ADVERTISEMENT

ಕಿವೀಸ್‌ ಮಡಿಲಿಗೆ ಟೆಸ್ಟ್‌ ಸರಣಿ

ಜೇಕಬ್‌ಗೆ ಐದು ವಿಕೆಟ್‌ ಗೊಂಚಲು: ವಿಂಡೀಸ್‌ಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 0:37 IST
Last Updated 23 ಡಿಸೆಂಬರ್ 2025, 0:37 IST
   

ಮೌಂಟ್‌ ಮಾಂಗಾನೂಯಿ: ವೇಗಿ ಜೇಕಬ್ ಡಫಿ (42ಕ್ಕೆ 5) ಅವರ ಅಮೋಘ ಬೌಲಿಂಗ್‌ ದಾಳಿಯ ನೆರವಿನಿಂದ ನ್ಯೂಜಿಲೆಂಡ್‌ ತಂಡವು ಮೂರನೇ ಟೆಸ್ಟ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ತಂಡವನ್ನು 323 ರನ್‌ಗಳಿಂದ ಸೋಮವಾರ ಮಣಿಸಿತು. ಇದರೊಂದಿಗೆ ಆತಿಥೇಯ ತಂಡವು ಮೂರು ಪಂದ್ಯಗಳ ಸರಣಿಯನ್ನು 2–0ಯಿಂದ ಗೆದ್ದುಕೊಂಡಿತು.

462 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ವಿಂಡೀಸ್ ತಂಡವು ಜೇಕಬ್‌ ಮತ್ತು ಅಜಾಜ್ ಪಟೇಲ್ (23ಕ್ಕೆ 3) ಅವರ ಪರಿಣಾಮಕಾರಿ ದಾಳಿಗೆ ನಾಟಕೀಯ ಕುಸಿತ ಅನುಭವಿಸಿತು. ಆರಂಭಿಕ ಆಟಗಾರ ಬ್ರೆಂಡನ್ ಕಿಂಗ್ (67;96ಎ) ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ಪೆವಿಲಿಯನ್‌ ಪರೇಡ್‌ ನಡೆಸಿದರು. 80.3 ಓವರ್‌ಗಳಲ್ಲಿ 138 ರನ್‌ಗಳಿಗೆ ಪ್ರವಾಸಿ ತಂಡವು ಆಲೌಟ್‌ ಆಯಿತು. 

ವಿಕೆಟ್‌ ನಷ್ಟವಿಲ್ಲದೆ 43 ರನ್‌ಗಳಿಂದ ಕೊನೆಯ ದಿನದಾಟ ಆರಂಭಿಸಿದ ವೆಸ್ಟ್ ಇಂಡೀಸ್ ಮೊದಲ ವಿಕೆಟ್‌ಗೆ 87 ರನ್‌ ಪೇರಿಸಿತು. ಬ್ರೆಂಡನ್ ಮತ್ತು ಜಾನ್ ಕ್ಯಾಂಪ್‌ಬೆಲ್‌ (16;105ಎ) ತಾಳ್ಮೆಯ ಆಟ ಪ್ರದರ್ಶಿಸಿ, ಪಂದ್ಯವನ್ನು ಡ್ರಾನತ್ತ ಕೊಂಡೊಯ್ಯುವ ಪ್ರಯತ್ನ ನಡೆಸಿದರು. 

ADVERTISEMENT

ಆದರೆ ನಂತರದ 11 ರನ್‌ಗಳ ಅಂತರದಲ್ಲಿ ಐದು ವಿಕೆಟ್‌ಗಳು ತರಗೆಲೆಯಂತೆ ಉದುರಿದವು. ಊಟದ ವಿರಾಮದ ವೇಳೆಗೆ 8 ವಿಕೆಟ್‌ಗೆ 112 ರನ್‌ ಗಳಿಸಿದ್ದ ವಿಂಡೀಸ್‌, ನಂತರದ ನಾಲ್ಕು ಓವರ್‌ಗಳಲ್ಲೇ ಹೋರಾಟ ಮುಗಿಸಿತು. ಮೊದಲ ಇನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ ಪಡೆದಿದ್ದ ಜೇಕಬ್‌ ಎರಡನೇ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ ಗೊಂಚಲು (ಒಟ್ಟು 128ಕ್ಕೆ 9) ಪಡೆದರು. ಇದು ಅವರ ವೃತ್ತಿಜೀವನದ ಶ್ರೇಷ್ಠ ಸಾಧನೆಯಾಗಿದೆ.

ನ್ಯೂಜಿಲೆಂಡ್‌ನ ಡೆವಾನ್‌ ಕಾನ್ವೆ ಎರಡು ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 227 ಮತ್ತು 100 ರನ್ ಗಳಿಸಿದರೆ, ನಾಯಕ ಟಾಮ್ ಲೇಥಂ ಅವರು ಕ್ರಮವಾಗಿ 137 ಮತ್ತು 101 ರನ್ ದಾಖಲಿಸಿ ತಂಡವು ಬೃಹತ್‌ ಮೊತ್ತ ಗಳಿಸಲು ನೆರವಾಗಿದ್ದರು. ಇವರಿಬ್ಬರು ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಅವಳಿ ಶತಕಗಳನ್ನು ಸಿಡಿಸಿದ ಮೊದಲ ಆರಂಭಿಕ ಜೋಡಿ ಎಂಬ ಹಿರಿಮೆಗೂ ಪಾತ್ರರಾದರು. ಜೊತೆಗೆ ಒಟ್ಟು 515 ರನ್ ಜೊತೆಯಾಟವಾಡಿ ವಿಶ್ವದಾಖಲೆ ಬರೆದರು.

ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಮೊದಲ ಪಂದ್ಯ ಡ್ರಾಗೊಂಡರೆ, ವೆಲ್ಲಿಂಗ್ಟನ್‌ನಲ್ಲಿ ನಡೆದ ಎರಡನೇ ಪಂದ್ಯವನ್ನು ನ್ಯೂಜಿಲೆಂಡ್ 9 ವಿಕೆಟ್‌ಗಳಿಂದ ಗೆದ್ದಿತ್ತು.

‌ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್‌: 8 ವಿಕೆಟ್‌ಗೆ 575 ಡಿ. ಮತ್ತು 54 ಓವರುಗಳಲ್ಲಿ 2 ವಿಕೆಟ್‌ಗೆ 306 ಡಿ. ವೆಸ್ಟ್‌ ಇಂಡೀಸ್‌: 420 ಮತ್ತು 80.3 ಓವರ್‌ಗಳಲ್ಲಿ 138 (ಬ್ರೆಂಡನ್ ಕಿಂಗ್ 67, ಜೇಕಬ್ ಡಫಿ 42ಕ್ಕೆ 5, ಅಜಾಜ್ ಪಟೇಲ್ 23ಕ್ಕೆ 3). ಫಲಿತಾಂಶ: ನ್ಯೂಜಿಲೆಂಡ್‌ ತಂಡಕ್ಕೆ 323 ರನ್‌ಗಳ ಗೆಲುವು, 2–0ಯಿಂದ ಸರಣಿ ವಶ. ಪಂದ್ಯದ ಆಟಗಾರ: ಡೆವಾನ್‌ ಕಾನ್ವೆ. ಸರಣಿಯ ಆಟಗಾರ: ಜೇಕಬ್ ಡಫಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.