ADVERTISEMENT

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್: ಇಂಗ್ಲೆಂಡ್ ತಲುಪಿದ ನ್ಯೂಜಿಲೆಂಡ್ ತಂಡ

ಆತಿಥೇಯರ ಎದುರಿನ ಟೆಸ್ಟ್ ಸರಣಿ; ಭಾರತ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್

ಪಿಟಿಐ
Published 17 ಮೇ 2021, 11:47 IST
Last Updated 17 ಮೇ 2021, 11:47 IST
ವಿಮಾನ ನಿಲ್ದಾಣದಲ್ಲಿ ನ್ಯೂಜಿಲೆಂಡ್ ತಂಡದ ಆಟಗಾರರು –ಟ್ವಿಟರ್ ಚಿತ್ರ
ವಿಮಾನ ನಿಲ್ದಾಣದಲ್ಲಿ ನ್ಯೂಜಿಲೆಂಡ್ ತಂಡದ ಆಟಗಾರರು –ಟ್ವಿಟರ್ ಚಿತ್ರ   

ಲಂಡನ್: ಆತಿಥೇಯ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಸರಣಿ ಮತ್ತು ಭಾರತದ ಎದುರಿನ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಆಡಲಿರುವ ನ್ಯೂಜಿಲೆಂಡ್‌ ತಂಡದ ಆಟಗಾರರು ಮೂರು ತಂಡಗಳಲ್ಲಿ ಭಾನುವಾರ ಮತ್ತು ಸೋಮವಾರಇಂಗ್ಲೆಂಡ್‌ಗೆ ತಲುಪಿದ್ದಾರೆ.

ಆಕ್ಲೆಂಡ್‌ನಿಂದ ಸಿಂಗಪುರದ ಮೂಲಕ ಭಾನುವಾರ ಇಲ್ಲಿಗೆ ಬಂದ ಆಟಗಾರರನ್ನು ಸೌತಾಂಪ್ಟನ್‌ನಲ್ಲಿರುವ ಏಜೀಸ್ ಬೌಲ್ ಕ್ರೀಡಾಂಗಣಕ್ಕೆ ಕರೆದುಕೊಂಡು ಹೋಗಲಾಯಿತು. ಪ್ರವಾಸದ ಮೊದಲ ಎರಡು ವಾರ ತಂಡ ಅಲ್ಲಿ ಉಳಿಯಲಿದೆ. ಜೂನ್ ಎರಡರಂದು ಲಂಡನ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದ್ದು ಎರಡನೇ ಟೆಸ್ಟ್ ಬರ್ಮಿಂಗ್‌ಹ್ಯಾಂನಲ್ಲಿ ಜೂನ್ 10ರಿಂದ ನಡೆಯಲಿದೆ. ಜೂನ್ 18ರಿಂದ ಸೌತಾಂಪ್ಟನ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯ ನಡೆಯಲಿದೆ.

‘ದಿ ಬ್ಲ್ಯಾಕ್‌ ಕ್ಯಾಪ್ಸ್‌’ ತಂಡದವರು ಕಠಿಣ ಆರೋಗ್ಯ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಇಲ್ಲಿಗೆ ಬಂದಿಳಿದಿದೆ. ಲಸಿಕೆ ಪಡೆದುಕೊಳ್ಳಲಾಗಿದ್ದು ಹೊರಡುವ ಮೊದಲು ಕೋವಿಡ್ ಪರೀಕ್ಷೆಯನ್ನೂ ಮಾಡಿಸಿಕೊಳ್ಳಲಾಗಿದೆ. ಮಾಸ್ಕ್ ಮತ್ತು ಸ್ಯಾನಿಟೈಜರ್ ಇರುವಂಥ ಕಿಟ್‌ ಜೊತೆಯಲ್ಲಿ ಇರಿಸಿಕೊಂಡಿದ್ದಾರೆ ಎಂದು ‘ನ್ಯೂಜಿಲೆಂಡ್ ಕ್ರಿಕೆಟ್‌’ನ ಪ್ರಕಟಣೆ ತಿಳಿಸಿದೆ.

ADVERTISEMENT

ಆಟಗಾರರು ಮೊದಲ ಮೂರು ದಿನ ಹೋಟೆಲ್ ಕೊಠಡಿಗಳಲ್ಲಿ ಪ್ರತ್ಯೇಕವಾಸದಲ್ಲಿರುವರು. ನಾಲ್ಕು ಮತ್ತು ಆರನೇ ದಿನಗಳಲ್ಲಿ ಆರು ಮಂದಿಯ ತಂಡಗಳಲ್ಲಿ ಸಣ್ಣ ಪ್ರಮಾಣದ ತರಬೇತಿ ನಡೆಸುವರು. ಈ ಸಂದರ್ಭದಲ್ಲಿ ಕೋವಿಡ್ ಪರೀಕ್ಷೆ ನಡೆಸಿ ನೆಗೆಟಿವ್ ವರದಿ ಬಂದಿರಬೇಕು. ಮೇ 26ರಿಂದ 28ರ ವರೆಗೆ ತಂಡಗಳನ್ನು ಎರಡು ವಿಭಾಗಗಳಲ್ಲಿ ವಿಂಗಡಿಸಿ ಪಂದ್ಯಗಳನ್ನು ಆಡಲಾಗುವುದು. ಈಗಾಗಲೇ ಪ್ರತ್ಯೇಕವಾಸದಲ್ಲಿರುವ ಸ್ಥಳೀಯ ಆರು ಮಂದಿ ಬೌಲರ್‌ಗಳು ವೇಳೆ ತಂಡಕ್ಕೆ ನೆರವಾಗಲಿದ್ದಾರೆ.

