ADVERTISEMENT

ಟೆಸ್ಟ್‌ನಲ್ಲಿ ಕಿವೀಸ್‌ಗೆ ನೂರನೇ ಗೆಲುವು

10 ವಿಕೆಟ್‌ಗಳಿಂದ ಸೋಲನುಭವಿಸಿದ ಭಾರತ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 19:59 IST
Last Updated 24 ಫೆಬ್ರುವರಿ 2020, 19:59 IST

ವೆಲಿಂಗ್ಟನ್‌: ಹಳೆಯ ಚೆಂಡಿನಲ್ಲೂ ಕರಾಮತ್ತು ಪ್ರದರ್ಶಿಸಿದ ಟ್ರೆಂಟ್‌ ಬೌಲ್ಟ್‌ (39ಕ್ಕೆ4) ಮತ್ತು ಟಿಮ್‌ ಸೌಥಿ (61ಕ್ಕೆ5), ನ್ಯೂಜಿಲೆಂಡ್‌ ತಂಡಕ್ಕೆ ಟೆಸ್ಟ್‌ ಪಂದ್ಯಗಳಲ್ಲಿ ನೂರನೇ ಗೆಲುವು ತಂದುಕೊಟ್ಟರು. ಆತಿಥೇಯರು ಬೇಸಿನ್‌ ರಿಸರ್ವ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದ ನಾಲ್ಕನೇ ದಿನವೇ ಭಾರತ ತಂಡವನ್ನು 10 ವಿಕೆಟ್‌ಗಳಿಂದ ಅನಾಯಾಸವಾಗಿ ಗೆದ್ದುಕೊಂಡರು.

ವೇಗದ ಜೋಡಿಯಾದಬೌಲ್ಟ್‌–ಸೌಥಿ ಜೊತೆಯಾಗಿ ಆಡಿದಾಗ ನ್ಯೂಜಿಲೆಂಡ್‌28 ಟೆಸ್ಟ್‌ ಪಂದ್ಯಗಳಲ್ಲಿ ಜಯಗಳಿಸಿದೆ ಎಂಬುದು ಗಮನಾರ್ಹ. ಕರಾರುವಾಕ್‌ ಬೌಲಿಂಗ್‌ ದಾಳಿಯಿಂದ ಭಾರತದ ಪ್ರತಿರೋಧ ಹೆಚ್ಚು ಕಾಲ ಬಾಳಲಿಲ್ಲ. ಮೂರನೇ ದಿನವೇ ಭಾರತಕ್ಕೆ ಪೆಟ್ಟುಕೊಟ್ಟಿದ್ದ ಈ ಜೋಡಿ ಸೋಮವಾರ ಭಾರತ ತಂಡವನ್ನು 191 ರನ್‌ಗಳಿಗೆ ಆಲೌಟ್‌ ಮಾಡಿತು. ನ್ಯೂಜಿಲೆಂಡ್‌ಗೆ ಕೇವಲ 9 ರನ್‌ಗಳ ಗುರಿ ಎದುರಾಯಿತು.

ಈ ಸೋಲಿಗೆ ಮೊದಲು ಭಾರತ ಸತತ ಏಳು ಪಂದ್ಯಗಳನ್ನು ಗೆದ್ದುಕೊಂಡಿತ್ತು. ಇನ್ನೊಂದೆಡೆ ಸತತ ಮೂರು ಪಂದ್ಯಗಳ ಸೋಲಿನ ನಂತರ ಆತಿಥೇಯರ ಮೊಗದಲ್ಲಿ ಸಂಭ್ರಮ ಕಂಡಿತು. ನ್ಯೂಜಿಲೆಂಡ್‌ ಗೆಲುವಿಗೆ ಅಗತ್ಯವಿದ್ದ 9 ರನ್‌ಗಳನ್ನು ಹತ್ತು ಎಸೆತಗಳಲ್ಲಿ ಗಳಿಸಿತು.

