ADVERTISEMENT

IND vs NZ T20I: ಸಾಂಘಿಕ ಆಟ; ನ್ಯೂಜಿಲೆಂಡ್‌ಗೆ ಜಯ

ಪಿಟಿಐ
Published 28 ಜನವರಿ 2026, 20:19 IST
Last Updated 28 ಜನವರಿ 2026, 20:19 IST
   

ವಿಶಾಖಪಟ್ಟಣ: ಬ್ಯಾಟರ್‌ಗಳ ಉತ್ತಮ ಪ್ರದರ್ಶನ ಮತ್ತು ಬೌಲರ್‌ಗಳ ಸಂಘಟಿತ ನಿರ್ವಹಣೆಯ ನೆರವಿನಿಂದ ನ್ಯೂಜಿಲೆಂಡ್ ತಂಡ ನಾಲ್ಕನೇ ಟಿ20 ಪಂದ್ಯದಲ್ಲಿ ಬುಧವಾರ ಭಾರತ ತಂಡದ ಮೇಲೆ 50 ರನ್‌ಗಳ ಅರ್ಹ ಜಯ ಪಡೆಯಿತು. ಟಿ20 ವಿಶ್ವಕಪ್‌ಗೆ ಕೇವಲ ಹತ್ತು ದಿನಗಳು ಉಳಿದಿರುವಾಗ ಪ್ರವಾಸಿ ತಂಡಕ್ಕೆ ಈ ಗೆಲುವು ವಿಶ್ವಾಸ ಮೂಡಿಸಲು ನೆರವಾಯಿತು.

ಬ್ಯಾಟಿಂಗಿಗೆ ಇಳಿಸಲ್ಪಟ್ಟ ನ್ಯೂಜಿಲೆಂಡ್ ತಂಡಕ್ಕೆ ಟಿಮ್‌ ಸೀಫರ್ಟ್‌ (62; 36ಎ, 4x7, 6x3) ಮತ್ತು ಡೆವಾನ್‌ ಕಾನ್ವೆ (44; 23ಎ 4x4, 6x3) ಅವರು ಶತಕದ ಜೊತೆಯಾಟದೊಂದಿಗೆ (100 ರನ್‌;
50ಎ) ಬಿರುಸಿನ ಆರಂಭ ನೀಡಿದರು. ಮಧ್ಯಮ ಹಂತದಲ್ಲಿ ತಂಡ ಪರದಾಡಿ ದರೂ 7 ವಿಕೆಟ್‌ಗೆ 215 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ನಂತರ ಕಿವೀಸ್ ಬೌಲರ್‌ಗಳು ಆತಿಥೇಯ ತಂಡಕ್ಕೆ ಆರಂಭದಲ್ಲೇ ಪೆಟ್ಟು ನೀಡಿದರು.

ಮಧ್ಯಮ ಹಂತದಲ್ಲಿ ಶಿವಂ ದುಬೆ (65; 23ಎ, 4x3, 6x7) ಸ್ಫೋಟಕ ಆಟದಿಂದ ಎದುರಾಳಿ ಪಾಳೆಯದಲ್ಲಿ ಆತಂಕ ಮೂಡಿಸಿದರೂ, ಅವರ ರನೌಟ್ ನಂತರ ನ್ಯೂಜಿಲೆಂಡ್ ಸಂಪೂರ್ಣ ಹಿಡಿತ ಸಾಧಿಸಿತು. ಐದು ಪಂದ್ಯಗಳ ಸರಣಿಯಲ್ಲಿ ಹಿನ್ನಡೆಯನ್ನು 3–1ಕ್ಕೆ ಇಳಿಸಿತು.