ಟಿಮ್ ಸೌಥಿ, ಬಿ.ಜೆ.ವಾಟ್ಲಿಂಗ್, ರೋಸ್ ಟೇಲರ್ ಮತ್ತು ನೀಲ್ ವ್ಯಾಗ್ನರ್ ಎರಡನೇ ತಂಡದಲ್ಲಿ ಸೋಮವಾರ ಸೌತಾಂಪ್ಟನ್‌ಗೆ ಬಂದಿದ್ದಾರೆ. ಐಪಿಎಲ್‌ನಲ್ಲಿದ್ದು ಮಾಲ್ಡಿವ್ಸ್‌ಗೆ ತೆರಳಿದ್ದ ನಾಯಕ ಕೇನ್ ವಿಲಿಯಮ್ಸನ್‌, ವೇಗಿ ಕೈಲಿ ಜೆಮೀಸನ್‌, ಮಿಚೆಲ್ ಸ್ಯಾಂಟ್ನರ್, ಫಿಸಿಯೊ ಟಾಮಿ ಸಿಮ್ಸೆಕ್‌ ಮತ್ತು ಟ್ರೇನರ್ ಕ್ರಿಸ್ ಡೊನಾಲ್ಡ್ಸನ್ ಕೂಡ ಸೋಮವಾರ ಬಂದಿದ್ದಾರೆ. ಕೌಂಟಿ ಚಾಂಪಿಯನ್‌ಷಿಪ್‌ನಲ್ಲಿ ಆಡಿದ್ದ ಬ್ಯಾಟ್ಸ್‌ಮನ್ ವಿಲ್‌ ಯಂಗ್ ಕೂಡ ರಾಷ್ಟ್ರೀಯ ತಂಡವನ್ನು ಸೇರಿಕೊಂಡಿದ್ದಾರೆ.

ಜೊಫ್ರಾ ಆರ್ಚರ್‌ಗೆ ಗಾಯ

ಮೊಣಕೈ ನೋವು ಹೆಚ್ಚಾಗಿರುವ ಕಾರಣ ವೇಗಿ ಜೊಫ್ರಾ ಆರ್ಚರ್ ಅವರನ್ನು ನ್ಯೂಜಿಲೆಂಡ್ ಎದುರಿನ ಟೆಸ್ಟ್ ಸರಣಿಯ ತಂಡದಿಂದ ಕೈಬಿಡಲಾಗಿದೆ. ಐಪಿಎಲ್‌ನಲ್ಲಿ ಆಡಿದ್ದ 26 ವರ್ಷದ ಆರ್ಚರ್ ನೋವಿನಿಂದಾಗಿ ಅರ್ಧದಲ್ಲೇ ತವರಿಗೆ ವಾಪಸಾಗಿದ್ದರು. ಕೌಂಟಿ ಟೂರ್ನಿಯಲ್ಲಿ ಸಸೆಕ್ಸ್‌ ಪರವಾಗಿ ಕೆಂಟ್ ಎದುರು ಒಂದು ಪಂದ್ಯ ಆಡಿದ್ದರು. ಐದು ಓವರ್‌ ಬೌಲಿಂಗ್ ಮಾಡಿದಾಗ ಮತ್ತೆ ನೋವು ಕಾಣಿಸಿಕೊಂಡ ಕಾರಣ ಪಂದ್ಯದಿಂದ ಹೊರಬಿದ್ದಿದ್ದರು.

ನಂತರ ಟೆಸ್ಟ್ ಸರಣಿಗೆ ಸಜ್ಜಾಗಿರುವುದಾಗಿ ಅವರು ತಿಳಿಸಿದ್ದರು. ಆದರೆ ನೋವು ಉಲ್ಬಣಿಸಿದ್ದರಿಂದ ಯೋಜನೆಗಳು ಬುಡಮೇಲಾಗಿವೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ತಿಳಿಸಿದೆ. ಭಾರತದ ಎದುರು ನಡೆಯಲಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಅವರು ಲಭ್ಯ ಇರುತ್ತಾರೆ ಎಂದು ಮಂಡಳಿ ವಿವರಿಸಿದೆ. ನ್ಯೂಜಿಲೆಂಡ್ ಎದುರಿನ ಟೆಸ್ಟ್ ಸರಣಿಗೆ ಇಂಗ್ಲೆಂಡ್ ತಂಡವನ್ನು ಮಂಗಳವಾರ ಪ್ರಕಟಿಸುವ ಸಾಧ್ಯತೆ ಇದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.