ ಬೌಲರ್‌ಗಳು ನಿರಂತರವಾಗಿ ಕಾಡಿದರು.

ವಿನಯಕುಮಾರ್ ಮತ್ತು ಮನೋಜ್ ಭಾಂಡಗೆ ತಲಾ ಎರಡು ವಿಕೆಟ್ ಕಬಳಿಸಿದರೆ ಉಳಿದ ನಾಲ್ಕು ಬೌಲರ್‌ಗಳು ಒಂದೊಂದು ವಿಕೆಟ್ ಉರುಳಿಸಿದರು. ಐದು ಮಂದಿ ಎರಡಂಕಿ ಮೊತ್ತ ದಾಟಲಾಗದೆ ಔಟಾದರು. 22 ರನ್ ಗಳಿಸಿದ ಏಳನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಆಕಾಶ್ ಪಾರ್ಕರ್‌ ಗರಿಷ್ಠ ಮೊತ್ತ ಗಳಿಸಿದ ಆಟಗಾರ ಎನಿಸಿದರು.

ಸಂಕ್ಷಿಪ್ತ ಸ್ಕೋರು: ಮುಂಬೈ:20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 97 (ಸಿದ್ದೇಶ್ ಲಾಡ್ 13, ಸೂರ್ಯಕುಮಾರ್ ಯಾದವ್‌ 14, ಶ್ರೇಯಸ್ ಅಯ್ಯರ್ 10, ಶುಭಂ ರಂಜನೆ 15, ಆಕಾಶ್ ಪಾರ್ಕರ್‌ 22, ಶಾರ್ದೂಲ್‌ ಠಾಕೂರ್ 10; ವಿನಯಕುಮಾರ್‌ 15ಕ್ಕೆ2, ಪ್ರಸಿದ್ಧ ಕೃಷ್ಣ 26ಕ್ಕೆ1, ವಿ.ಕೌಶಿಕ್‌ 17ಕ್ಕೆ1, ಜೆ.ಸುಚಿತ್‌ 12ಕ್ಕೆ1‌, ಮನೋಜ್ ಭಾಂಡಗೆ 11ಕ್ಕೆ2, ಕೆ.ಸಿ.ಕಾರ್ಯಪ್ಪ 14ಕ್ಕೆ1); ಕರ್ನಾಟಕ: 13.2 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 98 (ರೋಹನ್‌ ಕದಂ 62, ಬಿ.ಆರ್.ಶರತ್‌ 25, ಮಯಂಕ್ ಅಗರವಾಲ್‌ 7; ಸಿದ್ದೇಶ್ ಲಾಡ್‌ 12ಕ್ಕೆ1). ಫಲಿತಾಂಶ: ಕರ್ನಾಟಕಕ್ಕೆ 9 ವಿಕೆಟ್‌ಗಳ ಜಯ. ಇಂದಿನ ಪಂದ್ಯ: ಕರ್ನಾಟಕ–ಉತ್ತರ ಪ್ರದೇಶ.

ಆರಂಭ: ಮಧ್ಯಾಹ್ನ 1.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.