ADVERTISEMENT

ಅಮೋಘ ಲಯದಲ್ಲಿರುವ ಅಭಿಷೇಕ್‌ ಶರ್ಮಾ ಅವರು ಇನಿಂಗ್ಸ್‌ನ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಸಿಕ್ಸರ್ ಎತ್ತುವ ಭರದಲ್ಲಿ ಡೆವಾನ್‌ ಕಾನ್ವೆಗೆ ಕ್ಯಾಚ್‌ ನೀಡಿದರು. ನಾಯಕ ಸೂರ್ಯಕುಮಾರ್ ಯಾದವ್‌ ಅವರೂ ತಂಡವು ಎರಡಂಕಿ ಮುಟ್ಟುವ ಮೊದಲೇ ನಿರ್ಗಮಿಸಿದರು. ವಿಕೆಟ್‌ ಕೀ‍‍ಪರ್‌ ಸಂಜು ಸ್ಯಾಮ್ಸನ್‌ ಅವರು ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ಮತ್ತೆ ವಿಫಲರಾದರು. ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ 2 ರನ್‌ಗಳಿಗೆ ಔಟಾದರು.

ಈ ವೇಳೆ ರಿಂಕು ಸಿಂಗ್‌ (39; 30ಎ, 4x3, 6x2) ಹಾಗೂ ದುಬೆ ಬಿರುಸಿನ ಬ್ಯಾಟಿಂಗ್‌ ಮೂಲಕ ತಂಡಕ್ಕೆ ಚೇತರಿಕೆ ನೀಡಲು ಯತ್ನಿಸಿದರು. ಸಿಕ್ಸರ್‌– ಬೌಂಡರಿಗಳನ್ನು ಸಿಡಿಸದ ದುಬೆ ಕೇವಲ 15 ಎಸೆತಗಳಲ್ಲಿ ಅರ್ಧಶತಕ ದಾಟಿದರು. ಇವರಿಬ್ಬರು ಔಟಾದಂತೆ ಕಿವೀಸ್‌ ಬೌಲರ್‌ಗಳು ಮತ್ತೆ ನಿಯಂತ್ರಣ ಸಾಧಿಸಿದರು. ಭಾರತ 18.4 ಓವರ್‌ಗಳಲ್ಲಿ 165 ರನ್‌ಗಳಿಗೆ ಹೋರಾಟ ಮುಗಿಸಿತು.

ಇದಕ್ಕೆ ಮೊದಲು, ಟಿಮ್‌ ಸೀಫರ್ಟ್‌ ಮತ್ತು ಡೆವಾನ್ ಕಾನ್ವೆ ಅವರು ನ್ಯೂಜಿಲೆಂಡ್ ತಂಡಕ್ಕೆ ಮಿಂಚಿನ ಆರಂಭ ಒದಗಿಸಿದರು. ಸೀಫರ್ಟ್‌ ಅವರು ಅರ್ಷದೀಪ್ ಅವರ ಮೊದಲ ಓವರಿನಲ್ಲೇ ಮೂರು ಬೌಂಡರಿ ಬಾರಿಸಿದರು. ಇದರಲ್ಲಿ ಎರಡು ಬ್ಯಾಟಿನಂಚಿಗೆ ತಗುಲಿ ಬೌಂಡರಿ ದಾಟಿದವು. ಹರ್ಷಿತ್ ರಾಣಾ ಮಾಡಿದ ಮುಂದಿನ ಓವರಿನಲ್ಲಿ ಅವರು ಲಾಂಗ್‌ಆನ್‌ಗೆ ಸಿಕ್ಸರ್ ಎತ್ತಿ ಬಾಹುಬಲ ಮೆರೆದರು. ಜಸ್‌ಪ್ರೀತ್ ಬೂಮ್ರಾ ಬೌಲಿಂಗ್‌ನಲ್ಲೂ ಚೆಂಡನ್ನು ಸೈಟ್‌ಸ್ಕ್ರೀನ್‌ ಮೇಲೆ ಸಿಕ್ಸರ್‌ ಎತ್ತಿದ್ದರು.

