ಕ್ರಿಕೆಟ್ (ಪ್ರಾತಿನಿಧಿಕ ಚಿತ್ರ)
ದುಬೈ: ಸ್ಪಿನ್–ವೇಗದ ದಾಳಿಯ ಬಲದಿಂದ ನ್ಯೂಜಿಲೆಂಡ್ ತಂಡ ಸೋಮವಾರ ಏಕಪಕ್ಷೀಯ ಪಂದ್ಯದಲ್ಲಿ 54 ರನ್‌ಗಳಿಂದ ಪಾಕಿಸ್ತಾನ ತಂಡವನ್ನು ಸೋಲಿಸಿ ಮಹಿಳೆಯರ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ‘ಎ’ ಗುಂಪಿನಿಂದ ಸೆಮಿಫೈನಲ್ ತಲುಪಿತು. ಆ ಮೂಲಕ ಭಾರತದ ನಾಕೌಟ್ ಆಸೆ ಕೂಡ ನುಚ್ಚುನೂರಾಯಿತು.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ನ್ಯೂಜಿಲೆಂಡ್ ತಂಡವನ್ನು ಪಾಕ್ ಸ್ಪಿನ್ನರ್‌ಗಳು 6 ವಿಕೆಟ್‌ಗೆ 110 ರನ್‌ಗಳ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದ್ದರು. ಆದರೆ ತಿರುಗೇಟು ನೀಡಿದ ಕಿವೀಸ್ ಬೌಲರ್‌ಗಳು ಪಾಕಿಸ್ತಾನ ತಂಡವನ್ನು 11.4 ಓವರುಗಳಲ್ಲೇ 56 ರನ್‌ಗಳಿಗೆ ಉರುಳಿಸಿದರು. ಲೆಗ್ ಸ್ಪಿನ್ನರ್ ಅಮೇಲಿಯಾ ಕೆರ್ (14ಕ್ಕೆ3) ಮತ್ತು ಆಫ್ ಬ್ರೇಕ್ ಬೌಲರ್ ಎಡೆನ್ ಕರ್ಸನ್ (7ಕ್ಕೆ2) ಅವರು ಹೆಚ್ಚಿನ ಯಶಸ್ಸು ಪಡೆದರು. ವೇಗಿಗಳಾದ ಲೀ ತಹುಹು ಮತ್ತು ರೋಸ್ಮರಿ ಮೇರ್ ತಲಾ ಒಂದು ವಿಕೆಟ್ ಪೆದರು.
ನ್ಯೂಜಿಲೆಂಡ್ ಮೂರು ಗೆಲುವಿನೊಡನೆ ‘ಎ’ ಗುಂಪಿನಲ್ಲಿ ಎರಡನೇ ಸ್ಥಾನದೊಡನೆ ನಾಲ್ಕರ ಘಟ್ಟಕ್ಕೆ ಮುನ್ನಡೆಯಿತು. ಎಲ್ಲ ನಾಲ್ಕೂ ಪಂದ್ಯಗಳನ್ನೂ ಗೆದ್ದ ಆಸ್ಟ್ರೇಲಿಯಾ ಎಂಟು ಪಾಯಿಂಟ್‌ಗಳೊಡನೆ ಈ ಮೊದಲೇ ಸೆಮಿಗೆ ಸ್ಥಾನ ಕಾದಿರಿಸಿತ್ತು.
ಈ ಪಂದ್ಯದಲ್ಲಿ ಒಂದೊಮ್ಮೆ ಪಾಕಿಸ್ತಾನ 10.4 ಓವರುಗಳಲ್ಲಿ ಸೆಮಿಫೈನಲ್‌ಗೇರುವ ಅವಕಾಶವಿತ್ತು. ಪಾಕಿಸ್ತಾನ ಹೆಚ್ಚಿನ ಓವರ್ ತೆಗೆದುಕೊಂಡು ಗೆಲುವು ಸಾಧಿಸಿದ್ದರೆ, ನೆಟ್ ರನ್ ರೇಟ್ ಆಧಾರದಲ್ಲಿ ಭಾರತಕ್ಕೆ ನಾಕೌಟ್ ಅವಕಾಶವಿರುತಿತ್ತು. ಆದರೆ ಈ ಎರಡೂ ತಂಡಗಳು ಈಗ ಟೂರ್ನಿಯಿಂದ ಹೊರಬಿದ್ದಿವೆ.
ಇದಕ್ಕೆ ಮೊದಲು ನ್ಯೂಜಿಲೆಂಡ್ ಪರ ಆರಂಭ ಆಟಗಾರ್ತಿ ಸೂಝಿ ಬೇಟ್ಸ್ ಅತ್ಯಧಿಕ 28 ರನ್ ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬ್ರೂಕ್ ಹ್ಯಾಲಿಡೇ 22 ರನ್ ಗಳಿಸಿದರು. ಪಾಕಿಸ್ತಾನ ಪರ ಎಡಗೈ ಸ್ಪಿನ್ನರ್ ನಶ್ರಾ ಸಂಧು (18ಕ್ಕೆ3) ಯಶಸ್ವಿ ಬೌಲರ್ ಎನಿಸಿದರು.
ಸ್ಕೋರುಗಳು: ನ್ಯೂಜಿಲೆಂಡ್: 20 ಓವರುಗಳಲ್ಲಿ 6 ವಿಕೆಟ್‌ಗೆ 110 (ಸೂಝಿ ಬೇಟ್ಸ್ 28, ಬ್ರೂಕ್ ಹ್ಯಾಲಿಡೇ 22; ನಶ್ರಾ ಸಂಧು 18ಕ್ಕೆ3); ಪಾಕಿಸ್ತಾನ: 11.4 ಓವರುಗಳಲ್ಲಿ 56 (ಮುನೀಬಾ ಅಲಿ 15, ಫಾತಿಮಾ ಸನಾ 21; ಅಮೇಲಿಯಾ ಕೆರ್ 14ಕ್ಕೆ3, ಎಡೆನ್ ಕರ್ಸನ್ 7ಕ್ಕೆ2). ಪಂದ್ಯದ ಆಟಗಾರ್ತಿ: ಎಡೆನ್ ಕರ್ಸನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.