ADVERTISEMENT

IND vs NZ Test: ವೃದ್ಧಿಮಾನ್ ಸಹಾಗೆ ಕುತ್ತಿಗೆ ನೋವು, ಕೀಪಿಂಗ್‌ಗೆ ಕೆ.ಎಸ್.ಭರತ್

ಐಎಎನ್ಎಸ್
Published 27 ನವೆಂಬರ್ 2021, 6:12 IST
Last Updated 27 ನವೆಂಬರ್ 2021, 6:12 IST
ವೃದ್ಧಿಮಾನ್ ಸಹಾ (ಎಎಫ್‌ಪಿ ಚಿತ್ರ)
ವೃದ್ಧಿಮಾನ್ ಸಹಾ (ಎಎಫ್‌ಪಿ ಚಿತ್ರ)   

ಕಾನ್ಪುರ: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೂರನೇ ದಿನದಾಟದ ವೇಳೆ ಟೀಮ್ ಇಂಡಿಯಾ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಕುತ್ತಿಗೆ ನೋವಿನ ಕಾರಣ ಮೈದಾನದಿಂದ ನಿರ್ಗಮಿಸಿದರು. ಅವರ ಬದಲಿಗೆ ಕೆ.ಎಸ್.ಭರತ್ ಅವರು ಕೀಪಿಂಗ್ ನಿರ್ವಹಿಸುತ್ತಿದ್ದಾರೆ.

ಇಲ್ಲಿನ ಗ್ರೀನ್‌ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶುಕ್ರವಾರ ಬ್ಯಾಟಿಂಗ್ ಮಾಡಿದ್ದ ಸಹಾ 12 ಎಸೆತಗಳನ್ನು ಎದುರಿಸಿ ಕೇವಲ 1 ರನ್ ಗಳಿಸಿದ್ದರು. ಬ್ಯಾಟಿಂಗ್ ವೇಳೆ ಟಿಮ್ ಸೌಥೀ ಅವರ ಔಟ್‌ಸ್ವಿಂಗ್ ಎಸೆತವೊಂದರಲ್ಲಿ ಅವರ ಕುತ್ತಿಗೆಗೆ ಏಟಾಗಿತ್ತು.

ಕುತ್ತಿಗೆ ನೋವಿನ ಕಾರಣ ವೃದ್ಧಿಮಾನ್ ಸಹಾ ಅವರು ಕೀಪಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ವೈದ್ಯಕೀಯ ತಂಡವು ಅವರನ್ನು ಪರಿಶೀಲನೆ ನಡೆಸಿ ಚಿಕಿತ್ಸೆ ನೀಡುತ್ತಿದೆ. ಅವರ ಬದಲಿಗೆ ಕೆ.ಎಸ್.ಭರತ್ ಕೀಪಿಂಗ್ ಮಾಡುತ್ತಿದ್ದಾರೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟ್ವೀಟ್ ಮಾಡಿದೆ.

ಸಹಾ ಅವರು ಮತ್ತೆ ಕೀಪಿಂಗ್‌ಗೆ ಎಷ್ಟೊತ್ತಿಗೆ ಮರಳಲಿದ್ದಾರೆ, ಅವರ ಕುತ್ತಿಗೆಗೆ ಆಗಿರುವ ಏಟಿನ ತೀವ್ರತೆ ಏನು ಎಂಬ ವಿವರಗಳನ್ನು ಬಿಸಿಸಿಐ ಬಹಿರಂಗಪಡಿಸಿಲ್ಲ.

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಬ್ಯಾಟ್ ಮಾಡಿರುವ ಭಾರತ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 345 ರನ್‌ಗಳಿಗೆ ಆಲೌಟ್ ಆಗಿತ್ತು. ಶುಭಮನ್ ಗಿಲ್ ಮತ್ತು ರವೀಂದ್ರ ಜಡೇಜಾ ಅರ್ಧಶತಕ ಹಾಗೂ ಶ್ರೇಯಸ್ ಅಯ್ಯರ್ ಶತಕ ದಾಖಲಿಸಿದ್ದರು. ಮೂರನೇ ದಿನದಾಟದ ಭೋಜನ ವಿರಾಮದ ವೇಳೆಗೆ ನ್ಯೂಜಿಲೆಂಡ್ ತಂಡವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ಕಳೆದುಕೊಂಡು 197 ರನ್ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.