ತಂಡ ನಾಲ್ಕನೇ ಓವರಿನಲ್ಲೇ 50ರ ಗಡಿ ದಾಟಿತು. ಪವರ್‌ಪ್ಲೇ ಮುಗಿದಾಗ ಮೊತ್ತ ವಿಕೆಟ್‌ ನಷ್ಟವಿಲ್ಲದೇ 71. ಸೀಫರ್ಟ್‌ ತೋಳೇರಿಸಿ ಆಡಿದ ಕಾರಣ ಡೆವಾನ್ ಕಾನ್ವೆ (44) ಅವರಿಗೆ ಒತ್ತಡ ಬೀಳಲಿಲ್ಲ. ಮೊದಲ 9 ರನ್‌ಗಳಿಗೆ 9 ಎಸೆತ ತೆಗೆದುಕೊಂಡ ಕಾನ್ವೆ ನಂತರ
ಆಕ್ರಮಣಕಾರಿಯಾದರು. ಮುಂದಿನ 13 ಎಸೆತಗಳಲ್ಲಿ 35 ರನ್ ಚಚ್ಚಿದರು.

ಮೊತ್ತ 100 ರನ್ ತಲುಪಿದಾಗ, ಕೊನೆಗೂ ಕುಲದೀಪ್ ಈ ಅಪಾಯಕಾರಿ ಜೊತೆಯಾಟ ಮುರಿದರು. ಕಾನ್ವೆ ಹೊಡೆದ ಚೆಂಡನ್ನು ಡೀಪ್‌ ಕವರ್ಸ್‌ನಲ್ಲಿ ರಿಂಕು ಸಿಂಗ್ ಕ್ಯಾಚ್‌ ಹಿಡಿದರು. ನಂತರ ಬೌಲರ್‌ಗಳು ಕಡಿವಾಣ ಹಾಕಿದರು. ಇದರಿಂದ 37 ರನ್ ಅಂತರದಲ್ಲಿ ನಾಲ್ಕು ವಿಕೆಟ್‌ಗಳು ಬಿದ್ದವು. ರನ್‌ ವೇಗ ಹೆಚ್ಚಿಸುವ ಭರದಲ್ಲಿ ವಿಕೆಟ್‌ಗಳು ಬಿದ್ದವು.

ಡೇರಿಲ್ ಮಿಚೆಲ್ (ಔಟಾಗದೇ 39, 18ಎ, 4x2, 6x3) ಕೊನೆಯಲ್ಲಿ ಮಿಂಚಿನ ಆಟವಾಡಿದ್ದ ರಿಂದ ತಂಡದ ಮೊತ್ತ ಸುಲಭವಾಗಿ 200ರ ಗಡಿ ದಾಟಿತು.

ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್‌: 7 ವಿಕೆಟ್‌ಗೆ 215 (ಡೆವಾನ್‌ ಕಾನ್ವೆ 55, ಟಿಮ್‌ ಸೀಫರ್ಟ್‌ 62, ಡೇರಿಲ್ ಮಿಚೆಲ್ ಔಟಾಗದೇ 39; ಅರ್ಷದೀಪ್ 33ಕ್ಕೆ2, ಕುಲದೀಪ್ 39ಕ್ಕೆ2); ಭಾರತ: 18.4 ಓವರುಗಳಲ್ಲಿ 165 (ಸಂಜು ಸ್ಯಾಮ್ಸನ್‌ 24, ರಿಂಕು ಸಿಂಗ್ 39, ಶಿವಂ ದುಬೆ 65; ಜೇಕಬ್‌ ಡಫಿ 33ಕ್ಕೆ2, ಈಶ್ ಸೋಧಿ 46ಕ್ಕೆ2, ಮಿಚೆಲ್ ಸ್ಯಾಂಟ್ನರ್ 26ಕ್ಕೆ3).

ಪಂದ್ಯದ ಆಟಗಾರ: ಟಿಮ್‌ ಸೀಫರ್ಟ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.