ADVERTISEMENT

39 ರನ್‌ಗಳ ಹಿನ್ನಡೆಯೊಡನೆ (ಶನಿವಾರ 4 ವಿಕೆಟ್‌ಗೆ 144) ದಿನದಾಟ ಆರಂಭಿಸಿದ್ದ ಭಾರತ, ನ್ಯೂಜಿಲೆಂಡ್‌ಗೆ ಸಾಧಾರಣ ಮೊತ್ತದ ಗುರಿ ನಿಗದಿಪಡಿಸಬಹುದೆಂಬ ಕ್ಷೀಣ ಆಸೆ ಬೇಗನೇ ದೂರವಾಯಿತು. ಕಿವೀಸ್‌ ಬೌಲರ್‌ಗಳು ಶಾರ್ಟ್‌ಪಿಚ್‌ಗಳ ಬದಲು ಸಾಂಪ್ರದಾಯಿಕ ರೀತಿಯಲ್ಲಿ ವಿಕೆಟ್‌ ಪಡೆಯಲು ಯತ್ನಿಸಿ ಯಶಸ್ವಿಯಾದರು. ಬೌಲ್ಟ್‌ ಬೌಲಿಂಗ್‌ನಲ್ಲಿ ತಮ್ಮತ್ತ ಧಾವಿಸಿ ಸರಿದುಹೋಗುತ್ತಿದ್ದ ಚೆಂಡನ್ನು ಆಡಲು ಹೋಗಿ ರಹಾನೆ ವಿಕೆಟ್‌ ಕೀಪರ್‌ ವಾಟ್ಲಿಂಗ್‌ ಅವರಿಗೆ ಕ್ಯಾಚಿತ್ತರು.

ಇದಾದ ನಂತರ ಸೌಥಿ ಭಾರತ ಪತನವನ್ನು ತ್ವರಿತಗೊಳಿಸಿದರು. ಎರಡು ಔಟ್‌ಸ್ವಿಂಗರ್‌ಗಳನ್ನು ಆಡದೇ ಬಿಟ್ಟ ಹನುಮ ವಿಹಾರಿ ಮೂರನೆಯದನ್ನು ಬಿಡಲು ಹೋದರು. ಆದರೆ ಈ ಬಾರಿ ಇನ್‌ಸ್ವಿಂಗರ್‌ ಬೌಲ್‌ ಮಾಡಿದ್ದರಿಂದ ವಿಹಾರಿ ಅಂದಾಜುತಪ್ಪಿ ಚೆಂಡು ಸ್ಟಂಪ್‌ಗಳಿಗೆ ಬಡಿಯಿತು. 15 ರನ್‌ಗಳಿಗೆ ಅವರು 79 ಎಸೆತ ಆಡಿದ್ದರು. ಅಶ್ವಿನ್‌ ವಿರುದ್ಧವೂ ಇದೇ ತಂತ್ರ ಹೂಡಿದರು.

ಇನ್ನೊಂದೆಡೆ 25 ರನ್‌ ಗಳಿಸಿದ್ದ ಪಂತ್‌, ಹೊಸ ಚೆಂಡನ್ನು ತೆಗೆದುಕೊಂಡ ನಂತರ ಹೊಡೆತಗಳಿಗೆ ಯತ್ನಿಸಿದರು. ಆದರೆ ಸೌಥಿ ಬೌಲಿಂಗ್‌ನಲ್ಲಿ ‘ಫ್ಲಿಕ್‌’ ಮಾಡುವ ಯತ್ನದಲ್ಲಿ ಫೈನ್‌ ಲೆಗ್‌ನಲ್ಲಿ ಬೌಲ್ಟ್‌ ಹಿಡಿದ ಕ್ಯಾಚಿಗೆ ನಿರ್ಗಮಿಸಬೇಕಾಯಿತು. ಒಟ್ಟಾರೆ ಕೊನೆಯ ಆರು ವಿಕೆಟ್‌ಗಳು 47 ರನ್‌ಗಳಿಗೆ ಬಿದ್ದವು.

ತಂಡಕ್ಕೆ ಬೌಲ್ಟ್‌ ಮತ್ತು ಸೌಥಿ ಪುನರಾಗಮನದ ಜೊತೆಗೆ ಪದಾರ್ಪಣೆ ಪಂದ್ಯದಲ್ಲಿ ಇನ್ನೊಬ್ಬ ವೇಗಿ ಕೈಲ್‌ ಜೇಮಿಸನ್‌ ಅವರ ಪ್ರದರ್ಶನವು ನ್ಯೂಜಿಲೆಂಡ್‌ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ‘ಲಂಬೂಜಿ’ ಜೇಮಿಸನ್‌ ಬ್ಯಾಟಿಂಗ್‌ನಲ್ಲೂ ಮಿಂಚಿ ಮೊದಲ ಇನಿಂಗ್ಸ್‌ನಲ್ಲಿ 44 ರನ್‌ ಗಳಿಸಿದ್ದರು. ವಿಶ್ವದ ಅಗ್ರಮಾನ್ಯ ಟೆಸ್ಟ್‌ ತಂಡವಾದ ಭಾರತ ಎರಡೂ ಇನಿಂಗ್ಸ್‌ಗಳಲ್ಲಿ 200ರೊಳಗೆ ಆಲೌಟ್‌ ಆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.